ಬೆಳಗಾವಿ: ಬೆಳಗಾವಿಯ ಸಚಿವರಾದ ಸತೀಶ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಶನಿವಾರ ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೆಲ ಹೊತ್ತು ಜಟಾಪಟಿ ನಡೆದಿರುವ ಬಗ್ಗೆ ವರದಿಯಾಗಿದೆ.
ಇದು ವಿಕೋಪಕ್ಕೆ ಹೋಗುತ್ತಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯ ಡಿ.ಕೆ. ಶಿವಕುಮಾರ್ ಅವರು ಮಧ್ಯಪ್ರವೇಶಿಸಿ ಇಬ್ಬರನ್ನು ಸಮಾಧಾನಗೊಳಿಸಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಳಗಾವಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಚೇರಿಯನ್ನು ಲಕ್ಷ್ಮಿ ಹೆಬ್ಬಾಳಕರ್ ಕಟ್ಟಿದ್ದಾರೆ ಎಂದು ಹೇಳಿದರು. ಅಗ ಮೈಕ್ ಹಿಡಿದುಕೊಂಡ ಸಚಿವ ಸತೀಶ ಜಾರಕಿಹೊಳಿ ಅವರು ಪದೇ ಪದೇ ಲಕ್ಷ್ಮಿ ಹೆಬ್ಬಾಳಕರ ಕಟ್ಟಿದರು ಎಂದು ಇತರರನ್ನು ಅವಮಾನಿಸಬೇಡಿ. ಕಚೇರಿ ಕಟ್ಟಲು ನಾನು ಮೂರು ಕೋಟಿ ರೂಪಾಯಿ ನೀಡಿದ್ದೇನೆ. ರಮೇಶ ಜಾರಕಿಹೊಳಿ ಅವರು ಕಟ್ಟಡಕ್ಕೆ ಜಾಗ ಕೊಟ್ಟಿದ್ದರು ಎಂದು ತಿರುಗೇಟು ನೀಡಿದ್ದಾರೆ ಎಂದು ಖಚಿತ ಮೂಲಗಳು ತಿಳಿಸಿವೆ. ಈ ನಡುವೆ ಮಧ್ಯ ಪ್ರವೇಶ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ನಾನು ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಆದ ನಂತರ 10 ವರ್ಷಗಳಿಂದ ಬಾಕಿ ಇದ್ದ ವಿದ್ಯುತ್ ಬಿಲ್ ಪಾವತಿ ಮಾಡಿದ್ದೇನೆ ಎಂದರು. ಆಗ ಸಚಿವರ ನಡುವೆ ವಾದ ಮುಂದುವರಿಯುವ ಸಾಧ್ಯತೆ ಗಮನಿಸಿದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಮಧ್ಯ ಪ್ರವೇಶ ಮಾಡಿ ತಿಳಿಗೊಳಿಸಿದ್ದಾರೆ.