ಬೆಳಗಾವಿ :ಹಿಡಕಲ್ ಜಲಾಶಯದ ಹಿನ್ನೀರು ಕಡಿಮೆಯಾದ ಹಿನ್ನೆಲೆಯಲ್ಲಿ ಹುನ್ನೂರು ವಿಠ್ಠಲ ದೇವಸ್ಥಾನ ಈ ವರ್ಷ ಭಕ್ತರಿಗೆ ಕಾಣಿಸಿಕೊಂಡಿತ್ತು. ಆದರೆ, ಇದೀಗ ಸುರಿಯುತ್ತಿರುವ ಭಾರಿ ಮಳೆಯಿಂದ ಘಟಪ್ರಭಾ ನದಿಯಲ್ಲಿ ನೀರಿನ ಒಳಹರಿವು ಹೆಚ್ಚಳವಾಗಿದೆ. ಆದ್ದರಿಂದ ವಿಠ್ಠಲ ದೇವಸ್ಥಾನ ಮುಳುಗುವ ಹಂತದಲ್ಲಿದೆ.
ದಶಕಗಳಿಂದ ನೀರಿನಲ್ಲಿ ಮುಳುಗಿರುತ್ತಿದ್ದ ಹಿಡಕಲ್ ಜಲಾಶಯದಲ್ಲಿದ್ದ ವಿಠ್ಠಲ ದೇವಸ್ಥಾನ ಈ ವರ್ಷ ನೀರು ಖಾಲಿಯಾದ ಪರಿಣಾಮ ಕಾಣಿಸಿಕೊಂಡಿತ್ತು. ಇದರಿಂದ ಭಾರಿ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆಯುತ್ತಿದ್ದರು. ಆದರೆ ಇದೀಗ ದೇವಸ್ಥಾನದ ಪರಿಸರದಲ್ಲಿ ನೀರು ತುಂಬಿಕೊಂಡಿದೆ.
ಬೆಳಗಾವಿ ಜಿಲ್ಲೆಯಲ್ಲಿ ಈಗಾಗಲೇ ಬರದ ಛಾಯೇ ಆವರಿಸಿದೆ. ಜಿಲ್ಲೆಯ ಬಹುತೇಕ ನದಿಗಳು ಸಂಪೂರ್ಣ ಒಣಗಿಹೋಗಿವೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ಸದ್ಯ ಸಂಪೂರ್ಣ ಖಾಲಿಯಾಗಿದೆ. ಹಿಡಕಲ್ ಜಲಾಶಯ ಡೆಡ್ ಸ್ಟೋರೇಜ್ ಹಂತಕ್ಕೆ ತಲುಪಿದೆ. ಹೀಗಾಗಿ ಡ್ಯಾಂನ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ಪುರಾತನ ದೇವಸ್ಥಾನವೊಂದು ದರ್ಶನಕ್ಕೆ ಮುಕ್ತವಾಗಿತ್ತು.
ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ವಿಠ್ಠಲ ದೇವಸ್ಥಾನವು ಭಕ್ತರ ದರ್ಶನಕ್ಕೆ ತೆರೆದುಕೊಂಡಿತ್ತು. ಕಳೆದ 12 ವರ್ಷಗಳ ಬಳಿಕ ಈ ದೇವಸ್ಥಾನವು ಸಂಪೂರ್ಣವಾಗಿ ಕಾಣಿಸಿಕೊಂಡಿದೆ. 1928 ರಲ್ಲಿ ಈ ದೇವಸ್ಥಾನವನ್ನು ನಿರ್ಮಾಣ ಮಾಡಲಾಗಿದೆ. ಆದರೆ, 1977ನೇ ಇಸವಿಯಲ್ಲಿ ಹಿಡಕಲ್ ಜಲಾಶಯ ನಿರ್ಮಾಣ ಮಾಡುವ ಸಂದರ್ಭದಲ್ಲಿ ವಿಠ್ಠಲ ದೇವಸ್ಥಾನವು ಸಂಪೂರ್ಣವಾಗಿ ಮುಳುಗಡೆಯಾಗಿತ್ತು. ಅದಾದ ಬಳಿಕ ಡ್ಯಾಂನಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದ ಸಂದರ್ಭಗಳಲ್ಲಿ ಮಾತ್ರ ಈ ದೇವಸ್ಥಾನ ಕಾಣ ಸಿಗುತ್ತದೆ.
ವರ್ಷದ 10 ತಿಂಗಳುಗಳು ಈ ದೇವಸ್ಥಾನವು ನೀರಿನಲ್ಲಿ ಮುಳುಗಡೆಯಾಗಿರುತ್ತದೆ. ಕೇವಲ ಎರಡು ತಿಂಗಳು ಮಾತ್ರ ದೂರದಿಂದ ನೋಡಿದರೆ ಅರ್ಧದಷ್ಟು ಮಾತ್ರ ಕಾಣಸಿಗುತ್ತದೆ. ವಿಠ್ಠಲ ದೇವಸ್ಥಾನವನ್ನು ಸಂಪೂರ್ಣ ಕಲ್ಲಿನಲ್ಲಿಯೇ ನಿರ್ಮಿಸಲಾಗಿದೆ. ಕಳೆದ 12 ವರ್ಷಗಳ ಹಿಂದೆ ಈ ದೇವಸ್ಥಾನವು ಕಂಡಿತ್ತು. ಹಿಡಕಲ್ ಡ್ಯಾಂ ಸಂಪೂರ್ಣ ಖಾಲಿಯಾಗಿದ್ದರಿಂದ ವಿಠ್ಠಲ ದೇವಸ್ಥಾನವನ್ನು ನೋಡಲು ಜನರು ತಂಡೋಪತಂಡವಾಗಿ ಆಗಮಿಸಿದ್ದರು. ದಿನನಿತ್ಯವೂ ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದು ದೇವರ ದರ್ಶನ ಪಡೆದುಕೊಳ್ಳುತ್ತಿದ್ದರು.
ಡ್ಯಾಂ ಖಾಲಿಯಾಗುತ್ತಿದ್ದಂತೆ ಬಹುತೇಕ ಕಡೆಗಳಲ್ಲಿ ಹಿನ್ನೀರಿನಲ್ಲಿ ಮುಚ್ಚಿಹೋಗಿದ್ದ ಪುರಾತನ ದೇವಸ್ಥಾನಗಳು ಪತ್ತೆಯಾಗುತ್ತಿವೆ. ಅದರಲ್ಲೂ ಹುನ್ನೂರಿನ ವಿಠ್ಠಲ ದೇವಸ್ಥಾನ ನೀರಿನಲ್ಲಿಯೇ ಇದ್ದರೂ ದೇವಸ್ಥಾನಕ್ಕೆ ಮಾತ್ರ ಒಂದಿಂಚೂ ಹಾನಿಯಾಗದೇ ಇರುವುದು ಆಶ್ಚರ್ಯಕರ.