ಬೆಳಗಾವಿ : ಸಚಿವ ಸತೀಶ ಜಾರಕಿಹೊಳಿ ಅವರು ಕೆಪಿಸಿಸಿ ಹಾಗೂ ಬೆಳಗಾವಿ ಜಿಲ್ಲೆಯ ನೂತನ ಕಾಂಗ್ರೆಸ್ ಅಧ್ಯಕ್ಷರ ನೇಮಕದ ವಿಷಯವಾಗಿ ಮಾತನಾಡಿದ್ದಾರೆ.
ಕೆಪಿಸಿಸಿಗೆ ನೂತನ ಅಧ್ಯಕ್ಷರ ನೇಮಕ ಮಾಡುವುದು ಪಕ್ಷದ ಹೈಕಮಾಂಡ್ಗೆ ಬಿಟ್ಟದ್ದು. ಈ ಕುರಿತು ಪಕ್ಷ, ಹೈಕಮಾಂಡ್ ಹಂತದಲ್ಲಿ ಚರ್ಚೆಯಾಗಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಪತ್ರಕರ್ತರ ಜೊತೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಗ್ರಾಮೀಣ ಕಮೀಟಿ ಅಧ್ಯಕ್ಷರ ನೇಮಕ ಸಂಬಂಧ ಒಬ್ಬರ ಹೆಸರಿನ ಪ್ರಸ್ತಾವನೆಯನ್ನು ಪಕ್ಷಕ್ಕೆ ಕಳುಹಿಸಲಾಗಿದೆ. ಈ ಸಂಬಂಧ ಎಲ್ಲರು ಚರ್ಚೆ ಮಾಡಿ ಒಬ್ಬರ ಹೆಸರು ಅಂತಿಮ ಮಾಡಿ ವರಿಷ್ಠರಿಗೆ ಕೊಟ್ಟಿದ್ದೇವೆ. ಪಕ್ಷದ ಕೆಲಸಕ್ಕೆ ಯಾರು ಹೆಚ್ಚು ಸಮಯ ಕೊಡುತ್ತಾರೋ ಅಂತಹ ವ್ಯಕ್ತಿಯ ಹೆಸರನ್ನು ಕೊಡಲಾಗಿದೆ. ಬೆಳಗಾವಿ ಮತ್ತು ಚಿಕ್ಕೋಡಿ ಎರಡೂ ಅಧ್ಯಕ್ಷರ ಬದಲಾವಣೆ ಮಾಡುತ್ತೇವೆ.
ಬೆಳಗಾವಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪ್ರಭಾವಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಪುತ್ರ ಮೃಣಾಲ್ ಹೆಬ್ಬಾಳಕರ ಅವರ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಒಂದೇ ಹೆಸರು ಕೊಟ್ಟಿದ್ದೇವೆ. ಪಕ್ಷ ಸಂಘಟನೆಗೆ ಹೆಚ್ಚು ಸಮಯ ನೀಡಬೇಕು. ಅಧ್ಯಕ್ಷರಾದವರು ಕಾಂಗ್ರೆಸ್ ಕಚೇರಿಯಲ್ಲಿ ಹೆಚ್ಚು ಇರಬೇಕು. ಕಾರ್ಯಕರ್ತರ ಜೊತೆಗೆ ನಿರಂತರ ಸಂಪರ್ಕ ಹೊಂದಿರಬೇಕು. ಇದು ಮಾನದಂಡವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸಾಮಾನ್ಯ ಕಾರ್ಯಕರ್ತರಿಗೆ ಜಿಲ್ಲಾಧ್ಯಕ್ಷ ಸ್ಥಾನ ಕೊಡಿಸಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.
ಚಿಕ್ಕೋಡಿ ಜಿಲ್ಲಾಧ್ಯಕ್ಷರ ನೇಮಕವನ್ನೂ ಮಾಡಲಾಗುವುದು. ಕಾರ್ಯಕರ್ತರ ನಡುವೆ ನಿಕಟ ಸಂಪರ್ಕ ಹೊಂದಿರುವವರು, ಕಾಂಗ್ರೆಸ್ ಕಚೇರಿಯಲ್ಲಿದ್ದು, ಪಕ್ಷಕ್ಕೆ ಹೆಚ್ಚು ಸಮಯ ಕೊಡಬೇಕು ಎಂಬ ಮಾನದಂಡದ ಮೇರೆಗೆ ಸಾಮಾನ್ಯ ಕಾರ್ಯಕರ್ತರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲಾಗುವುದು ಎಂದು ಹೇಳಿದರು.
ನಿಗಮ ಮಂಡಳಿಗೆ ನೇಮಕ ಮಾಡುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕಾರ ಇದೆ. ಈಗಾಗಲೇ ಶೇ.70 ಆಗಿದೆ. ಶೇ.30 ಇದೆ. ನಮ್ಮ ಮೇಲೆ ಜವಾಬ್ದಾರಿ ಇರುವುದು ನಿರ್ದೇಶಕರ ನೇಮಕ ಮಾಡುವುದು. ಗೃಹ ಸಚಿವ ಡಾ.ಜಿ.ಪರಮೇಶ್ವರ ನೇತೃತ್ವದಲ್ಲಿ ಕಮಿಟಿ ಇದೆ. ಹಂತ ಹಂತವಾಗಿ ನೇಮಕ ಮಾಡಲಾಗುವುದು ಎಂದ ಅವರು, ಬೆಳಗಾವಿ ಜಿಲ್ಲೆಯ ವಿಭಜನೆ ಮಾಡುವ ವಿಷಯ ಬಜೆಟ್ನಲ್ಲಿ ಇಲ್ಲ. ಹೊಸ ಜಿಲ್ಲೆಯಾಗಬೇಕು ಎಂಬ ಬೇಡಿಕೆ ಇದೆ. ಎಲ್ಲ ರೀತಿಯಿಂದ ಒಮ್ಮತ ಬರಬೇಕಷ್ಟೇ ಎಂದರು.