ಬೆಳಗಾವಿ : ಪಶ್ಚಿಮಘಟ್ಟ ಅತಿ ಸೂಕ್ಷ್ಮ ವಲಯ ಎಂದು ಗುರುತಿಸಿಕೊಂಡಿದೆ. ಕರ್ನಾಟಕದ ಪಶ್ಚಿಮ ಭಾಗದಲ್ಲಿ ಹಾದು ಹೋಗಿರುವ ಇದು ರಾಜ್ಯದ ಹವಾಮಾನವನ್ನು ನಿರ್ಧರಿಸುವ ಪ್ರಮುಖ ಪರಿಸರ ವಲಯವಾಗಿದೆ. ಹಲವು ಜಿಲ್ಲೆಗಳ ಜನತೆ ಪ್ರಧಾನವಾಗಿ ಇದರ ಮೇಲೆ ಅವಲಂಬಿಸಿದ್ದಾರೆ. ಅದರಲ್ಲೂ ಪ್ರಮುಖವಾಗಿ ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಗಳ ಮಧ್ಯೆ ನೇರವಾಗಿ ಹಾದು ಹೋಗುವ ಪಶ್ಚಿಮ ಘಟ್ಟ ಕರ್ನಾಟಕದ ಅಸ್ತಿತ್ವದ ಪ್ರಶ್ನೆಯಾಗಿದೆ.
ಪಶ್ಚಿಮ ಘಟ್ಟ ಕುರಿತ ಕಸ್ತೂರಿ ರಂಗನ್ ವರದಿ ಜನರ ಪಾಲಿಗೆ ತೂಗುಗತ್ತಿಯಾಗಿದೆ. ಇದನ್ನು ಯಾವುದೇ ಕಾರಣಕ್ಕೂ ಅನುಷ್ಠಾನಗೊಳಿಸಬಾರದು ಎನ್ನುವುದು ನಾಡಿನ ಜನತೆಯ ಆಶಯವಾಗಿದೆ. ಇದೀಗ ಪಶ್ಚಿಮಘಟ್ಟ ಪ್ರದೇಶದ ಜನ ಜನಾದೋಲನಕ್ಕೆ ಸಜ್ಜಾಗುತ್ತಿದ್ದಾರೆ. ಈ ನಡುವೆ ಕರ್ನಾಟಕ ಸರಕಾರ ಯಾವ ಕಾರಣಕ್ಕೂ ಇದನ್ನು ಅನುಷ್ಠಾನಗೊಳಿಸಲು ತಾನು ಶಿಫಾರಸು ಮಾಡುವುದಿಲ್ಲ ಎಂದು ತನ್ನ ನಿರ್ಧಾರವನ್ನು ಇದೀಗ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಎಂದಿನಂತೆ ಮತ್ತೆ ತನ್ನ ವಿರೋಧವನ್ನು ವ್ಯಕ್ತಪಡಿಸಿದೆ.
ಪಶ್ಚಿಮ ಘಟ್ಟಗಳ ಕುರಿತ ಡಾ.ಕೆ ಕಸ್ತೂರಿರಂಗನ್ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸುವ ತನ್ನ ನಿರ್ಧಾರಕ್ಕೆ ಬದ್ಧವಾಗಿರಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.
ಡಾ.ಕೆ ಕಸ್ತೂರಿರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯತಂಡದ ವರದಿಯ ಆಧಾರದ ಮೇಲೆ ಕೇಂದ್ರ ಸರ್ಕಾರ ಪಶ್ಚಿಮ ಘಟ್ಟಗಳನ್ನು ಪರಿಸರ ಸೂಕ್ಷ್ಮ ಪ್ರದೇಶ (ಇಎಸ್ಎ) ಎಂದು ಘೋಷಿಸುತ್ತದೆ. ಆಗ ಅಲ್ಲಿ ಮಾನವ ಹಸ್ತಕ್ಷೇಪ ಮಾಡುವ ಹಾಗೇ ಇಲ್ಲ. ಇಡೀ ಭೂ ಭಾಗ ರಾಜ್ಯದ ನಿಯಂತ್ರಣದಿಂದ ಕೇಂದ್ರದ ಸುಪರ್ದಿಗೆ ಹೋಗುತ್ತದೆ. ಈ ಬಗ್ಗೆ ಸಚಿವ ಸಂಪುಟವು ವಿಸ್ತೃತ ಚರ್ಚೆ ನಡೆಸಿದ್ದು ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಲು ನಿರ್ಧರಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ತಿಳಿಸಿದ್ದಾರೆ.
ಮಾನವನ ಹಸ್ತಕ್ಷೇಪದಿಂದ ಪಶ್ಚಿಮ ಘಟ್ಟ ಪರಿಸರಕ್ಕೆ ಧಕ್ಕೆ ಉಂಟಾಗುತ್ತಿದೆ. ಆ ಮೂಲಕ ಜೀವ ಸಂಕುಲಕ್ಕೂ ಅಪಾಯ ಎದುರಾಗಲಿದೆ ಎಂದು ಪರಿಸರ ತಜ್ಞರ ಆತಂಕದ ನಂತರ ಕಸ್ತೂರಿ ರಂಗನ್ ವರದಿಯನ್ನು ಸಿದ್ಧಪಡಿಸಲಾಗಿತ್ತು. ಆದರೆ ಭಾರಿ ವಿರೋಧ ಮಧ್ಯೆ ಗುರುವಾರದ ಸಂಪುಟ ಸಭೆಯಲ್ಲಿ ವರದಿಯನ್ನು ತಿರಸ್ಕಾರ ಮಾಡಲಾಗಿದೆ.
ಇತ್ತೀಚೆಗೆ ಅರಣ್ಯ ಇಲಾಖೆ ಆಯೋಜಿಸಿದ್ದ ಸಮಾಲೋಚನೆಯಲ್ಲಿ, ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶದ (ಇಎಸ್ಎ) ಹೊರಡಿಸಲಾಗಿದ್ದ ಆರನೇ ಕರಡು ಅಧಿಸೂಚನೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು.
ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಾದ್ಯಂತ ಪಶ್ಚಿಮ ಘಟ್ಟಗಳ 56,825.7 ಚದರ ಕಿಲೋಮೀಟರ್ಗಳನ್ನು ಪರಿಸರ ಸೂಕ್ಷ್ಮ ಎಂದು ಘೋಷಿಸಲು ಕೇಂದ್ರ ಪರಿಸರ ಸಚಿವಾಲಯವು 2014ರ ಮಾರ್ಚ್ ನಿಂದ ಆರು ಕರಡು ಅಧಿಸೂಚನೆಗಳನ್ನು ಹೊರಡಿಸಿದೆ. ಆದರೆ, ಈ ರಾಜ್ಯಗಳ ಆಕ್ಷೇಪದಿಂದಾಗಿ ಇನ್ನೂ ಅಂತಿಮ ಅಧಿಸೂಚನೆ ಹೊರಡಿಸಿಲ್ಲ.
ಅಧಿಸೂಚನೆಯು ಗುಜರಾತ್ನಲ್ಲಿ 449 ಚದರ ಕಿಲೋಮೀಟರ್, ಮಹಾರಾಷ್ಟ್ರದಲ್ಲಿ 17,340 ಚದರ ಕಿಲೋಮೀಟರ್, ಗೋವಾದಲ್ಲಿ 1,461 ಚದರ ಕಿಲೋಮೀಟರ್, ಕರ್ನಾಟಕದಲ್ಲಿ 20,668 ಚದರ ಕಿಲೋಮೀಟರ್, ತಮಿಳುನಾಡಿನಲ್ಲಿ 6,914 ಚದರ ಕಿಲೋಮೀಟರ್ ಮತ್ತು ಕೇರಳದಲ್ಲಿ 9,993.7 ಚದರ ಕಿಲೋಮೀಟರ್ಗಳನ್ನು ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶದ (ಇಎಸ್ಎ) ಆಗಿ ಘೋಷಿಸಲು ಪ್ರಸ್ತಾಪಿಸಿದೆ.
*********************
ಕಸ್ತೂರಿ ರಂಗನ್ ವರದಿ ಜಾರಿಗೆ ಕೇಂದ್ರ ಸರ್ಕಾರ ಹೊರಡಿಸಿದ ಕರಡು ಅಧಿಸೂಚನೆಯನ್ನು ತಿರಸ್ಕರಿಸುವ ತೀರ್ವನವನ್ನು ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡಿದ್ದು ಅದಕ್ಕಾಗಿ ರಾಜ್ಯ ಸರ್ಕಾರವನ್ನು ಅಭಿನಂದಿಸುತ್ತೇವೆ. ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರ ಪದೇಪದೆ ಕರಡು ಅಧಿಸೂಚನೆ ಹೊರಡಿಸುತ್ತಿರುವುದು ಮಲೆನಾಡು, ಕರಾವಳಿ ಜನರ ನಿದ್ದೆಗೆಡಿಸಿದೆ. ಕಳೆದ ಬಾರಿ ಕೇಂದ್ರ ಪರಿಸರ ಇಲಾಖೆ ಕರೆದ ಸಭೆಗೆ ಈ ಭಾಗದ ಯಾವ ಸಂಸದರು ಭಾಗವಹಿಸದೆ ಇರುವುದು ವಿಪರ್ಯಾಸ. ಮಲೆನಾಡು, ಕರಾವಳಿ ಭಾಗಗಳಲ್ಲಿ ತಮ್ಮ ತಮ್ಮ ಲೋಕಸಭಾ ಕ್ಷೇತ್ರದ ಕಾಳಜಿ ಇಲ್ಲದ ಸಂಸದರನ್ನು ಹಲವು ವರ್ಷಗಳಿಂದ ಆಯ್ಕೆ ಮಾಡುತ್ತಿರುವ ಪರಿಣಾಮ ನಮ್ಮನ್ನೆಲ್ಲ ಸಂಕಷ್ಟಕ್ಕೆ ದೂಡುತ್ತಿದ್ದಾರೆ.
*ಅನಿಲ್ ಹೊಸಕೊಪ್ಪ, ರಾಜ್ಯ ಸಂಚಾಲಕ, ಮಲೆನಾಡು ಕರಾವಳಿ ಜನಪರ ಒಕ್ಕೂಟ