ಮಳವಳ್ಳಿ :
ಮಳವಳ್ಳಿಯ ಸಾರ್ವಜನಿಕ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಎಂದಿನಂತೆ ಬಿಜೆಪಿ, ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಮಳವಳ್ಳಿಯಲ್ಲಿ ಕಾಂಗ್ರೆಸ್ ಪಕ್ಷ ನರೇಂದ್ರಸ್ವಾಮಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದು, ಕೇವಲ ನರೇಂದ್ರಸ್ವಾಮಿ ಮಾತ್ರ ಇಲ್ಲಿ ಅಭ್ಯರ್ಥಿಯಲ್ಲ. ನೀವು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವ, ಕೆಪಿಸಿಸಿ ಅಧ್ಯಕ್ಷನಾಗಿ ನಾನು ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರನ್ನು ಅಭ್ಯರ್ಥಿ ಎಂದು ಪರಿಗಣಿಸಿ ಕಾಂಗ್ರೆಸ್ ಪಕ್ಷಕ್ಕೆ ಮತಹಾಕಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗ ಅಧಿಕಾರಕ್ಕೆ ಬಂದಂತೆ. ನಾವು ಕಳೆದ ಬಾರಿ ಉತ್ತಮ ಆಡಳಿತ ನೀಡಿದರೂ ಜನ ನಮಗೆ ಕೇವಲ 80 ಸ್ಥಾನ ಮಾತ್ರ ನೀಡಿದರು. ಮಂಡ್ಯ ಹಾಗೂ ಹಾಸನ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲಿಲ್ಲ. ಅದರ ಬಗ್ಗೆ ಇಂದು ವಿಮರ್ಶೆ ಮಾಡುವುದಿಲ್ಲ. ಇಂದು ನಿಮ್ಮ ಮಡಿಲಿಗೆ ನಮ್ಮ ಅಭ್ಯರ್ಥಿ ಹಾಕುತ್ತಿದ್ದೇವೆ.
ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಕುಮಾರಸ್ವಾಮಿ ಅವರಿಗೆ ಬೇಷರತ್ತಾಗಿ ಬೆಂಬಲ ನೀಡಿದೆವು. ಆದರೆ ಯೋಗಕ್ಕಿಂತ ಯೋಗಕ್ಷೇಮ ಮುಖ್ಯ. ಆದರೆ ಕುಮಾರಸ್ವಾಮಿ ಅವರು ತಮಗೆ ಸಿಕ್ಕ ಅಧಿಕಾರ ಉಳಿಸಿಕೊಳ್ಳಲು ವಿಫಲರಾದರು. ಇಂದು ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗದೆ, ಅಧಿಕಾರ ಕಳೆದುಕೊಂಡರು. ಪರಿಣಾಮ ಬಿಜೆಪಿ ಅಧಿಕಾರಕ್ಕೆ ಬಂದು ಈ ಎಲ್ಲಾ ಅನಾಹುತಗಳಿಗೆ ಕಾರಣವಾಗಿದೆ. ದೇವರು ನಮಗೆ ವರವನ್ನು ನೀಡುವುದಿಲ್ಲ. ಶಾಪವನ್ನು ನೀಡುವುದಿಲ್ಲ. ಕೇವಲ ಅಕಾಶ ಮಾತ್ರ ನೀಡುತ್ತಾನೆ. ಆ ಅವಕಾಶ ಯಾವ ರೀತಿ ಬಳಸಿಕೊಳ್ಳುತ್ತೀರಿ ಎಂಬುದು ಮುಖ್ಯ.
ಕಳೆದ ಮೂರುವರೆ ವರ್ಷ ಬಿಜೆಪಿ ಸರ್ಕಾರ ನೋಡಿದ್ದೀರಿ. ನಿಮ್ಮ ಬದುಕಿನಲ್ಲಿ ಏದರೂ ಬದಲಾವಣೆ ಆಗಿದ್ದರೆ, ಜೆಡಿಎಸ್ ಅವಧಿಯಲ್ಲಿ ನಿಮ್ಮ ಹೃದಯ ಗೆಲ್ಲಲು ಆಗಲಿಲ್ಲ. ಹೀಗಾಗಿ ಜನ ಬದಲಾವಣೆ ಬಯಸಿದ್ದಾರೆ. ಮೇ 10ರ ದಿನ ಕೇವಲ ಮತದಾನದ ದಿನವಲ್ಲ, ನಿಮ್ಮ ಭವಿಷ್ಯ ಬದಲಿಸುವ ದಿನ, ನಿಮ್ಮ ಕೈಗೆ ಶಕ್ತಿ ತುಂಬುವ ದಿನ. ಬಿಜೆಪಿ ರೈತರ ಸಾಲ ಮನ್ನಾ ಮಾಡುತ್ತೇವೆ, ನಿಮ್ಮ ಖಾತೆಗೆ 15 ಲಕ್ಷ ಹಾಕಿ ಅಚ್ಛೇ ದಿನ ನೀಡುತ್ತೇವೆ ಎಂದರು. ಆದರೆ ಅವರು ಕೊಟ್ಟ ಯಾವ ಮಾತನ್ನು ಉಳಿಸಿಕೊಳ್ಳಲಿಲ್ಲ.
ಬಿ ಸೋಮಶೇಖರ್, ಜಗದೀಶ್ ಶೆಟ್ಟರ್, ಸವದಿ, ಗೋಪಾಲಕೃಷ್ಣರಂತಹ ಹಿರಿಯ ನಾಯಕರುಗಳು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಕಾರಣ, ಈ ದೇಶದಲ್ಲಿ ಬದಲಾವಣೆ ತರುವ ಸಾಮರ್ಥ್ಯ ಇರುವುದು ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಎಂದು ನಂಬಿ ನಮ್ಮ ಪಕ್ಷ ಸೇರಿದ್ದಾರೆ ಎಂದು ಹೇಳಿದರು.
ಮಂಡ್ಯ ಹಾಗೂ ಹಾಸನದಲ್ಲಿ ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿ ಗೆಲ್ಲದಿದ್ದರೂ ವಿಧಾನ ಪರಿಷತ್ ಚುನಾವಣೆಯಲ್ಲಿ ಪದವೀಧರರ ಕ್ಷೇತ್ರ ಹಾಗೂ ಪಂಚಾಯತಿ ಸದಸ್ಯರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಜನ ಆಯ್ಕೆ ಮಾಡಿದ್ದಾರೆ. ಶ್ರೀಕಂಠೇಗೌಡರು ತಾವು ಸೋಲುತ್ತೇವೆ ಎಂದು ಹೇಳಿ ತಮ್ಮ ಸ್ಥಾನ ತ್ಯಾಗ ಮಾಡುತ್ತಾರೆ. 17 ಜೆಡಿಎಸ್ ಶಾಸಕರಿದ್ದರೂ ಈ ಚುನಾವಣೆಯಲ್ಲಿ ಕಾಂಗ್ರೆಸ್ ನ ಮಧು ಮಾದೇಗೌಡ ಹಾಗೂ ದಿನೇಶ್ ಗೂಳಿಗೌಡರು ಗೆಲವು ಸಾಧಿಸುತ್ತಾರೆ. ಈ ಮತದಾರರು ದಡ್ಡರೋ, ಬುದ್ಧಿವಂತರೋ ನೀವೇ ಆಲೋಚಿಸಿ.
ಕೆ.ಆರ್ ಪೇಟೆ ದೇವರಾಜ್, ಸೊರಬದ ಮಧು ಬಂಗಾರಪ್ಪ, ಅರಸಿಕೆರೆ ಶಿವಲಿಂಗೇಗೌಡರು, ಗುಬ್ಬಿ ಶ್ರೀನಿವಾಸ್, ಕೋಲಾರ ಶ್ರೀನಿವಾಸ ಗೌಡ ಸೇರಿದಂತೆ 20 ಕ್ಕೂ ಹೆಚ್ಚು ಜನ ನಾಯಕರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಅಲ್ಲಿಗೆ ಜೆಡಿಎಸ್ ಪಕ್ಷದ ಆಂತರಿಕ ಪರಿಸ್ಥಿತಿ ನೀವು ಅರ್ಥ ಮಾಡಿಕೊಳ್ಳಬೇಕು. ನರೇಂದ್ರಸ್ವಾಮಿ ಅಥವಾ ನಾನು ನೋವು ಮಾಡಿದ್ದರೆ ನೀವು ನಮ್ಮನ್ನು ಕ್ಷಮಿಸಬೇಕು. ನಾವು ನೀವೆಲ್ಲ ಖರ್ಗೆ ಅವರ ಕೈ ಬಲಪಡಿಸಬೇಕು ಎಂದರು.
ಕಾಂಗ್ರೆಸ್ ನಿಮ್ಮ ಬದುಕಿನ ಬಗ್ಗೆ ಆಲೋಚಿಸಿದರೆ, ಬಿಜೆಪಿ ಭಾವನೆಗಳ ಮೇಲೆ ರಾಜಕೀಯ ಮಾಡುತ್ತಿದೆ. ಕೋವಿಡ್ ಸಮಯದಲ್ಲಿ ನೀವು ಸಂಕಷ್ಟಕ್ಕೆ ಸಿಲುಕಿದಾಗ, ಕಾಂಗ್ರೆಸ್ ನಾಯಕರು ನಿಮ್ಮ ಜಮೀನಿನಲ್ಲಿದ್ದ ಬೆಳೆಗಳನ್ನು ಖರೀದಿ ಮಾಡಿ ರೈತರಿಗೆ ನೆರವಾಗಿದ್ದಾರೆ. ನನ್ನ ಮಿತ್ರ ಧೃವನಾರಾಯಣ ಅವರು ಡಿ.ಕೆ ಸುರೇಶ್ ಹಾಗೂ ನಾರಾಯಣಸ್ವಾಮಿ ಜತೆ ಸೇರಿ ಈ ಭಾಗದಲ್ಲಿ ಆರೋಗ್ಯ ಹಸ್ತ ಕಾರ್ಯಕ್ರಮ ಮಾಡಿದ್ದಾರು. ಇಂದು ಧೃವನಾರಾಯಣ್ ನಮ್ಮ ಜತೆ ಇಲ್ಲ.
ಬೆಲೆ ಏರಿಕೆಯಿಂದ ಎಲ್ಲಾ ಅಗತ್ಯವಸ್ತುಗಳು, ರಸಗೊಬ್ಬರ, ಹಸುಗಳ ಮೇವು ಎಲ್ಲದರ ಬೆಲೆ ಹೆಚ್ಚಾಗಿದೆ. ಬೆಲೆ ಏರಿಕೆ, ನಿರುದ್ಯೋಗದ ಸಮಸ್ಯೆಗಳಿಗೆ ಪರಿಹಾರ ನೀಡಲು ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿ ಯೋಜನೆ ಘೋಷಿಸಿದೆ. ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ ನೀಡಲಾಗುವುದು. ಆಮೂಲಕ ಪ್ರತಿ ಮನೆಗೆ ಸುಮಾರು 1500 ರೂ. ಉಳಿತಾಯವಾಗಲಿದೆ. ನಾನು ಇಂಧನ ಸಚಿವನಾಗಿದ್ದೆ. ಈ ಭಾಗದಲ್ಲಿ 200 ಕುಟುಂಬ ಹೊರತಾಗಿ ಉಳಿದವರು ಯಾರೂ ಕರೆಂಟ್ ಬಿಲ್ ಕಟ್ಟುವಂತಿಲ್ಲ. ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ ನೀಡಲು ನಿರ್ಧರಿಸಲಾಗಿದೆ. ಇನ್ನು ಅನ್ನಭಾಗ್ಯ ಯೋಜನೆ ಮೂಲಕ ಬಡ ಕುಟುಂಬಗಳ ಪ್ರತಿ ಸದಸ್ಯನಿಗೆ ತಿಂಗಳಿಗೆ ತಲಾ 10 ಕೆ.ಜಿ ಅಕ್ಕಿ ಉಚಿತವಾಗಿ ನೀಡಲಾಗುವುದು. ಇನ್ನು ನಿರುದ್ಯೋಗ ಯುವಕರಿಗಾಗಿ ಪದವೀಧರರಿಗೆ ಪ್ರತಿ ತಿಂಗಳು 3000 ಹಾಗೂ ಡಿಪ್ಲೋಮಾ ಪದವೀಧರರಿಗೆ 1500 ರೂ. ನಿರುದ್ಯೋಗ ಭತ್ಯೆ ನೀಡಲಾಗುವುದು. ಇನ್ನು ಸಾರ್ವಜನಿಕ ಬಸ್ ಗಳಲ್ಲಿ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವ ಯೋಜನೆಗಳನ್ನು ಪ್ರಕಟಿಸಲಾಗಿದೆ. ಮೇ 13ರಂದು ಫಲಿತಾಂಶ ಬಂದ ಮೇಲೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೊದಲ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗಳನ್ನು ಜಾರಿ ಮಾಡಲಾಗುವುದು.
ಇಂತಹ ಯೋಜನೆಗಳನ್ನು ಬಿಜೆಪಿ, ಜೆಡಿಎಸ್ ಪಕ್ಷದವರು ನೀಡಲು ಸಾಧ್ಯವೇ? ಪ್ರಧಾನಮಂತ್ರಿಗಳು ಈ ಯೋಜನೆಗಳನ್ನು ಬೋಗಸ್ ಎಂದಿದ್ದಾರೆ. ನಾನು ನಿಮ್ಮ ಪಕ್ಷದ ಕ್ಷೇತ್ರದವನು. ನಿಮ್ಮ ರಕ್ತ ಹಂಚಿಕೊಂಡು ಹುಟ್ಟಿದ್ದೇನೆ. ನಾವು ಈ ಐದು ಯೋಜನೆ ಜಾರಿ ಮಾಡದಿದ್ದರೆ ಮತ್ತೆ ನಿಮ್ಮ ಮುಂದೆ ಮತ್ತೆ ಮತ ಕೇಳುವುದಿಲ್ಲ. ಈ ಯೋಜನೆಗಳಿಂದ ಪ್ರತಿ ಕುಟುಂಬಕ್ಕೆ ಐದು ವರ್ಷಗಳಲ್ಲಿ 4-5 ಲಕ್ಷದಷ್ಟು ಆರ್ಥಿಕ ನೆರವು ಸಿಗಲಿದೆ.
ಬಿಜೆಪಿ ನುಡಿದಂತೆ ನಡೆದಿಲ್ಲ. ಅವರು ಕೊಟ್ಟ ಭರವಸೆ ಈಡೇರಿಸಿಲ್ಲ. ನಾನು ಇಂಧನ ಸಚಿವನಾಗಿದ್ದಾಗ ರಾಜ್ಯದಲ್ಲಿ 10 ಸಾವಿರ ಮೆ.ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿತ್ತು. ಅಧಿಕಾರದಿಂದ ಕೆಳಗೆ ಇಳಿಯುವಾಗ ಅದನ್ನು 20 ಸಾವಿರ ಮೆ.ವ್ಯಾಟ್ ಗೆ ಏರಿಕೆ ಮಾಡಿದ್ದೆ.
ನೀವು ನಿಮ್ಮ ಮತ ಮಾರಬೇಡಿ. ಅನ್ನದಾನಿ ನನ್ನ ಸ್ನೇಹಿತ. ಆತ ಹಾಡಿಕೊಂಡು ಇರಲಿ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕಾ ಅಧಿಕಾರದಲ್ಲಿದ್ದರೆ ಚೆಂದ. ಹೀಗಾಗಿ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿ ನಿಮ್ಮ ಹಾಗೂ ರಾಜ್ಯದ ಜನರ ಸೇವೆಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಮಾಜಿ ಸಚಿವರಾದ ಬಿ ಸೋಮಶೇಖರ್, ನರೇಂದ್ರ ಸ್ವಾಮಿ ಮತ್ತಿತರರು ಭಾಗವಹಿಸಿದ್ದರು.