ನೊಣವಿನಕೆರೆ :
ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆಯಲ್ಲಿ ಕರವಗಲ್ ಆಂಜನೇಯಸ್ವಾಮಿ ದೇಗುಲದ ಉದ್ಘಾಟನೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಪಾಲ್ಗೊಂಡಿದ್ದರು. ನೊಣವಿನಕೆರೆ ಕಾಡಸಿದ್ದೇಶ್ವರ ಮಠಾಧಿಪತಿಗಳಾದ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿಯವರು ಉಪಸ್ಥಿತರಿದ್ದರು.
*ನೊಣವಿನಕೆರೆಯಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರ ಮಾಧ್ಯಮ ಪ್ರತಿಕ್ರಿಯೆ*
“ಅನೇಕ ದಿನಗಳಿಂದ ನೊಣವಿನಕೆರೆ ಮಠಕ್ಕೆ ಭೇಟಿ ನೀಡಬೇಕು ಅಂದುಕೊಂಡಿದ್ದೆ. ಆದರೆ ಸಾಧ್ಯವಾಗಿರಲಿಲ್ಲ. ಇಂದು ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದೇನೆ. ಈ ಮಠಕ್ಕೆ ಬಂದಾಗ ನನಗೆ ಚೈತನ್ಯ ಹೆಚ್ಚುತ್ತದೆ. ನಾನು ಹೆಚ್ಚು ನಂಬುವ ಹಾಗೂ ಪ್ರೀತಿಸುವ ಸ್ಥಳ ಇದು. ಶ್ರೀಗಳ ಆಶೀರ್ವಾದ ನನ್ನ ಮೇಲಿದೆ.”
ಇತ್ತೀಚಿನ ದಿನಗಳಲ್ಲಿ ಕಮಿಷನ್ ವಿಚಾರ ಹಾಗೂ ಮಠದಲ್ಲಿ ಆಣೆ ಪ್ರಮಾಣದ ವಿಚಾರವಾಗಿ ಕೇಳಿದ ಪ್ರಶ್ನೆಗೆ, “ಆ ರೀತಿ ಹೇಳಿದವರು ಇಂದು ಏನಾಗಿದ್ದಾರೆ? ಅಜ್ಜಯ್ಯನ ಹೆಸರು ತೆಗೆದುಕೊಂಡವರು ನಂತರ ಅದನ್ನು ಹಿಂಪಡೆದಿದ್ದಾರೆ. ಅದೇ ಅಜ್ಜಯ್ಯನ ಶಕ್ತಿ. ನಾನು ತಪ್ಪು ಮಾಡಿದ್ದಾರೆ ಯೋಚನೆ ಮಾಡಬೇಕು. ಈ ವಿಚಾರದಲ್ಲಿ ಗುತ್ತಿಗೆದಾರರ ತಪ್ಪು ಇಲ್ಲ ಬಿಡಿ. ರಾಜಕೀಯದಲ್ಲಿರುವ ಕೆಲವರು ಆ ಯುವಕರನ್ನು ದಾರಿ ತಪ್ಪಿಸಿದರು” ಎಂದು ತಿಳಿಸಿದರು.
ರೇಣುಕಾಚಾರ್ಯ ಅವರು ಸಂಪರ್ಕಿಸಿದ ಬಗ್ಗೆ ಕೇಳಿದಾಗ, “ಈಗ ಆ ಪಟ್ಟಿ ಹೇಳಲಾಗುವುದಿಲ್ಲ” ಎಂದು ತಿಳಿಸಿದರು.
*ನೊಣವಿನಕೆರೆ ಮಠದ ಧರ್ಮಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಮಾತುಗಳು*
ಮಾನವ ಧರ್ಮ, ಮಾನವೀಯತೆ ದೊಡ್ಡದು ಎಂದು ಹಿರಿಯರು ಹೇಳುತ್ತಾರೆ. ಅದರಂತೆ ಈ ಮಾನವ ಧರ್ಮವನ್ನು ಅರ್ಥಪೂರ್ವಾಗಿ ಕಳೆಯಬೇಕು. ಯಾರು ಜಾತಿ, ಧರ್ಮಗಳ ಎಲ್ಲೇ ಮೀರಿ ಜನರ ಸೇವೆಗೆ ಮುಂದಾಗುವರೊ ಅವರು ಬೆಳೆಯುತ್ತಾರೆ.
ನೊಣವಿನಕೆರೆಯ ಶ್ರೀಗಳ ಆಶೀರ್ವಾದ ಇದ್ದ ಕಾರಣ ಇಂದು ನಾನು ಜನಸೇವೆ ಮಾಡಲು ಅವಕಾಶ ಒದಗಿ ಬಂದಿದೆ. ರಾಮನ ತಂದೆ ದಶರಥರ ದೇವಸ್ಥಾನವಿಲ್ಲ, ರಾಮನ ದೇವಸ್ಥಾನಕ್ಕಿಂತಲೂ ಭಕ್ತ ಹನುಮಂತನ ದೇವಸ್ಥಾನ ಎಲ್ಲೆಲ್ಲೂ ಇದೆ. ಏಕೆಂದರೆ ಸ್ವಾಮಿ ನಿಷ್ಠೆ, ಸಮಾಜಕ್ಕೆ ಒಳ್ಳೆಯದು ಮಾಡುವ ಸೇವಕನಾದ ಕಾರಣ ಜನ ಪ್ರೀತಿಸುತ್ತಾರೆ. ಯಾರು ಜನರ ಸೇವೆ ಮಾಡುತ್ತಾರೆ ಅವರನ್ನು ಸಮಾಜ ನೆನಪಿನಲ್ಲಿ ಇಟ್ಟುಕೊಳ್ಳುತ್ತದೆ. ಇದಕ್ಕೆ ಆಂಜನೇಯನೇ ಸಾಕ್ಷಿ.
ದೇವರು ವರ, ಶಾಪ ಎರಡೂ ನೀಡುವುದಿಲ್ಲ ಬದಲಾಗಿ ಅವಕಾಶ ನೀಡುತ್ತಾನೆ. ನಾವು ಆ ಅವಕಾಶಗಳನ್ನು ಬಳಸಿಕೊಂಡು ಸಮಾಜದ ಸೇವೆ ಮಾಡುವುದರಿಂದ ದೇವರು ಸಂತೃಪ್ತಿಗೊಳ್ಳುತ್ತಾನೆ.
ನಾನು ಉಪಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ನಂತರ ಅನೇಕ ಕಾರ್ಯಕ್ರಮಗಳ ಒತ್ತಡ ಇದ್ದರೂ 20 ವರ್ಷಗಳಿಂದ ಈ ಮಠದ ಮೇಲೆ ಇರುವ ಭಕ್ತಿ, ಪ್ರೀತಿಯಿಂದ ಇಲ್ಲಿಗೆ ಬರುತ್ತಿದ್ದೇನೆ.
ನಮ್ಮ ಕುಟುಂಬ ಸದಸ್ಯರು, ಸ್ನೇಹಿತರು ಅಜ್ಜನ ಕೃಪೆಗೆ ಒಳಗಾಗಿದ್ದಾರೆ, ಹಿರಿಯರ ಮಾತಿನಂತೆ ಮನೆ ಹುಷಾರು- ಮಠ ಹುಷಾರು ಎನ್ನುವಂತೆ ಶ್ರೀ ಮಠದ ಭಕ್ತರು ಈ ಮಠವನ್ನು ನೂರಾರು ವರ್ಷಗಳ ಕಾಲ ಮುನ್ನಡೆಸಿಕೊಂಡು ಹೋಗಬೇಕು.
ಧರ್ಮಗಳು ಹಲವಾದರೂ ತತ್ವವೊಂದೇ, ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದಾರರು ಭಕ್ತಿಯೊಂದೆ, ಕರ್ಮಯಾವುದಾದರೂ ನಿಷ್ಟೆಯೊಂದೆ, ದೇವನೊಬ್ಬ ನಾಮ ಹಲವು.
ಯಾರ್ಯಾರು ಪಕ್ಷ,ಜಾತಿ, ಧರ್ಮಗಳನ್ನು ಬಿಟ್ಟು ಸಮಾಜದ ಒಳಿತಿಗೆ ಕೆಲಸ ಮಾಡುತ್ತಾರೋ ಅವರಿಗೆ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತದೆ.
*ನೀರಿನ ಸಮಸ್ಯೆ ಶೀಘ್ರ ಪರಿಹಾರ*:
ತಿಪಟೂರಿನ ಶಾಸಕರಾದ ಷಡಾಕ್ಷರಿ ಅವರಿಗೆ ಶಕ್ತಿ ತುಂಬಿದ್ದೀರಿ, ಅವರು ಸಹ ಈ ಕ್ಷೇತ್ರದ ಅಭಿವೃದ್ಧಿ ಬಗ್ಗೆ ನನ್ನ ಬಳಿ ಅನೇಕ ಸಲ ಬಂದು ಭೇಟಿ ಮಾಡಿ ಮಾತನಾಡಿದ್ದಾರೆ. ಶೀಘ್ರದಲ್ಲೇ ನೀರಿನ, ರೈತರ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ಭರವಸೆ ನೀಡಿದರು.
*ತಮ್ಮಯ್ಯ ದೊಡ್ಡ ವಿಕೆಟ್ ತೆಗೆದಿದ್ದಾರೆ*:
ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ ಅವರು ಹ್ಯಾಟ್ರಿಕ್ ಹೀರೋ ಇದ್ದಂತೆ, ಈ ಬಾರಿ ತಮ್ಮ ಕ್ಷೇತ್ರದಲ್ಲಿ ದೊಡ್ಡ ವಿಕೆಟ್ ಉರುಳಿಸಿದ್ದಾರೆ. ಚಿಕ್ಕಮಗಳೂರು ಕ್ಷೇತ್ರವನ್ನು ಅತ್ಯುತ್ತಮ ಕ್ಷೇತ್ರ ಮಾಡುವ ಆಲೋಚನೆ ಇಟ್ಟುಕೊಂಡು ನನ್ನಬಳಿ ಸಾಕಷ್ಟು ಭಾರಿ ಚರ್ಚೆ ಮಾಡಿದ್ದಾರೆ ಎಂದರು.