ನವದೆಹಲಿ: ಆಗಸ್ಟ್ನಲ್ಲಿ ಭಾರೀ ಮಳೆಯ ನಂತರ ಸೆಪ್ಟೆಂಬರ್ನಲ್ಲಿ ಸಹ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ ಎಂದು , ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಮುನ್ಸೂಚನೆಯ ಪ್ರಕಾರ, ಒಟ್ಟು ಮಳೆಯು ತಿಂಗಳ ದೀರ್ಘಾವಧಿಯ ಸರಾಸರಿ (LPA) ಯ 109% ಗಿಂತ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಐಎಂಡಿ ಹೇಳಿದೆ. ಸೆಪ್ಟೆಂಬರ್ ತಿಂಗಳ ವಾಡಿಕೆ ಮಳೆ 168 ಮಿಮೀ ಆಗಿದೆ.
“ವಾಯಭಾರ ಕುಸಿತ ಬಹುತೇಕ ಪ್ರತಿ ವಾರ ರೂಪುಗೊಳ್ಳುತ್ತವೆ ಎಂದು ನಾವು ನಿರೀಕ್ಷಿಸುತ್ತೇವೆ, ಇದರಿಂದಾಗಿ ನಿರಂತರ ಮಳೆಯಾಗುತ್ತದೆ” ಎಂದು ಭಾರತೀಯ ಹವಾಮಾನ ಇಲಾಖೆ (IMD) ಮಹಾನಿರ್ದೇಶಕ ಎಂ ಮೊಹಾಪಾತ್ರ ಹೇಳಿದ್ದಾರೆ. ಉತ್ತರಾಖಂಡ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಮತ್ತು ರಾಜಸ್ಥಾನದ ಕೆಲವು ಭಾಗಗಳನ್ನು ಒಳಗೊಂಡ ಹಿಮಾಲಯದ ತಪ್ಪಲಿನಲ್ಲಿ ಭಾರಿ ಮಳೆಯ ನಿರೀಕ್ಷೆಯಿದೆ, ಇದು ಭೂಕುಸಿತ ಮತ್ತು ಪ್ರವಾಹಕ್ಕೆ ಕಾರಣವಾಗಬಹುದು. ಎಚ್ಚರಿಕೆ ಅಗತ್ಯ ಎಂದು ಅವರು ಹೇಳಿದ್ದಾರೆ.
ಐಎಂಡಿ (IMD) ಸೆಪ್ಟೆಂಬರ್ನಲ್ಲಿ ಕನಿಷ್ಠ ಎರಡು ಸೈಕ್ಲೋನಿಕ್ ಅಡಚಣೆಗಳು ಸಂಭವಿಸಬಹುದು ಎಂದು ನಿರೀಕ್ಷಿಸುತ್ತಿದೆ. ಮುಂಬರುವ ವಾರದಲ್ಲಿ-ಒಂದು ಅರಬ್ಬಿ ಸಮುದ್ರದ ಮೇಲೆ ರೂಪುಗೊಂಡರೆ ಮತ್ತು ಇನ್ನೊಂದು ಬಂಗಾಳ ಕೊಲ್ಲಿಯಲ್ಲಿ ರೂಪುಗೊಳ್ಳಲಿದೆ. ಸೆಪ್ಟೆಂಬರ್ ತಿಂಗಳ ಎರಡನೇ ಮತ್ತು ಮೂರನೇ ವಾರಗಳಲ್ಲಿ ಇನ್ನೂ ಎರಡು ಎರಡು ಸೈಕ್ಲೋನಿಕ್ ಅಡಚಣೆ ರೂಪುಗೊಳ್ಳುವ ಸಾಧ್ಯತೆಯಿದೆ, ಇವೆಲ್ಲವೂ ಒಡಿಶಾದಿಂದ ಪಶ್ಚಿಮ ಉತ್ತರ ಪ್ರದೇಶದ ಕಡೆಗೆ ಚಲಿಸುವ ನಿರೀಕ್ಷೆಯಿದೆ. ಈ ವ್ಯವಸ್ಥೆಗಳು ವಾಯವ್ಯ ಭಾರತದಲ್ಲಿ, ವಿಶೇಷವಾಗಿ ರಾಜಸ್ಥಾನದಲ್ಲಿ ಜೋರಾದ ಮಳೆಗೆ ಕಾರಣವಾಗಬಹುದು ಎಂದು ಹೇಳಿದೆ.
ಬಂಗಾಳಕೊಲ್ಲಿಯಲ್ಲಿ ರೂಪುಗೊಂಡ ಹವಾಮಾನ ವ್ಯವಸ್ಥೆಗಳು ವಾಯವ್ಯಕ್ಕೆ ಚಲಿಸುವ ಸಾಧ್ಯತೆಯಿದೆ, ಇದು ವಾಯವ್ಯ ಭಾರತಕ್ಕೆ ಗಣನೀಯ ಪ್ರಮಾಣದಲ್ಲಿ ಮಳೆಗೆ ಕಾರಣವಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ರಾಯಲಸೀಮಾ, ದಕ್ಷಿಣ ಕರ್ನಾಟಕ, ಉತ್ತರ ಬಿಹಾರ, ಈಶಾನ್ಯ ಉತ್ತರ ಪ್ರದೇಶ ಮತ್ತು ಈಶಾನ್ಯ ಭಾರತದಂತಹ ಪ್ರದೇಶಗಳಲ್ಲಿ ಕಡಿಮೆ ಮಳೆ ಬೀಳಬಹುದು ಎಂದು ಹೇಳಿದೆ.
ನೈಋತ್ಯ ಮಾನ್ಸೂನ್ ಇನ್ನೂ ಪ್ರಬಲವಾಗಿದೆ. ಜೂನ್ನಲ್ಲಿ ದುರ್ಬಲ ಆರಂಭದ ನಂತರ, ನೈಋತ್ಯ ಮಾನ್ಸೂನ್ ಜುಲೈ ಮತ್ತು ಆಗಸ್ಟ್ನಲ್ಲಿ ವಾಡಿಕೆ ಮಳೆಗಿಂತ ಹೆಚ್ಚು ಮಳೆಯನ್ನು ಸುರಿಸಿದೆ. ಜುಲೈನಲ್ಲಿ ವಾಡಿಕೆಗಿಂತ 9%ರಷ್ಟು ಮಳೆಯಾಗಿದೆ, ಆಗಸ್ಟ್ನಲ್ಲಿ 15%ರಷ್ಟು ಹೆಚ್ಚುವರಿ ಮಳೆಯಾಗಿರುವುದು ಕಂಡುಬಂದಿದೆ.