ದೀಪಾವಳಿ ಹಬ್ಬದ ಪ್ರಯುಕ್ತ
ಪ್ರಖ್ಯಾತ ವೈದ್ಯ ಡಾ.ರವಿ ಪಾಟೀಲ ಹೆಸರಿನಲ್ಲಿ ಮನೆಮನೆಗೆ ಹಣತೆಗಳನ್ನು ವಿತರಿಸುವ ಕಾರ್ಯ ಅತ್ಯಂತ ವ್ಯವಸ್ಥಿತವಾಗಿ ನಡೆದಿದೆ. ಬೆಳಗಾವಿ ಉತ್ತರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಮನೆಮನೆಗೆ ಹಣತೆಗಳನ್ನು ವಿತರಿಸಿರುವುದು ಇದೀಗ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ಏಕಾಏಕಿ ಯಾವುದೇ ಫಲಾಪೇಕ್ಷೆಯಿಲ್ಲದೆ ಯಾರೊಬ್ಬರೂ ಕಿರುಕಾಣಿಕೆಗಳನ್ನು ವಿತರಿಸುವುದಿಲ್ಲ. ಆದರೆ, ಇದೀಗ ಡಾ. ರವಿ ಪಾಟೀಲ ಕಿರು ಕಾಣಿಕೆ ನೀಡಲು ಮುಂದಾಗಿರುವುದು ಜನರಲ್ಲಿ ಚರ್ಚೆ ಹುಟ್ಟು ಹಾಕುವಂತಾಗಿದೆ. -ಸಂಪಾದಕ
ಬೆಳಗಾವಿ :
ವಿಧಾನಸಭೆ ಚುನಾವಣೆ ಹೊಸ್ತಿಲಲ್ಲೇ ಇದೀಗ ಮುಂದಿನ ಶಾಸಕರಾಗಬೇಕು ಎಂದು ಬಯಸುವವರು ಮನೆಮನೆಗೆ ಗಿಫ್ಟ್ ನೀಡಲು ಮುಂದಾಗುತ್ತಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.
ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ಬೆಳಗಾವಿಯ ಪ್ರಖ್ಯಾತ ವೈದ್ಯ, ಬಿಜೆಪಿ ವೈದ್ಯಕೀಯ ವಿಭಾಗದ ಅಧ್ಯಕ್ಷ ಡಾ. ರವಿ ಪಾಟೀಲ ಸಾಕಷ್ಟು ಸಮಾಜ ಸೇವಾ ಚಟುವಟಿಕೆಗೆ ನಡೆಸಿದ್ದರು. ಪಕ್ಷಿಗಳಿಗೆ ನೀರಿಡಲು ಸಿಮೆಂಟ್ ಟ್ಯಾಂಕ್, ಉಚಿತ ಆರೋಗ್ಯ ಶಿಬಿರ ಸೇರಿದಂತೆ ಹಲವು ಸೇವಾ ಕಾರ್ಯ ನಡೆಸಿ ಸಾರ್ವಜನಿಕರ ಗಮನ ಸೆಳೆಯುವ ಪ್ರಯತ್ನ ನಡೆಸಿದ್ದರು. ಬಿಜೆಪಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರಿಗೆ ಕೊನೆ ಕ್ಷಣದಲ್ಲಿ ಟಿಕೆಟ್ ತಪ್ಪಿತ್ತು. ವಿಧಾನಸಭಾ ಚುನಾವಣೆ ನಂತರ ಬಹುತೇಕ ಅವರು ತೆರೆಮರೆಗೆ ಸರಿದಿದ್ದರು. ಆದರೆ ಇದೀಗ ಕೆಲವೇ ತಿಂಗಳುಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಹೀಗಾಗಿ ಅವರು ಇದೀಗ ಮನೆ ಮನೆಗೆ ವಿತರಣೆ ಮಾಡುತ್ತಿರುವ ಕಿರುಕಾಣಿಕೆ ಸಾರ್ವಜನಿಕ ವಲಯದಲ್ಲಿ ಮತ್ತೆ ಚರ್ಚೆ ಹುಟ್ಟುಹಾಕಿದೆ.
ಡಾ. ರವಿ ಪಾಟೀಲ ಮತ್ತೆ ಬೆಳಗಾವಿ ಉತ್ತರ ಮತ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರೋ ಎಂಬ ಚರ್ಚೆಗಳು ಮತ್ತೆ ಹರಿದಾಡಲು ಕಾರಣವಾಗಿದೆ.
ಹಾಲಿ ಬಿಜೆಪಿ ಶಾಸಕ ಅನಿಲ ಬೆನಕೆ ಅವರಿಗೆ ಬಿಜೆಪಿ ಮತ್ತೆ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಿದೆ. ಹಾಲಿ ಶಾಸಕರೆಂಬ ನೆಲೆಯಲ್ಲಿ ಅವರಿಗೆ ಬಿಜೆಪಿ ಮಣೆ ಹಾಕುವ ಸಾಧ್ಯತೆ ಇದೆ. ಆದರೆ, ಅವರನ್ನು ಹಿಂದಿಕ್ಕಿ ಟಿಕೆಟ್ ಗಿಟ್ಟಿಸಿಕೊಳ್ಳಲು ಹಲವು ಬಿಜೆಪಿ ನಾಯಕರು ತೆರೆಮರೆಯಲ್ಲಿ ಪ್ರಯತ್ನ ನಡೆಸಿದ್ದಾರೆ. ಆ ನಾಯಕರ ಪಟ್ಟಿಯಲ್ಲಿ ಡಾ. ರವಿ ಪಾಟೀಲ ಇದ್ದಾರೋ ಎಂಬ ಅನುಮಾನ ಮೂಡುವಂತಾಗಿದೆ.
ಒಟ್ಟಾರೆ, ಗಮನಿಸಿದರೆ ಮುಂದಿನ 6 ತಿಂಗಳುಗಳ ಕಾಲ ಅಂದರೆ ವಿಧಾನಸಭಾ ಚುನಾವಣೆಗೂ ಮುನ್ನ ಸಾರ್ವಜನಿಕರಿಗೆ ಭಾರೀ ಗಿಫ್ಟ್ ಗಳು ದೊರೆಯುವ ಸಾಧ್ಯತೆ ಇದೆ . ಮುಂದಿನ ಶಾಸಕರಾಗ ಬಯಸಿರುವ ಆಕಾಂಕ್ಷಿಗಳು ಜನರ ಮನ ಗೆಲ್ಲಲು ಗಿಫ್ಟ್ ಗಳನ್ನು ಹಂಚುವುದರಲ್ಲಿ ಯಾವುದೇ ಅನುಮಾನವಿಲ್ಲ. ಒಬ್ಬರ ಮೇಲೊಬ್ಬರು ಪೈಪೋಟಿಯಿಂದ ಗಿಫ್ಟ್ ವಿತರಿಸುವ ಮೂಲಕ ತಾವೊಬ್ಬ ಜನಪ್ರಿಯ ವ್ಯಕ್ತಿ ಎಂದು ಬಿಂಬಿಸಿಕೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ.
ಪ್ರತಿವರ್ಷ ಲಕ್ಷ ಹಣತೆ, 20 ಸಾವಿರ ಮನೆಗಳಿಗೆ ವಿತರಣೆ…: ಜನ ಜೀವಾಳ ಈ ಬಗ್ಗೆ ಮಾತನಾಡಿಸಿದಾಗ, ಪ್ರತಿಕ್ರಿಯೆ ನೀಡಿರುವ ಡಾ.ರವಿ ಪಾಟೀಲ ಅವರು, 7 ವರ್ಷಗಳ ಹಿಂದೆ ಚೀನಾ ದೇಶದ ವಸ್ತುಗಳ ಮಾರಾಟವನ್ನು ನಾವು ನಿರ್ಬಂಧಿಸಿದೆವು. ಆಗ ಕುಂಬಾರರಿಗೆ ಆಗುವ ತೊಂದರೆಯನ್ನು ಮನಗಂಡೆವು. ಬೆಳಗಾವಿಯಲ್ಲಿ ಹಣತೆಗಳನ್ನು ಮಾರಾಟ ಮಾಡುವವರನ್ನು ಸಂಪರ್ಕಿಸಿ ಬೆಳಿಗ್ಗೆಯೇ ಹೋಗಿ ಅವರಿಂದ ಹಣತೆಗಳನ್ನು ಖರೀದಿ ಮಾಡಿದೆವು. ಅವರಿಂದ ಪಡೆದ ಹಣತೆಗಳನ್ನು ಪ್ಯಾಕ್ ಮಾಡಿ ಮರುದಿನ ಅವುಗಳನ್ನು ವಿತರಿಸುವ ಕೆಲಸ ಮಾಡುತ್ತಿದ್ದೇವೆ. ಪ್ರತಿವರ್ಷ 1ಲಕ್ಷ ಹಣತೆಗಳನ್ನು ವಿತರಿಸುತ್ತಿದ್ದೇವೆ. 20 ಸಾವಿರ ಮನೆಗಳಿಗೆ ಈ ಹಣತೆಗಳನ್ನು ವಿತರಿಸುತ್ತಿದ್ದೇವೆ. ಪ್ರತಿವರ್ಷ ಬೇರೆ ಬೇರೆ ಸ್ಥಳಗಳಿಗೆ, ತಾಲ್ಲೂಕು ಗಳಿಗೆ ತೆರಳಿ ವಿತರಣೆ ಮಾಡುತ್ತಿದ್ದೇವೆ. ಬೇರೆ ದೇಶಗಳಿಗೆ ಹೋಗುವ ಆದಾಯವನ್ನು ತಪ್ಪಿಸಿ ಸ್ಥಳೀಯರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಹಣತೆಗಳನ್ನು ವಿತರಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.