ಬೆಳಗಾವಿ: ಸಂವಿಧಾನ ನೀಡಿರುವ ಬಹುಸಂಖ್ಯೆಯ ಮೂಲಭೂತ ಹಕ್ಕುಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರದಿದ್ದರೆ ಸಂವಿಧಾನದ ಆಶಯ ಮೂಲೆಗುಂಪಾಗಲಿದೆ ಎಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಾ.ಸಿ. ಬಸವರಾಜು ಕಳವಳ ವ್ಯಕ್ತಪಡಿಸಿದರು.
ನಗರದ ರಾಜ ಲಖಮಗೌಡ ಕಾನೂನು ವಿದ್ಯಾಲಯದಲ್ಲಿ ಗುರುವಾರ ನಡೆದ ಪ್ರಥಮ ವರ್ಷದ ಕಾನೂನು ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಸಂಸ್ಥೆಗಳಿಗೆ ಸಮಾಜವನ್ನು ಪರಿವರ್ತಿಸುವ ಶಕ್ತಿ ಇದೆ, ಜೊತೆಗೆ ಶಿಕ್ಷಣ ಸಂಸ್ಥೆಗಳನ್ನು ನಡೆಸುವ ವ್ಯಕ್ತಿಗಳು ಹೃದಯ ಶ್ರೀಮಂತಿಕೆ ಉಳ್ಳವರು ಎಂದು ಬಣ್ಣಿಸಿದರು.
ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ಶಿಕ್ಷಣದ ಜೊತೆಗೆ ಆಧುನಿಕ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಪರಸ್ಪರರಲ್ಲಿ ಸಾಮರಸ್ಯ, ಗೌರವ ಮನೋಭಾವ, ಹಾಗೂ ರಾಷ್ಟಾಭಿಮಾನ ಬೆಳೆಸಿಕೊಳ್ಳಲು ಸಂದೇಶ ನೀಡಿದರು.
ಪ್ರತಿಯೊಬ್ಬರು ವೈಯಕ್ತಿಕ ಲಾಭಕ್ಕಾಗಿ ದುಡಿಯದೆ ಸಮಾಜದ ಏಳಿಗೆಗಾಗಿ ನಿಷ್ಠೆಯಿಂದ ಹಾಗೂ ಪ್ರಾಮಾಣಿಕೆಯಿಂದ ದುಡಿದಾಗ ಮಾತ್ರ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ
ಕೆಎಲ್ ಎಸ್ ಸೊಸೈಟಿಯ ಕಾರ್ಯದರ್ಶಿ ವಿವೇಕ್.ಜಿ. ಕುಲಕರ್ಣಿ ಮಾತನಾಡಿ, ವಿದ್ಯಾರ್ಥಿಗಳು ಸದಾ ಕಾಲ ಅಧ್ಯಯನ ನಿರತರಾಗಿರಬೇಕು ಹಾಗೂ ಸ್ವಯಂ ಪ್ರೇರಣೆಯಿಂದ ಇತರಿಗೆ ಕಾನೂನು ಅರಿವು ಮೂಡಿಸಲು ಸಮಾಜಮುಖಿ ಕಾರ್ಯಗಳಲ್ಲಿ ಭಾಗವಹಿಸಬೇಕು ಎಂದು ಸೂಚಿಸಿದರು.
ಕಾಲೇಜಿನ ಪ್ರಾಚಾರ್ಯ ಡಾ. ಎ. ಎಚ್.ಹವಾಲ್ದಾರ್ ಕಾಲೇಜಿನ ಇತಿಹಾಸ ಹಾಗೂ ಸಾಧನೆಯನ್ನು ವಿವರಿಸಿದರು.
ಕಾಲೇಜಿನ ಐಕ್ಯೂಎಎಸ್ ವಿಭಾಗದಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿಭಾಗದ ಸಂಯೋಜಕಿ ಸಮಿನಾ ಬೇಗ್, ಅಧ್ಯಾಪಕ ವೃಂದ ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಉಜ್ವಲ ಹವಾಲ್ದಾರ್ ಹಾಗೂ ಸುಚಿತ್ರಾ ನಿರೂಪಿಸಿದರು. ಪ್ರಾಧ್ಯಾಪಕಿ ಮೋನಿಷಾ ವಂದಿಸಿದರು.