ಬೆಳಗಾವಿ :
ಕಾಂಗ್ರೆಸ್ ಪಕ್ಷದ ವತಿಯಿಂದ ಬೆಳಗಾವಿಯಲ್ಲಿ ಸೋಮವಾರ ನಡೆದ ಯುವಕ್ರಾಂತಿ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಭ್ರಷ್ಟ ಬಿಜೆಪಿ ಸರ್ಕಾರವನ್ನು ತೊಲಗಿಸುವ ಪಣ ತೊಟ್ಟು, ನಾವು ಇದೇ ಭೂಮಿಯಿಂದ ಪ್ರಜಾಧ್ವನಿ ಯಾತ್ರೆ ಆರಂಭಿಸಿದ್ದೆವು. ಇಂದು ಇದೇ ಭೂಮಿಯಲ್ಲಿ ಈ ಯುವಕ್ರಾಂತಿ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಈ ಪಕ್ಷ ರೈತರು, ಕಾರ್ಮಿಕರು, ಯುವಕರು, ಮಹಿಳೆಯರ ನಂಬಿಕೆಯನ್ನು ಪಡೆದಿದ್ದು, ಅವರ ನಂಬಿಕೆ ಉಳಿಸಿಕೊಳ್ಳುವ ಕೆಲಸ ಮಾಡಬೇಕಿದೆ.
ಇಲ್ಲಿ ಸೇರಿರುವ ಜನರಿಗೆ ನಾಲ್ಕು ಪಟ್ಟು ಜನ ಹೊರಗೆ ಸೇರಿದ್ದಾರೆ. ಇಷ್ಟು ಪ್ರೀತಿ ತೋರಿರುವ ನಿಮಗೆ ಧನ್ಯವಾದಗಳು.
ರಾಜೀವ್ ಗಾಂಧಿ ಅವರು ಯುವಕರ ಮೇಲೆ ವಿಶೇಷ ಪ್ರಿತಿ ಹೊಂದಿದ್ದರು. ಅದಕ್ಕಾಗಿ ಮತದಾನದ ಹಕ್ಕನ್ನು 21 ವರ್ಷದಿಂದ 18 ವರ್ಷಕ್ಕೆ ಇಳಿಸಿದರು. ಭಾರತ ಪುರಾತನ ದೇಶವಾದರೂ ಯುವಕರ ದೇಶ ಎಂದು ರಾಜೀವ್ ಗಾಂಧಿ ಅವರು ಹೇಳಿದ್ದಾರೆ ಎಂದರು.
ಯುವಕರಿಗೆ ಉದ್ಯೋಗ ಸೃಷ್ಟಿಸಬೇಕು, ಉದ್ಯೋಗ ನೀಡಬೇಕು. ಯುವಕರು ಉದ್ಯೋಗ ಪಡೆಯುವುದಷ್ಟೇ ಅಲ್ಲ, ಅವರೇ ಉದ್ಯೋಗ ಸೃಷ್ಟಿಸುವಂತೆ ಮಾಡಬೇಕು. ಕನ್ನಡಿಗರಿಗೆ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಮೀಸಲಾತಿ ನೀಡಲು ಕಾರ್ಯಕ್ರಮ ಮಾಡುತ್ತಿದ್ದೇವೆ.
ಖಾಸಗಿ ಉದ್ಯೋಗ ವಿನಿಮಯ ಕಾರ್ಯಕ್ರಮ, ಸರ್ಕಾರಿ ಖಾಲಿ ಹುದ್ದೆ ಭರ್ತಿ ಮಾಡಲಾಗುವುದು. ಈ ನೇಮಕಾತಿಗಳನ್ನು ಭ್ರಷ್ಟಾಚಾರ ಮುಕ್ತವಾಗಿ ಮಾಡಲಿದೆ. ರಾಜ್ಯದಲ್ಲಿ ಪಾರದರ್ಶಕ ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲಾಗುವುದು ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಮೊದಲ ಗ್ಯಾರಂಟಿ ಯೋಜನೆ ಗೃಹಜ್ಯೋತಿ ಯೋಜನೆಯನ್ನು ಇದೇ ಭೂಮಿಯಲ್ಲಿ ಘೋಷಿಸಲಾಗಿತ್ತುಈ ಯೋಜನೆ ಮೂಲಕ ಪ್ರತಿ ಮನೆಗೆ ತಿಂಗಳಿಗೆ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು. ಇದರಿಂದ ಪ್ರತಿ ತಿಂಗಳು 1500 ರೂ.ನಂತೆ ವರ್ಷಕ್ಕೆ 18 ಸಾವಿರ ಉಳಿತಾಯವಾಗಲಿದೆ. ಇನ್ನು ಎರಡನೇ ಗ್ಯಾರಂಟಿ ಯೋಜನೆಯಾಗಿ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ರೂ ಪ್ರೋತ್ಸಾಹ ಧನ ನೀಡಲಾಗುವುದು. ಆಮೂಲಕ ವರ್ಷಕ್ಕೆ 24 ಸಾವಿರ ನೀಡಲಾಗುವುದು. ಈ ಎರಡು ಯೋಜನೆಗಳಿಂದ ವರ್ಷಕ್ಕೆ 42 ಸಾವಿರದಂತೆ ಐದು ವರ್ಷಕ್ಕೆ 2.10 ಲಕ್ಷ ಹಣ ಉಳಿತಾಯವಾಗಲಿದೆ. ಇನ್ನು ಮೂರನೇ ಗ್ಯಾರೆಂಟಿ ಯೋಜನೆಯಾಗಿ ಅನ್ನಭಾಗ್ಯ ಯೋಜನೆ ಮೂಲಕ ಬಡ ಕುಟುಂಬದ ಪ್ರತಿ ಸದಸ್ಯರಿಗೆ 10 ಕೆ.ಜಿ ಅಕ್ಕಿ ಉಚಿತವಾಗಿ ನೀಡಲಾಗುವುದು. ಈ ಎಲ್ಲ ಯೋಜನೆಗಳನ್ನು ನೀವು ಪ್ರತಿ ಮನೆ ಮನೆಗೆ ತಲುಪಿಸಬೇಕು.
ಈ ಬಾರಿ ನಾವು ಒಟ್ಟಾಗಿ ಕೆಲಸ ಮಾಡಿ ರಾಜ್ಯದಲ್ಲಿ ಪಕ್ಷಕ್ಕೆ 140 ಕ್ಷೇತ್ರ ತಂದುಕೊಟ್ಟು ರಾಜ್ಯದಲ್ಲಿ ಆಡಳಿತ ನಡೆಸುತ್ತೇವೆ ಎಂದು ನಾನು ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಈ ಸಂದರ್ಭದಲ್ಲಿ ಮಾತು ನೀಡುತ್ತಿದ್ದೇನೆ ಎಂದರು.
ಯುವ ಕ್ರಾಂತಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಬೆಳಗಾವಿ ವಿಮಾನ ನಿಲ್ದಾಣಕ್ಕೆ ಸೋಮವಾರ ಬಂದಿಳಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವರಿಷ್ಠ ರಾಹುಲ್ ಗಾಂಧಿ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸ್ವಾಗತಿಸಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ ಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮತ್ತಿತರರು ಇದ್ದರು.