ಬೆಳಗಾವಿ :
ನರೇಂದ್ರ ಮೋದಿ ಎಂಬ ಗ್ಯಾರಂಟಿ ದೇಶಕ್ಕೆ ಬೇಕಾಗಿದೆ ಎಂದು ಜನ ಹೇಳುತ್ತಿದ್ದಾರೆ. ಕಾರ್ಯಕರ್ತರ ಉತ್ಸಾಹ ನೋಡಿದರೆ ಇದು ಗೊತ್ತಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದರು.
ಬೆಳಗಾವಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸುಳ್ಳು ಗ್ಯಾರಂಟಿಯನ್ನು ಬಿಂಬಿಸುವ ಕೆಲಸ ಮಾಡಿತು. ಆದರೆ, ದೇಶದ ಜನ ಕಾಂಗ್ರೆಸ್ಸಿನ ಸುಳ್ಳು ಗ್ಯಾರಂಟಿ ನಂಬುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಕಾಂಗ್ರೆಸ್ಸಿಗೆ ಹೀನಾಯ ಸೋಲಾಗಿದೆ ಎಂದು ಅವರು ವಿಶ್ಲೇಷಿಸಿದರು.
ಬೆಳಗಾವಿ ಅಧಿವೇಶನ ಈ ಭಾಗದ ಜನರ ಸಮಸ್ಯೆಗೆ ಉತ್ತರ ನೀಡುವಂತಾಗಲಿ. ಕೃಷಿ ಹಾಗೂ ಕಬ್ಬು ಬೆಳೆಗಾರರ ಪಾಲಿಗೆ ಸಿದ್ದರಾಮಯ್ಯ ಸರಕಾರ ಸಿಹಿ ನೀಡಲಿ. ಈ ಸರಕಾರದಿಂದ ಜನರ ಸಮಸ್ಯೆಗಳಿಗೆ ಉತ್ತರ ಪಡೆಯುವ ಕೆಲಸ ಮಾಡುತ್ತೇವೆ. ಯಡಿಯೂರಪ್ಪ ಅವರು ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸುವರ್ಣ ವಿಧಾನಸೌಧವನ್ನು ನಿರ್ಮಿಸಿದ್ದರು. ಈ ಭಾಗದ ಒಟ್ಟಾರೆ ಅಭಿವೃದ್ಧಿ ನಮ್ಮ ಪಕ್ಷದ ಗುರಿಯಾಗಿದೆ ಎಂದು ಅವರು ಹೇಳಿದರು.