ಮಂಡ್ಯ : ನಾವು ಸುದ್ದಿ ಹುಡುಕುವ ಕಾಲದಿಂದ ಸುದ್ದಿ ಕಲ್ಪಿಸಿಕೊಳ್ಳುವ ಕಾಲಕ್ಕೆ ಬಂದಿದ್ದೇವೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಬೇಸರ ವ್ಯಕ್ತಪಡಿಸಿದರು.
ಮಂಡ್ಯ ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾವೀಗ ಸುದ್ದಿ ಹುಡುಕುವ ಕಾಲಘಟ್ಟವನ್ನು ದಾಟಿ, ಕಲ್ಪಿಸಿಕೊಂಡು ಸುದ್ದಿ ಮಾಡುವ ಕಾಲಕ್ಕೆ ಬಂದು ನಿಂತಿದ್ದೇವೆ.
ಇಷ್ಟು ದಿನ ಸುದ್ದಿ ಹೇಳ್ತಾ ಇದ್ವಿ, ಓದ್ತಾ ಇದ್ವಿ, ಬರೀತಾ ಇದ್ವಿ, ನೋಡ್ತಾ ಇದ್ವಿ. ಈಗ ಕಲ್ಪಿಸಿಕೊಳ್ತಾ ಇದೀವಿ. ಮೊದಲೆಲ್ಲಾ ನಾವು ಸುದ್ದಿ ಕೆದಕುತ್ತಿದ್ದೆವು. ಈಗ ಬರೀ ಕೆಣಕ್ತಾ ಇದೀವಿ ಎಂದರು.
ಮೊದಲೆಲ್ಲಾ ನಾವು ಸುಳ್ಳನ್ನು ಅದುಮಿ ಸತ್ಯ ತೋರಿಸುತ್ತಿದ್ದೆವು. ಈಗ ಸತ್ಯವನ್ನು ತುಳಿದು ಸುಳ್ಳನ್ನು ಹಂಚುವ ಅನಿವಾರ್ಯ ಸಂದರ್ಭಕ್ಕೆ ಬಂದಿದ್ದೇವೆ. ಈ ಮಾತುಗಳನ್ನು ನಾನು ಏಕೆ ಹೇಳ್ತಾ ಇದೀನಿ ಅಂದರೆ, ಮೊನ್ನೆ ಬಾಂಗ್ಲಾ ದೇಶದಲ್ಲಿ ವಿದ್ಯಾರ್ಥಿಗಳು ಅಲ್ಲಿನ ಸರ್ಕಾರದ ವಿರುದ್ಧ ದಂಗೆ ಎದ್ದರು. ಆದರೆ ಧಂಗೆ ಮೊದಲು ಟಾರ್ಗೆಟ್ ಆದವರು ಮಾಧ್ಯಮದವರು.ಮೂರ್ನಾಲ್ಕು ವರ್ಷಗಳ ಹಿಂದೆ ಶ್ರೀಲಂಕಾದಲ್ಲೂ ಆರ್ಥಿಕ ಕುಸಿತದ ಕಾರಣಕ್ಕೆ ಜನ ದಂಗೆ ಎದ್ದರು. ಅಲ್ಲೂ ಜನ ಮೊದಲು ಮಾಧ್ಯಮ ಸಂಸ್ಥೆಗಳನ್ನೇ ಟಾರ್ಗೆಟ್ ಮಾಡಿದರು. ಇದು ಅತ್ಯಂತ ಕೆಟ್ಟ ಬೆಳವಣಿಗೆ.
ಇದು ಅತ್ಯಂತ ಅಪಾಯಕಾರಿ. ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಜನ ಯಾವ ಮಾಧ್ಯಮಗಳ ಮೊರೆ ಹೋಗುತ್ತಿದ್ದರೋ, ಅದೇ ಮಾಧ್ಯಮಗಳನ್ನು ಜನ ಏಕೆ ಟಾರ್ಗೆಟ್ ಮಾಡ್ತಿದ್ದಾರೆ ಅನ್ನೋದು ಬಹಳ ಗಂಭೀರವಾದ ಸಂಗತಿ.
ಪ್ರಜಾಪ್ರಭುತ್ವದ ಕಾವಲು ಸಂಸ್ಥೆಯಾದ ಮಾಧ್ಯಮಗಳನ್ನು ಜನ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಪರಿಗಣಿಸುವಂತಾಗಬಾರದು ಎನ್ನುವ ಎಚ್ಚರಿಕೆಯನ್ನು ನಾವೆಲ್ಲಾ ಪಾಲಿಸುವ ಸಂದರ್ಭ ಬಂದಿದೆ ಎಂದು ಎಚ್ಚರಿಸಿದರು.
ಇವತ್ತು ತಂತ್ರಜ್ಞಾನವನ್ನು ಸಮಾಜದ ಶಾಂತಿ ಕೆಡಿಸಲು, ಸುಳ್ಳನ್ನು ಅತಿ ವೇಗವಾಗಿ ಹರಡಲು ಬಳಸಿಕೊಳ್ಳಲಾಗುತ್ತಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ಹರಡುವ ಸುಳ್ಳುಗಳು ಮುಖ್ಯ ವಾಹಿನಿ ಮಾಧ್ಯಮಗಳಲ್ಲೂ ವಿಜ್ರಂಭಿಸುತ್ತಿವೆ.
ಮೊನ್ನೆ ಮುಡಾ ಪ್ರಕರಣದಲ್ಲಿ ಹೈಕೋರ್ಟ್ ತೀರ್ಪು ಬಂತು. ಇನ್ನೂ ತೀರ್ಪಿನ ಪ್ರತಿ ನಮ್ಮ ಕೈ ತಲುಪಿಲ್ಲ. ಅಷ್ಟರಲ್ಲಾಗಲೇ ಒಂದೊಂದು ಚಾನಲ್ ನಲ್ಲಿ ಒಂದೊಂದು ಮುಖ್ಯಮಂತ್ರಿಗಳ ಸಭೆ ನಡೆಸಿಬಿಟ್ಟರು.
ಒಬ್ಬರು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸಿದರೆ, ಮತ್ತೊಬ್ಬರು ವಿಶೇಷ ಕ್ಯಾಬಿನೆಟ್ ಮೀಟಿಂಗ್ ನಡೆಸಿಬಿಟ್ಟರು.
ಅದಕ್ಕೆ ಹೇಳಿದ್ದು ನಾವು ಸುದ್ದಿಗಳನ್ನು ಕಲ್ಪಿಸಿಕೊಳ್ಖುವ ಅಪಾಯಕಾರಿ ಕಾಲಕ್ಕೆ ಬಂದಿದ್ದೇವೆ.
ಇದನ್ನು ತಡೆಯುವ ಜವಾಬ್ದಾರಿ ಪತ್ರಕರ್ತರ ಮೇಲಿದೆ. ಇದಕ್ಕಾಗಿ ಸೈಬರ್ ತಂತ್ರಜ್ಞಾನ ಮತ್ತು ಸುಳ್ಳು ಪತ್ತೆ ತಂತ್ರಜ್ಞಾನದ ಅರಿವು ಪತ್ರಕರ್ತರಿಗೆ ಅನಿವಾರ್ಯ.
ಆದ್ದರಿಂದ ಪತ್ರಕರ್ತರ ಸಂಘಗಳು, ಮಾಧ್ಯಮ ಸಂಸ್ಥೆಗಳು ಒಟ್ಟಾಗಿ ಕಾರ್ಯಾಗಾರಗಳ ಮೂಲಕ ತಂತ್ರಜ್ಞಾನದ ಅಪಾಯ ಮತ್ತು ಅವಕಾಶಗಳನ್ನು ಅರಿತುಕೊಳ್ಳಬೇಕಿದೆ.
ಶ್ರೀಮಂತರ ಮಕ್ಕಳು ಪತ್ರಕರ್ತರಾಗಿ ಬರುವುದು ಕಡಿಮೆ. ಬಡವರು ಮತ್ತು ಮಧ್ಯಮ ವರ್ಗದವರೇ ಹೆಚ್ಚಾಗಿ ವೃತ್ತಿಗೆ ಬರುತ್ತಾರೆ. ಹೀಗೆ ಬಂದವರು ಬಡವರ, ಮಧ್ಯಮ ವರ್ಗದವರ ಕಷ್ಟಗಳಿಗೆ ಬೆಳಕು ಚೆಲ್ಲದೆ ಶ್ರೀಮಂತರ, ಕಾರ್ಪೋರೇಟ್ ಗಳ, ಸೆಲೆಬ್ರಿಟಿಗಳ ಬಾಲ ಹಿಡಿದು ಸುದ್ದಿ ಮಾಡುತ್ತಾರೆ. ಇದು ಬೇಸರದ ಸಂಗತಿ. ಹೀಗಾಗಿ ಪತ್ರಿಕಾ ವೃತ್ತಿಯ ಪ್ರಾಥಮಿಕ ಉದ್ದೇಶ ಸತ್ಯ ಹೇಳುವುದು. ಜನಪರವಾಗಿ ನಿಲ್ಲುವುದು. ನಮ್ಮ ಹಿರಿಯರು ಹಾಕಿಕೊಟ್ಟ ಈ ಮಾರ್ಗದಲ್ಲಿ ಸಾಗೋಣ ಎಂದರು.
ಮಾಜಿ ಸಂಸದರಾದ ಪುಟ್ಟರಾಜು, ವಿಧಾನ ಪರಿಷತ್ ಸದಸ್ಯ ಯೋಗೀಶ್ವರ್ ಮತ್ತು ಪತ್ರಕರ್ತರ ಸಂಘದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.