ಮೈಸೂರು : ಪ್ರಕೃತಿ ವಿಕೋಪದಿಂದ ಬಿದ್ದಿರುವ ಮಳೆ ಕಾರಣದಿಂದ ಆಗಿರುವ ಅನಾಹುತಗಳಿಗೆ ಪರಿಹಾರ ನೀಡುತ್ತೇವೆ. ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಅವರು ಮೈಸೂರಿನ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಮಳೆ ಅನಾಹುತಗಳ ಕುರಿತು ನಿಗಾ ವಹಿಸಿದ್ದೇವೆ. ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಸ್ಥಳ ಸಮೀಕ್ಷೆ ಕೂಡ ನಡೆಯುತ್ತಿದೆ. ಪರಿಹಾರ ನೀಡುತ್ತೇವೆ ಎಂದರು.
ಚನ್ನಪಟ್ಟಣ ಮಾಜಿ ಶಾಸಕ ಸಿ.ಪಿ.ಯೋಗೀಶ್ವರ್ ಅವರು ಕಾಂಗ್ರೆಸ್ಸಿಗೆ ಸೇರಲು ಉತ್ಸುಕರಾಗಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಕಾಂಗ್ರೆಸ್ಸಿನ ಸಿದ್ಧಾಂತ ಮತ್ತು ಸಂವಿಧಾನದ ಮೌಲ್ಯಗಳನ್ನು ಒಪ್ಪಿ ಬರುವ ಎಲ್ಲರಿಗೂ ಪಕ್ಷಕ್ಕೆ ಸ್ವಾಗತ ಎಂದರು.
ಸಂಡೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಂಸದ ಈ.ತುಕಾರಾಂ ಅವರ ಪತ್ನಿ ಅವರಿಗೆ ಟಿಕೆಟ್ ನೀಡಲಾಗುವುದು. ಚನ್ನಪಟ್ಟಣದಲ್ಲಿ ಸೂಕ್ತ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎನ್ನುವ ಚರ್ಚೆ ಆಗಿದೆ. ಡಿ.ಕೆ.ಸುರೇಶ್ ಅವರೂ ಕೂಡ ಪ್ರಭಲ ಅಭ್ಯರ್ಥಿ ಆಗಿದ್ದಾರೆ. ಒಂದೆರಡು ದಿನಗಳಲ್ಲಿ ಚನ್ನಪಟ್ಟಣ ಮತ್ತು ಶಿಗ್ಗಾಂವ್ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಎನ್ನುವುದು ಸ್ಪಷ್ಟವಾಗಲಿದೆ ಎಂದರು.
ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಬಗ್ಗೆ ನೂರಕ್ಕೆ ನೂರರಷ್ಟು ವಿಶ್ವಾಸ : ಮುಖ್ಯಮಂತ್ರಿ ಸಿದ್ದರಾಮಯ್ಯ :
ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಬಗ್ಗೆ ನೂರಕ್ಕೆ ನೂರರಷ್ಟು ವಿಶ್ವಾಸವಿದ್ದು, ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಚಳ್ಳಕೆರೆ ನಗರದಲ್ಲಿ ಮಾಧ್ಯಮದವರೊಂದಿಗ ಮಾತನಾಡಿದರು.
ಬಿಜೆಪಿ ಶಾಸಕ ಯತ್ನಾಳ್ ಅವರು ಅಹಿಂದ ವರ್ಗದ ಹಣವನ್ನು ಕಾಂಗ್ರೆಸ್ ಲೂಟಿ ಮಾಡಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, 1000 ಕೋಟಿ ಬಳಸಿ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲಿದೆ ಎಂದು ಯತ್ನಾಳ್ ಅವರು ಹೇಳಿದ್ದರು. ಅವರು ಹೇಳುವ ಸಾವಿರ ಕೋಟಿ ಯಾರ ಹಣ, ಇದು ಕಪ್ಪು ಹಣ ಇರಬಹುದಲ್ಲವೇ. ಬಿಜೆಪಿಯವರು ಲಂಚದಿಂದ ಬರುವ ಈ ಕಪ್ಪು ಹಣ ಬಳಸಿ ಸರ್ಕಾರ ಉರುಳಿಸುತ್ತೇವೆ ಎಂದಿದ್ದಾರೆ ಎಂದು ತಿಳಿಸಿದರು.
ಚನ್ನಪಟ್ಟಣ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷ ಸಿ.ಪಿ.ಯೋಗೇಶ್ವರ್ ಅವರನ್ನು ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಜೆಡಿಎಸ್ ಅವರು ಆರೋಪಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಮೊದಲು ಚನ್ನಪಟ್ಟಣ ಕ್ಷೇತ್ರಕ್ಕೆ ಬಿಜೆಪಿ ಜೆಡಿಎಸ್ ನವರು ಅಭ್ಯರ್ಥಿಯನ್ನು ಆಯ್ಕೆ ಮಾಡಲಿ . ಚನ್ನಪಟ್ಟಣ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯನ್ನು ಸಧ್ಯದಲ್ಲಿಯೇ ಆಯ್ಕೆ ಅಂತಿಮ ಗೊಳಿಸಲಾಗುವುದು ಎಂದರು.
ಬೆಂಗಳೂರಿನಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.
ದೇಶದ ಸರಾಸರಿ ಜಿಎಸ್ಡಿಪಿಗಿಂತ ಏರುಗತಿಯಲ್ಲಿ ಕರ್ನಾಟಕದ ಆರ್ಥಿಕ ಪ್ರಗತಿ :
ಕರ್ನಾಟಕ ರಾಜ್ಯ ಆರ್ಥಿಕ ಪ್ರಗತಿಯಲ್ಲಿ ದೇಶದಲ್ಲೇ ಉತ್ತಮ ಸಾಧನೆ ಮಾಡಿದ್ದು, 2023-24 ನೇ ಹಣಕಾಸು ಸಾಲಿನಲ್ಲಿ ಶೇ.10.2ರಷ್ಟು ಜಿಎಸ್ಡಿಪಿ ಪ್ರಗತಿ ಸಾಧಿಸಿದೆ.
ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ಈ ಅವಧಿಯಲ್ಲಿ ದೇಶದ ಸರಾಸರಿ ಜಿಎಸ್ಡಿಪಿ ಶೇ.8.2 ಆಗಿದೆ. ಕಳೆದ ಬಾರಿ ರಾಜ್ಯ ತೀವ್ರ ಬರಗಾಲಕ್ಕೆ ತುತ್ತಾಗಿದ್ದರೂ, ಜಾಗತಿಕವಾಗಿ ಐಟಿ ಮಾರುಕಟ್ಟೆ ಹಿನ್ನಡೆ ಅನುಭವಿಸಿದ್ದರೂ, ಕರ್ನಾಟಕ ಉತ್ತಮ ಆರ್ಥಿಕ ಪ್ರಗತಿ ಸಾಧಿಸಿದೆ.
ನ್ಯಾಷನಲ್ ಸ್ಟಾಟಿಸ್ಟಿಕಲ್ ಎಸ್ಟಿಮೇಟ್ (ಎನ್ಎಸ್ಸಿ) ಆರಂಭದಲ್ಲಿ ಶೇ. 4ರಷ್ಟು ಕರ್ನಾಟಕದ ಜಿಎಸ್ಡಿಪಿ ಅಭಿವೃದ್ಧಿ ದರವನ್ನು ಅಂದಾಜಿಸಿತ್ತು. ಆದರೆ ಹಣಕಾಸು ವರ್ಷದ ಅಂತ್ಯಕ್ಕೆ ರಾಜ್ಯದ ಅಭಿವೃದ್ದಿ ದರ ಶೇ.13.1 ರಷ್ಟಾಗಿದ್ದು, ಎನ್ಎಸ್ಸಿ ಕರ್ನಾಟಕದ ಪ್ರಗತಿಯನ್ನು ತಪ್ಪಾಗಿ ಅಂದಾಜಿಸಿರುವುದು ಸ್ಪಷ್ಟವಾಗಿದೆ.
ರಾಜ್ಯದಲ್ಲಿ ಬರಗಾಲ ಪರಿಸ್ಥಿತಿಯಿಂದಾಗಿ ಕೃಷಿ ವಲಯದ ಅಭಿವೃದ್ದಿ ಉದ್ದೇಶಿತ ಪ್ರಮಾಣದಲ್ಲಿ ಸಾಧ್ಯವಾಗಿರುವುದಿಲ್ಲ. ಕರ್ನಾಟಕದ Gross State Value Added (ಜಿಎಸ್ವಿಎ) ಅಂದರೆ ಒಟ್ಟು ಆರ್ಥಿಕತೆಯಲ್ಲಿ ಐಟಿ ಮತ್ತು ಹಾರ್ಡ್ವೇರ್ ವಲಯದ ಪಾಲು ಶೇ.28ರಷ್ಟಿದ್ದು, ಜಾಗತಿಕ ಆರ್ಥಿಕ ಹಿಂಜರಿತದಿಂದಾಗಿ ಈ ವಲಯ ಜಾಗತಿಕವಾಗಿ ಹಿನ್ನಡೆ ಅನುಭವಿಸಿದೆ. ಭಾರತದ ಐಟಿ ವಲಯ 2022ರ ಹಣಕಾಸು ಸಾಲಿನಲ್ಲಿ ಶೇ.15.5 ರಷ್ಟು ಪ್ರಗತಿ ಕಂಡದ್ದು, 2023ರ ಅವಧಿಯಲ್ಲಿ ಶೇ.8ಕ್ಕೆ ಕುಸಿತ ಅನುಭವಿಸಿದೆ. ಆದರೆ ಉತ್ತಮ ಆಡಳಿತ ಮತ್ತು ಬಹುವಲಯಗಳ ಅಭಿವೃದ್ಧಿಯಿಂದಾಗಿ ಕರ್ನಾಟಕ ರಾಜ್ಯದ ಆರ್ಥಿಕತೆ ಸ್ಥಿರವಾಗಿರುವುದು ಕಂಡು ಬಂದಿದೆ.
2024-25ನೇ ಹಣಕಾಸು ಸಾಲಿಗೆ ಎನ್ಎಸ್ಸಿ ಕರ್ನಾಟಕ ರಾಜ್ಯಕ್ಕೆ ಶೇ.9.4 ಜಿಎಸ್ಡಿಪಿ ಪ್ರಗತಿಯನ್ನು ಅಂದಾಜಿಸಿದ್ದು, ಇದು ರಾಷ್ಟ್ರೀಯ ಸರಾಸರಿ ಶೇ.10.5ಕ್ಕಿಂತ ಸ್ವಲ್ಪ ಕಡಿಮೆಯಾಗಿದೆ. ಆದರೆ ಹಣಕಾಸು ಸಚಿವಾಲಯ ವಿವಿಧ ಆರ್ಥಿಕ ಚಟುವಟಿಕೆಗಳನ್ನು ಗಮನದಲ್ಲಿರಿಸಿ ಈ ಅವಧಿಯಲ್ಲಿ ಕರ್ನಾಟಕದ ಜಿಎಸ್ಡಿಪಿ ದರವನ್ನು ಶೇ.14ರಷ್ಟು ಅಂದಾಜಿಸಿದೆ. 2024ರ ಸೆಪ್ಟಂಬರ್ ಅವಧಿಯಲ್ಲಿ ಕರ್ನಾಟಕ ವರ್ಷದಿಂದ ವರ್ಷಕ್ಕೆ ಜಿಎಸ್ಟಿ ಸಂಗ್ರಹದಲ್ಲಿ ಶೇ.10ರಷ್ಟು ಹಾಗೂ ಮುದ್ರಾಂಕ ಶುಲ್ಕ ಸಂಗ್ರಹದಲ್ಲಿ ಶೇ.24ರಷ್ಟು ಹೆಚ್ಚಳ ದಾಖಲಿಸಿದ್ದು, ಉತ್ತಮ ಆರ್ಥಿಕತೆಯನ್ನು ತೋರಿಸುತ್ತಿದೆ.
ಕರ್ನಾಟಕದ ತಲಾ ಜಿಎಸ್ಡಿಪಿ ದೇಶದಲ್ಲೇ ಅತ್ಯಧಿಕವಾಗಿದೆ. ಗ್ಯಾರಂಟಿ ಸೇರಿದಂತೆ ರಾಜ್ಯ ಸರ್ಕಾರದ ಹಲವು ಜನಪರ ಯೋಜನೆಗಳು ಅಭಿವೃದ್ಧಿಯ ಫಲ ಎಲ್ಲಾ ವರ್ಗಗಳಿಗೂ ತಲುಪುವುದನ್ನು ಖಾತ್ರಿಪಡಿಸಿವೆ. ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಪ್ರಗತಿಯನ್ನು ಒಂದುಗೂಡಿಸುವ ಕರ್ನಾಟಕದ ಆರ್ಥಿಕ ಮಾದರಿಯ ಯಶಸ್ಸನ್ನು ಇದು ತೋರಿಸುತ್ತದೆ.
ಐಟಿ ವಲಯದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವ ಸಾಮರ್ಥ್ಯವನ್ನು ಹೊಂದಿರುವುದು ದೇಶದ ಡಿಜಿಟಲ್ ಮತ್ತು ಆರ್ಥಿಕ ರಂಗದಲ್ಲಿ ಪ್ರಮುಖ ಪಾತ್ರ ವಹಿಸಲು ಕಾರಣವಾಗಿದೆ ಎಂದು ಉದ್ಯಮ ರಂಗದ ತಜ್ಞರ ಅಭಿಪ್ರಾಯವಾಗಿದೆ.
ವಿವಾಹದಲ್ಲಿ ಭಾಗಿ :
ಚಳ್ಳಕೆರೆ: ಅಕ್ಟೋಬರ್ 21 ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಳ್ಳಕೆರೆಯಲ್ಲಿ ಶಾಸಕ ರಘುಮೂರ್ತಿ ಅವರ ಮಗಳ ವಿವಾಹದಲ್ಲಿ ಪಾಲ್ಗೊಂಡು ವಧು ವರರಿಗೆ ಶುಭ ಹಾರೈಸಿದರು.