ಬೆಳಗಾವಿ :
ಚಿಕ್ಕೋಡಿ ತಾಲೂಕು ಹಿರೇಕೋಡಿ ನಂದಿ ಪರ್ವತ ಆಶ್ರಮದಲ್ಲಿ ವಾಸವಾಗಿದ್ದ ಜೈನ ಮುನಿ ಕಾಮ ಕುಮಾರ ನಂದಿ ಮಹಾರಾಜ(51) ರ ಅಂತ್ಯಕ್ರಿಯೆ ಜುಲೈ 9ರಂದು(ಭಾನುವಾರ) ನಡೆಯಲಿದೆ.
ಹಿರೇಕೋಡಿ ಆಶ್ರಮದಲ್ಲಿ ಮಧ್ಯಾಹ್ನ ಸುಮಾರಿಗೆ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ನಂದಿಪರ್ವತ ಆಶ್ರಮ ಟ್ರಸ್ಟ್ ಅಧ್ಯಕ್ಷ ಡಾ. ಭೀಮಪ್ಪ ಉಗಾರೆ ತಿಳಿಸಿದ್ದಾರೆ.
ಕಾಮ ಕುಮಾರ ಮಹಾರಾಜರು ಯಾರಿಗೂ ಅನ್ಯಾಯ ಮಾಡಿದವರಲ್ಲ. ಅವರನ್ನು ಭೀಕರವಾಗಿ ಕೊಲೆ ಮಾಡಿರುವುದು ಖಂಡನೀಯ. ಸದಾ ಜಗತ್ತಿನ ಸುಖ ಶಾಂತಿಗೆ ಪ್ರಾರ್ಥಿಸುತ್ತಿದ್ದರು. ಅಂತಹ ಸ್ವಾಮೀಜಿಯನ್ನೇ ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಆಗ್ರಹ :
ಕಾಮಕುಮಾರನಂದಿ ಮಹಾರಾಜರು ಶಾಂತಿ ಪ್ರಿಯರಾಗಿದ್ದು ಅವರ ಅಮಾನುಷ ಕೊಲೆ ಸಮಾಜವನ್ನು ದಿಗಿಲುಗೊಳಿಸಿದೆ ಎಂದು ಜೈನ ಸಮಾಜದ ಮುಖಂಡರಾದ ವೀಣಾ ಪಟ್ಟಣಕುಡಿ ಹೇಳಿದರು. ಅವರು ಧರ್ಮಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದವರು. ಸಲ್ಲೇಖನ ಅಥವಾ ಸಮಾಧಿ ಸ್ಥಿತಿ ಮೂಲಕ ಅವರು ಪ್ರಾಣ ತ್ಯಜಿಸಲು ಬಯಸಿದವರು. ಆದರೆ ಅವರನ್ನೇ ಕೊಲೆ ಮಾಡಲಾಗಿದೆ. ಮುನಿಗಳು ಸರ್ವ ಧರ್ಮದವರನ್ನು ಗೌರವಿಸುತ್ತಿದ್ದರು. ಆಶ್ರಮದಲ್ಲಿ ಅನ್ಯ ಧರ್ಮದ ವ್ಯಕ್ತಿಗಳಿಗೂ ಕೆಲಸ ನೀಡಿದ್ದರು. ಆದರೆ ಅವರ ಒಳ್ಳೆಯತನವನ್ನೇ ದುರುಪಯೋಗ ಮಾಡಿಕೊಂಡು ಹತ್ಯೆ ಮಾಡಿದ್ದಾರೆ. ಮುನಿಗಳು ಸಹಾಯ ಮಾಡಿದ್ದರ ಪ್ರತಿಯಾಗಿ ಅವರ ಜೀವ ತೆಗೆದಿದ್ದಾರೆ. ಇದು ಅತ್ಯಂತ ಕ್ರೂರ ಮನಸ್ಥಿತಿಯ ವ್ಯಕ್ತಿಯ ಕೃತ್ಯವಾಗಿದೆ. ಯಾವುದೇ ಧರ್ಮದ ಯಾವುದೇ ಸನ್ಯಾಸಿಗಳಿಗೂ ಇಂತಹ ಅನ್ಯಾಯ ಆಗಬಾರದು. ಪ್ರಕರಣದ ತನಿಖೆ ಮಾಡಿ ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗುವಂತೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಮುನಿಗಳ ಪೂರ್ವಾಶ್ರಮದ ಸಂಬಂಧಿ ಪ್ರದೀಪ್ ನಂದಗಾವ್ ಮಾತನಾಡಿ, ಜುಲೈ 5 ರಂದು ಮಹಾರಾಜರು ಕಾಣೆಯಾಗಿದ್ದಾರೆ, ಕೊಲೆ ಆರೋಪಿ ಸಹ ನಮ್ಮೊಂದಿಗೆ ಬಂದು ಹುಡುಕಾಡುವ ನಾಟಕ ಮಾಡಿದ್ದ ಎಂದು ಆರೋಪಿಸಿದರು.
ಜೈನ ಮುನಿಗಳಿಗೆ ರಕ್ಷಣೆ ಭರವಸೆ ನೀಡುವವರೆಗೂ ಉಪವಾಸ ಸತ್ಯಾಗ್ರಹ :
ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಹಿರೇಕೋಡಿಯಲ್ಲಿ ಜೈನ ಮುನಿಯ ಕೊಲೆ ಮಾಡಿರುವುದು ನಿಜಕ್ಕೂ ಖಂಡನೀಯ. ಜೈನ ಮುನಿಗಳಿಗೆ ರಕ್ಷಣೆ ಇಲ್ಲವಾಗಿದೆ. ರಕ್ಷಣೆಯ ಲಿಖಿತ ಭರವಸೆ ನೀಡುವವರೆಗೂ ಆಮರಣ ಉಪವಾಸ ನಡೆಸುವುದಾಗಿ ಆಚಾರ್ಯ ಗುಣಧರನಂದಿ ಮಹಾರಾಜರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರು ಹಾಕಿದ ಅವರು, ಜೈನ ಮುನಿಗಳ ಹತ್ಯೆ ನಡೆದಿರುವುದರಿಂದ ನಮಗೂ ಭಯ ಕಾಡುತ್ತಿದೆ. ಕೇವಲ ಜೈನ ಮುನಿಗಳಿಗೆ ಅಷ್ಟೇ ಅಲ್ಲದೆ ಸಕಲ ಸಮಾಜಕ್ಕೂ ಜೀವ ಭಯ ಕಾಡುತ್ತಿದೆ. ಸರಕಾರಕ್ಕೆ ನಮ್ಮಂತ ಅಲ್ಪಸಂಖ್ಯಾತರು ಬೇಡವಾಗಿದೆ. ಜೈನ ಮುನಿಗಳಿಗೆ ರಕ್ಷಣೆ ಕೊಡಬೇಕು. ಸರಕಾರ ಲಿಖಿತ ಭರವಸೆ ಕೊಡುವವರೆಗೂ ಅನ್ನ ಆಹಾರ ತ್ಯಾಗ ಮಾಡುತ್ತೇನೆ. ಪ್ರಾಣ ಹೋಗುವರೆಗೆ ಸಲ್ಲೇಖನ ಮಾಡುತ್ತೇನೆ. ಸರಕಾರ ರಕ್ಷಣೆಯ ಲಿಖಿತ ಭರವಸೆ ನೀಡಬೇಕು ಎಂದು ಮನವಿ ಮಾಡಿದರು.