ದೆಹಲಿ : ವಿಪಕ್ಷಗಳ ಆಕ್ಷೇಪ ಹಾಗೂ ಭಾರೀ ಗದ್ದಲದ ನಡುವೆ ವಕ್ಫ್ (ತಿದ್ದುಪಡಿ) ಮಸೂದೆ-2024 ಲೋಕಸಭೆಯಲ್ಲಿ ಬುಧವಾರ ಮಂಡನೆಯಾಗಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರೆನ್ ರಿಜಿಜು ಲೋಕಸಭೆ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಮಸೂದೆ ಮಂಡಿಸಿದರು.
ವಕ್ಫ್ ಆಸ್ತಿಗಳ ನಿಯಂತ್ರಣಕ್ಕಾಗಿ 1995ರ ವಕ್ಫ್ ಕಾಯಿದೆಯನ್ನು ತಿದ್ದುಪಡಿ ಮಾಡುವ ಮಸೂದೆಯನ್ನು ಮೊದಲ ಬಾರಿಗೆ ಆಗಸ್ಟ್ 2024ರಲ್ಲಿ ಲೋಕಸಭೆಯಲ್ಲಿ ಮಂಡಿಸಲಾಗಿತ್ತು.
ವಕ್ಫ್ ಎನ್ನುವುದು ಇಸ್ಲಾಮ್ ಧಾರ್ಮಿಕ ಕಾನೂನಿನ ಅಡಿ ಕೇವಲ ದಾನ, ದತ್ತಿಗೆ ಮಾತ್ರವೇ ಮೀಸಲಾದ ಅಸ್ತಿಗಳಾಗಿವೆ. ಈ ಆಸ್ತಿಗಳನ್ನು ಮಸೀದಿ, ಸ್ಮಶಾನದಂತಹ ಸಮದಾಯದ ನಿರ್ವಹಣೆಗೆ ಹಾಗೂ ಶಿಕ್ಷಣ ಸಂಸ್ಥೆಗಳು ಮತ್ತು ವೈದ್ಯಕೀಯ ಚಟುವಟಿಕೆಗಳಿಗೆ, ಬಡವರು ಮತ್ತು ವಿಕಲಚೇತನರ ಕಲ್ಯಾಣಕ್ಕೆ ಬಳಕೆ ಮಾಡಬಹುದಾಗಿದೆ. ಇದರ ಹೊರತಾಗಿ ಆಸ್ತಿಗಳನ್ನು ಮತ್ತಾವುದೇ ಉದ್ದೇಶಕ್ಕೆ ಬಳಕೆ ಮಾಡುವುದು, ಮಾರಾಟ ಮಾಡುವುದನ್ನು ಕಾನೂನು ನಿಷೇಧಿಸುತ್ತದೆ.
ವಕ್ಫ್ (ತಿದ್ದುಪಡಿ) ಮಸೂದೆ-2024ರಲ್ಲಿ ತರಲಾಗುತ್ತಿರುವ ದೊಡ್ಡ ಬದಲಾವಣೆಯೆಂದರೆ, ಯಾವುದೇ ಭೂಮಿಯನ್ನು ಮಂಡಳಿಗಳು ವಕ್ಫ್ ಆಸ್ತಿಯನ್ನಾಗಿ ಪರಿವರ್ತಿಸಲು ಈ ಮೊದಲು ಅನುಮತಿಸಿದ್ದ ಸೆಕ್ಷನ್ 40ರ ರದ್ದತಿಯಾಗಿದೆ. ಬುಧವಾರ ಸಂಸತ್ತಿನಲ್ಲಿ ನಡೆದ ಚರ್ಚೆಯಲ್ಲಿ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಇದನ್ನು ವಕ್ಫ್ ಕಾಯಿದೆಯ “ಅತ್ಯಂತ ಕಠೋರ” ನಿಬಂಧನೆ ಎಂದು ಕರೆದರು ಹಾಗೂ ಇದನ್ನಯ ತಿದುಪಡಿ ಮಸೂದೆಯಲ್ಲಿ ಕೈಬಿಡಲಾಗುತ್ತಿದೆ ಎಂದು ಹೇಳಿದರು.
“ಕಾಯ್ದೆಯಲ್ಲಿನ ಅತ್ಯಂತ ಕಠಿಣವಾದ ಉಪಬಂಧವೆಂದರೆ ಸೆಕ್ಷನ್ 40, ಅದರ ಅಡಿಯಲ್ಲಿ ವಕ್ಫ್ ಮಂಡಳಿಯು ಯಾವುದೇ ಭೂಮಿಯನ್ನು ವಕ್ಫ್ ಆಸ್ತಿ ಎಂದು ಘೋಷಿಸಬಹುದು. ಆದರೆ ನಾವು ಆ ನಿಬಂಧನೆಯನ್ನು ತೆಗೆದುಹಾಕಿದ್ದೇವೆ” ಎಂದು ರಿಜಿಜು ಹೇಳಿದರು.
ವಕ್ಫ್ ತಿದ್ದುಪಡಿ ಮಸೂದೆಯನ್ನು ಉಮೀದ್ (UMEED) ಮಸೂದೆ, ಏಕೀಕೃತ ವಕ್ಫ್ ನಿರ್ವಹಣಾ ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ ಮಸೂದೆ ಎಂದು ಮರುನಾಮಕರಣ ಮಾಡಲಾಗುವುದು ಎಂದು ಅವರು ಹೇಳಿದರು.
ಪ್ರಸ್ತುತ ವಕ್ಫ್ ಕಾಯ್ದೆಯ ಸೆಕ್ಷನ್ 40 ಅನ್ನು ಕೆಲವರು ತಮ್ಮ ಸ್ವಾರ್ಥಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕಾಗಿಯೇ ವಕ್ಫ್ ಆಸ್ತಿ ಲಕ್ಷಗಟ್ಟಲೆ ಏರಿಕೆಯಾಗಿದೆ ಎಂದು ಅವರು ಹೇಳಿದರು.
ಸರ್ಕಾರದ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ವಕ್ಫ್ ಬೋರ್ಡ್ಗಳು 8.72 ಲಕ್ಷ ಆಸ್ತಿಗಳನ್ನು ನಿಯಂತ್ರಿಸುತ್ತವೆ, ಇದು 9.4 ಲಕ್ಷ ಎಕರೆಗಳಿಗಿಂತ ಹೆಚ್ಚಾಗಿದೆ. ವಕ್ಫ್ ಅಸೆಟ್ ಮ್ಯಾನೇಜ್ಮೆಂಟ್ ಸಿಸ್ಟಮ್ ಆಫ್ ಇಂಡಿಯಾದ ಅಧಿಕೃತ ವೆಬ್ಸೈಟ್ ಪ್ರಕಾರ, ಭಾರತದಾದ್ಯಂತ 30 ವಕ್ಫ್ ಬೋರ್ಡ್ಗಳಿವೆ.
ವಕ್ಫ್ ಕಾಯಿದೆಯ ಸೆಕ್ಷನ್ 40 ರ ಅಡಿಯಲ್ಲಿ, ವಕ್ಫ್ ಬೋರ್ಡ್ಗಳಿಗೆ ಆಸ್ತಿಯು ವಕ್ಫ್ ಆಸ್ತಿಯೇ ಎಂದು ನಿರ್ಧರಿಸಲು ಅಧಿಕಾರವನ್ನು ನೀಡಲಾಯಿತು. ಈ ಮೊದಲಿನ ಕಾಯಿದೆಯಲ್ಲಿ ವಕ್ಫ್ ಟ್ರಿಬ್ಯೂನಲ್ ನಿರ್ಧಾರವೇ ಅಂತಿಮವಾಗಿದೆ. ಕಾಯಿದೆ ಅಡಿಯಲ್ಲಿ, ವಕ್ಫ್ ನ್ಯಾಯಮಂಡಳಿಯ ನಿರ್ಧಾರಗಳೇ ಅಂತಿಮವಾಗಿರುತ್ತವೆ ಮತ್ತು ನ್ಯಾಯಾಲಯಗಳಲ್ಲಿ ಅದರ ನಿರ್ಧಾರಗಳ ವಿರುದ್ಧ ಮೇಲ್ಮನವಿಗಳನ್ನು ಸಲ್ಲಿಸುವಂತಿರಲಿಲ್ಲ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈಗ ವಕ್ಫ್ ತಿದ್ದುಪಡಿ ಮಸೂದೆಯು ವಕ್ಫ್ ಟ್ರಿಬ್ಯೂನಲ್ನ ನಿರ್ಧಾರಗಳು ಅಂತಿಮವೆಂದು ಪರಿಗಣಿಸುವ ನಿಬಂಧನೆ ತೆಗೆದುಹಾಕುತ್ತದೆ. ಮತ್ತು ಅದರ ಆದೇಶಗಳನ್ನು 90 ದಿನಗಳೊಳಗೆ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬಹುದು.
ಸಚಿವ ರಿಜಿಜು ಪ್ರಕಾರ ವಕ್ಫ್ ಆಸ್ತಿಗಳ ಮೇಲೆ 40,000 ಕ್ಕೂ ಹೆಚ್ಚು ವ್ಯಾಜ್ಯಗಳಿವೆ. “ವಕ್ಫ್ ಬೋರ್ಡ್ ಮತ್ತು ಟ್ರಿಬ್ಯೂನಲ್ ನಿರ್ಧಾರಗಳಿಂದ ಅತೃಪ್ತರಾಗಿದ್ದರೆ, ಈಗ ಯಾವುದೇ ವ್ಯಕ್ತಿ ನ್ಯಾಯಾಲಯಕ್ಕೆ ಹೋಗಬಹುದು” ಎಂದು ಅವರು ಹೇಳಿದರು, ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ ಎಂದು ಹೈಲೈಟ್ ಮಾಡಿದರು.
ಯಾವುದೇ ಆಸ್ತಿಯನ್ನು ವಕ್ಫ್ ಆಸ್ತಿಯೇ ಎಂಬುದನ್ನು ನಿರ್ಧರಿಸುವ ಅಧಿಕಾರ ಜಿಲ್ಲಾಧಿಕಾರಿಗೆ ಇರುತ್ತದೆ ಎಂದು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಸೆಕ್ಷನ್ 40 ರ “ದುರುಪಯೋಗ” ದ ಪರಿಣಾಮವಾಗಿ ಖಾಸಗಿ ಆಸ್ತಿಗಳನ್ನು ವಕ್ಫ್ ಆಸ್ತಿಗಳಾಗಿ ವ್ಯಾಪಕವಾಗಿ ಪರಿವರ್ತಿಸಲಾಗಿದೆ ಎಂದು ಬಿಜೆಪಿ ನಾಯಕರು ಹೇಳುತ್ತಾರೆ.
“ಕ್ಯಾಥೋಲಿಕ್ ಕ್ರಿಶ್ಚಿಯನ್ ಸಮುದಾಯವು ವಕ್ಫ್ ಮಸೂದೆಯನ್ನು ಶೀಘ್ರವಾಗಿ ಅಂಗೀಕರಿಸಬೇಕೆಂದು ಒತ್ತಾಯಿಸಿದೆ” ಎಂದು ರಿಜಿಜು ಹೇಳಿದರು. ಕೇರಳದ ಕೊಚ್ಚಿಯಲ್ಲಿರುವ ಚೆರೈ ಎಂಬ ಮೀನುಗಾರಿಕಾ ಹಳ್ಳಿಯ ಉದಾಹರಣೆಯನ್ನು ಅವರು ಪ್ರಸ್ತುತಪಡಿಸಿದರು, ಅಲ್ಲಿ 600 ಕ್ಕೂ ಹೆಚ್ಚು ಕ್ರಿಶ್ಚಿಯನ್ ಕುಟುಂಬಗಳಿವೆ. ಅಲ್ಲಿ ಈ ಕುಟುಂಬಗಳು ಮತ್ತು ಚರ್ಚ್ ತಮ್ಮ ಭೂಮಿಯನ್ನು ವಕ್ಫ್ ಭೂಮಿ ಎಂದು ಹೇಳುತ್ತಿರುವುದರ ಕುರಿತು ಜಂಟಿ ಸಂಸದೀಯ ಸಮಿತಿಯನ್ನು ಸಂಪರ್ಕಿಸಿದರು. ಅಲ್ಲದೆ, ಗುರುದ್ವಾರ ಭೂಮಿಯನ್ನು ವಕ್ಫ್ ಆಸ್ತಿ ಎಂದು ಹೇಳಿಕೊಂಡ ಹರಿಯಾಣದ ಜತ್ಲಾನಾ ಗ್ರಾಮದ ಬಗ್ಗೆಯೂ ರಿಜುಜು ಹೇಳಿದರು.
ಈಗ ಉಮೀದ್ (UMEED) ಬಿಲ್ ಎಂದು ಮರುನಾಮಕರಣಗೊಂಡಿರುವ ವಕ್ಫ್ ತಿದ್ದುಪಡಿ ಮಸೂದೆಯು ಆಸ್ತಿಗಳನ್ನು ಧಾರ್ಮಿಕ ಉದ್ದೇಶಗಳಿಗಾಗಿ ದೀರ್ಘಾವಧಿಯ ಬಳಕೆಯ ಆಧಾರದ ಮೇಲೆ ವಕ್ಫ್ ಆಸ್ತಿ ಎಂದು ಪರಿಗಣಿಸಬಹುದು ಎಂದು ಹೇಳುತ್ತದೆ.
ಕನಿಷ್ಠ ಐದು ವರ್ಷಗಳ ಕಾಲ ಇಸ್ಲಾಂ ಧರ್ಮವನ್ನು ಅನುಸರಣೆ ಮಾಡುವ ವ್ಯಕ್ತಿ ಮಾತ್ರ ವಕ್ಫ್ ಘೋಷಿಸಬಹುದು ಮತ್ತು UMEED ಬಿಲ್ ಪ್ರಕಾರ ಆ ಆಸ್ತಿಯು ಸ್ವಯಂ-ಮಾಲೀಕತ್ವವನ್ನು ಹೊಂದಿರಬೇಕು ಎಂದು ಅದು ಹೇಳುತ್ತದೆ. ಸೆಕ್ಷನ್ 40 ಅನ್ನು ತೆಗೆದು ಹಾಕಿದ ನಂತರ ಯಾವುದೇ ಭೂಮಿಯನ್ನು ಏಕಪಕ್ಷೀಯವಾಗಿ ವಕ್ಫ್ ಭೂಮಿ ಎಂದು ಘೋಷಿಸಲಾಗುವುದಿಲ್ಲ.
ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ ವಕ್ಫ್ ಕಾನೂನುಗಳಿಗೆ ಪಕ್ಷವು “ಪ್ರಶ್ನಾತೀತ” ಬದಲಾವಣೆಗಳನ್ನು ಮಾಡಿತ್ತು ಎಂದು ವಾಗ್ದಾಳಿ ನಡೆಸಿದ ಸಂಸದೀಯ ಖಾತೆ ಸಚಿವ ಕಿರಣ ರಿಜಿಜು, 123 ಪ್ರಮುಖ ಕಟ್ಟಡಗಳನ್ನು ಡಿನೋಟಿಫಿಕೇಶನ್ ಮಾಡಿ ವಕ್ಫ್ಗೆ ನೀಡಲಾಗಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದನ್ನು ತಡೆಯದಿದ್ದರೆ ಸಂಸತ್ತನ್ನೇ ವಕ್ಫ್ಗೆ ನೀಡುತ್ತಿತ್ತು ಎಂದು ಟೀಕಿಸಿದ್ದಾರೆ.
“ಸಂಸತ್ತನ್ನೇ ವಕ್ಫ್ ಆಸ್ತಿ ಎಂದು ಕ್ಲೇಮ್ ಮಾಡಿದರು..:ರಿಜುಜು
“1970 ರಿಂದ ದೆಹಲಿಯಲ್ಲಿ ನಡೆಯುತ್ತಿರುವ ಪ್ರಕರಣವು ಸಂಸತ್ತಿನ ಕಟ್ಟಡ ಸೇರಿದಂತೆ ಹಲವಾರು ಆಸ್ತಿಗಳನ್ನು ವಕ್ಫ್ ಆಸ್ತಿ ಹೇಳುವುದನ್ನು ಒಳಗೊಂಡಿತ್ತು. ದೆಹಲಿ ವಕ್ಫ್ ಮಂಡಳಿಯು ಇವುಗಳನ್ನು ತನ್ನ ಆಸ್ತಿಯೆಂದು ಕ್ಲೇಮ್ ಮಾಡಿತ್ತು …ಪ್ರಕರಣವು ನ್ಯಾಯಾಲಯದಲ್ಲಿದೆ. ಆದರೆ ನಂತರ ಯುಪಿಎ ಸರ್ಕಾರವು ಇವುಗಳಲ್ಲಿ 123 ಆಸ್ತಿಗಳನ್ನು ಡಿನೋಟಿಫೈ ಮಾಡಿ ವಕ್ಫ್ ಮಂಡಳಿಗೆ ನೀಡಿತು” ಎಂದು ಕೇಂದ್ರ ಸಚಿವರು ವಾಗ್ದಾಳಿ ನಡೆಸಿದರು.
“ನಾವು ಇಂದು ಈ ತಿದ್ದುಪಡಿಯನ್ನು ಮಂಡಿಸದಿದ್ದರೆ ನಾವು ಕುಳಿತಿರುವ ಕಟ್ಟಡವನ್ನು ಸಹ ವಕ್ಫ್ ಆಸ್ತಿ ಎಂದು ಹೇಳಬಹುದಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಅಧಿಕಾರಕ್ಕೆ ಬರದಿದ್ದರೆ … ಇನ್ನೂ ಹಲವಾರು ಆಸ್ತಿಗಳನ್ನು ಡಿ-ನೋಟಿಫೈ ಮಾಡಲಾಗುತ್ತಿತ್ತು” ಎಂದು ಕೇಂದ್ರ ಸಚಿವರು ಹೇಳಿದರು.
ಪ್ರತಿಪಕ್ಷಗಳು ಇಂತಹ ಬದಲಾವಣೆಗಳ ವಿರುದ್ಧ ನಿಂತಿವೆ ಎಂದು ಟೀಕಿಸಿದರು, ಮಸೀದಿಗಳ ನಿರ್ವಹಣೆಗೆ ಯಾವುದೇ ಬದಲಾವಣೆಗಳಿಲ್ಲ ಮತ್ತು ತಿದ್ದುಪಡಿಗಳು “ಆಸ್ತಿ ನಿರ್ವಹಣೆ ಸಮಸ್ಯೆ”ಗೆ ಸಂಬಂಧಿಸಿದೆ ಎಂದು ಅವರು ಇತ್ತಿ ಹೇಳಿದರು.
“ಸರ್ಕಾರಕ್ಕೆ ಧಾರ್ಮಿಕ ಭಾವನೆಗಳೊಂದಿಗೆ ಯಾವುದೇ ಸಂಬಂಧವಿಲ್ಲ. ವಕ್ಫ್ ಬೋರ್ಡ್ಗಳ ಪಾತ್ರವು ವಕ್ಫ್ ಆಸ್ತಿಗಳ ನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡುವುದು… ಇದು (ಉದ್ದೇಶಿತ ಕಾನೂನು) ಸಂಪೂರ್ಣವಾಗಿ ಆಡಳಿತ ಮತ್ತು ಮೇಲ್ವಿಚಾರಣೆಯ ನಿಬಂಧನೆಯಾಗಿದೆ. ಇದು ಕೇವಲ ಆಸ್ತಿ ನಿರ್ವಹಣೆಯ ವಿಷಯವಾಗಿದೆ. ಯಾರಾದರೂ ಈ ಮೂಲಭೂತ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಲು ವಿಫಲವಾದರೆ … ಅಥವಾ ಆಯ್ಕೆ ಮಾಡದಿದ್ದರೆ … ನನ್ನ ಬಳಿ ಉತ್ತರವಿಲ್ಲ ಎಂದು ರಿಜಿಜು ಹೇಳಿದರು.
“ತಮಿಳುನಾಡಿನ ಸುರೇಂದ್ರೇಶ್ವರ ದೇವಸ್ಥಾನವನ್ನು ವಕ್ಫ್ ಆಸ್ತಿ ಎಂದು ಘೋಷಿಸಲಾಯಿತು… ಕರ್ನಾಟಕದಲ್ಲಿ ಸಾವಿರಾರು ಎಕರೆ ಭೂಮಿ… ಹರಿಯಾಣದಲ್ಲಿ ಸಿಖ್ ಗುರುದ್ವಾರವನ್ನು ವಕ್ಫ್ ಆಸ್ತಿ ಎಂದು ಘೋಷಿಸಲಾಯಿತು..”ರೈಲ್ವೆ ಮತ್ತು ರಕ್ಷಣೆ ಇಲಾಖೆಯ ನಂತರ ದೇಶದ ಮೂರನೇ ಅತಿ ದೊಡ್ಡ ಆಸ್ತಿಗಳನ್ನು ವಕ್ಫ್ ಮಂಡಳಿಗಳು ನಿಯಂತ್ರಿಸುತ್ತವೆ, ಆದರೆ ಅವು ರಾಷ್ಟ್ರಕ್ಕೆ ಸೇರಿವೆ. ವಕ್ಫ್ ಆಸ್ತಿಗಳು ಖಾಸಗಿಯಾಗಿವೆ…” ಎಂದು ಅವರು ಹೇಳಿದರು, ಕೆಲವು ವಿಪಕ್ಷದ ಸಂಸದರು ಎಚ್ಚರಿಸಿದಂತೆ ಕಾನೂನಿಗೆ ಪ್ರಸ್ತಾಪಿಸಲಾದ ಬದಲಾವಣೆಗಳಿಂದ ಹಿಂದೆ ಸರಿಯುವುದಿಲ್ಲ ಎಂದು ಒತ್ತಿ ಹೇಳಿದರು.
ವಕ್ಫ್ ತಿದ್ದುಪಡಿ ಮಸೂದೆಯ ಪ್ರಮುಖ ಅಂಶಗಳು:
ವಕ್ಫ್ ಮಂಡಳಿಗಳು ಮತ್ತು ಆಸ್ತಿಗಳ ನಿರ್ವಹಣೆ ಮತ್ತು ದಕ್ಷತೆಯನ್ನು ಸುಧಾರಿಸುವ ವಿಶಾಲ ಉದ್ದೇಶದಿಂದ ಕಾಯಿದೆಯನ್ನು ಏಕೀಕೃತ ವಕ್ಫ್ ನಿರ್ವಹಣೆ, ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ ಕಾಯಿದೆ, 1995 ಎಂದು ಮಸೂದೆ ಮರುನಾಮಕರಣ ಮಾಡುತ್ತದೆ.
ಘೋಷಣೆ, ದೀರ್ಘಾವಧಿಯ ಬಳಕೆ ಅಥವಾ ದತ್ತಿ ಮೂಲಕ ವಕ್ಫ್ ರಚನೆಗೆ ಕಾಯಿದೆ ಅವಕಾಶ ನೀಡಿದ್ದರೂ, ಕನಿಷ್ಠ ಐದು ವರ್ಷಗಳ ಕಾಲ ಇಸ್ಲಾಂ ಧರ್ಮವನ್ನು ಆಚರಿಸುವ ವ್ಯಕ್ತಿ ಮಾತ್ರವೇ ವಕ್ಫ್ ಘೋಷಿಸಬಹುದು ಎಂದು ಈ ತಿದ್ದುಪಡಿ ಮಸೂದೆ ಹೇಳುತ್ತದೆ.
ವಕ್ಫ್ ಎಂದು ಘೋಷಿಸುವ ಆಸ್ತಿ ಆ ವ್ಯಕ್ತಿಯದ್ದೇ ಆಗಿರಬೇಕು ಎಂದು ಅದು ಸ್ಪಷ್ಟಪಡಿಸುತ್ತದೆ. ಧಾರ್ಮಿಕ ಉದ್ದೇಶಗಳಿಗಾಗಿ ದೀರ್ಘಕಾಲದ ಬಳಕೆಯ ಆಧಾರದಲ್ಲಿ ಯಾವುದೇ ಆಸ್ತಿಗಳನ್ನು ವಕ್ಫ್ ಎಂದು ಪರಿಗಣಿಸುವುದನ್ನು ಇದು ತೆಗೆದುಹಾಕುತ್ತದೆ. ಮಹಿಳಾ ಉತ್ತರಾಧಿಕಾರಿಗಳು ಸೇರಿದಂತೆ ದಾನಿಗಳ ಉತ್ತರಾಧಿಕಾರಿಗೆ ವಕ್ಫ್-ಅಲಾಲ್-ಔಲಾದ್ ಆನುವಂಶಿಕ ಹಕ್ಕುಗಳನ್ನು ನಿರಾಕರಿಸಬಾರದು ಎಂದು ಅದು ವಿವರಿಸುತ್ತದೆ.
ಆಸ್ತಿಯು ವಕ್ಫ್ ಆಗಿದೆಯೇ ಎಂದು ಪರಿಶೀಲಿಸಲು ಮತ್ತು ನಿರ್ಧರಿಸಲು ಕಾಯಿದೆಯು ವಕ್ಫ್ ಮಂಡಳಿಗೆ ನೀಡಿರುವ ಅಧಿಕಾರವನ್ನು ಮಸೂದೆ ತೆಗೆದುಹಾಕುತ್ತದೆ.
ಎಲ್ಲಾ ಮಂಡಳಿ ಸದಸ್ಯರು ಮುಸ್ಲಿಮರಾಗಿರಬೇಕು ಎಂದು ಈ ಹಿಂದಿನ ಕಾಯಿದೆ ಹೇಳಿದ್ದರೆ, ಪ್ರಸ್ತುತ ಮಸೂದೆ ಇಬ್ಬರು ಸದಸ್ಯರು ಮುಸ್ಲಿಮೇತರರಾಗಿರಬೇಕು ಎಂದು ಹೇಳುತ್ತದೆ. ಸಂಸತ್ತಿನ ಸದಸ್ಯರು, ಮಾಜಿ ನ್ಯಾಯಾಧೀಶರು ಮತ್ತು ಕಾಯಿದೆಯ ಪ್ರಕಾರ ಮಂಡಳಿಗೆ ನೇಮಕಗೊಂಡ ಗಣ್ಯ ವ್ಯಕ್ತಿಗಳು ಮುಸ್ಲಿಮರಾಗಿರಬೇಕಾಗಿಲ್ಲ. ಮುಸ್ಲಿಂ ಸಂಘಟನೆಗಳ ಪ್ರತಿನಿಧಿಗಳು, ಇಸ್ಲಾಮಿಕ್ ಕಾನೂನಿನಲ್ಲಿ ವಿದ್ವಾಂಸರು ಮತ್ತು ವಕ್ಫ್ ಮಂಡಳಿಗಳ ಅಧ್ಯಕ್ಷರು ಮುಸ್ಲಿಮರಾಗಿರಬೇಕು. ಮುಸ್ಲಿಂ ಸದಸ್ಯರಲ್ಲಿ ಇಬ್ಬರು ಮಹಿಳೆಯರಿರಬೇಕು ಎಂದು ಮಸೂದೆ ಹೇಳುತ್ತದೆ.
ನೋಂದಣಿ, ವಕ್ಫ್ ಖಾತೆಗಳ ಪ್ರಕಟಣೆ ಮತ್ತು ವಕ್ಫ್ ಮಂಡಳಿಗಳ ಪ್ರಕ್ರಿಯೆಗಳ ಪ್ರಕಟಣೆಗೆ ಸಂಬಂಧಿಸಿದಂತೆ ನಿಯಮ ರಚಿಸಲು ಕೇಂದ್ರ ಸರ್ಕಾರಕ್ಕೆ ಮಸೂದೆ ಅಧಿಕಾರ ನೀಡುತ್ತದೆ. ಕಾಯಿದೆಯಡಿಯಲ್ಲಿ, ರಾಜ್ಯ ಸರ್ಕಾರಗಳು ಯಾವುದೇ ಹಂತದಲ್ಲಿ ವಕ್ಫ್ ಖಾತೆಗಳ ಲೆಕ್ಕ ಪರಿಶೋಧನೆ ನಡೆಸಬಹುದು ಎಂದು ಹೇಳುತ್ತದೆ. ಮಸೂದೆಯು ಕೇಂದ್ರ ಸರ್ಕಾರಕ್ಕೆ ಸಿಎಜಿ ಅಥವಾ ಗೊತ್ತುಪಡಿಸಿದ ಅಧಿಕಾರಿಯಿಂದ ಲೆಕ್ಕಪರಿಶೋಧನೆ ಮಾಡಲು ಅಧಿಕಾರ ನೀಡುತ್ತದೆ.
ಶಿಯಾ ವಕ್ಫ್ ರಾಜ್ಯದಲ್ಲಿನ ಎಲ್ಲಾ ವಕ್ಫ್ ಆಸ್ತಿಗಳು ಅಥವಾ ವಕ್ಫ್ ಆದಾಯದ 15% ಕ್ಕಿಂತ ಹೆಚ್ಚು ಇದ್ದರೆ ಸುನ್ನಿ ಮತ್ತು ಶಿಯಾ ಪಂಗಡಗಳಿಗೆ ಪ್ರತ್ಯೇಕ ವಕ್ಫ್ ಮಂಡಳಿಗಳನ್ನು ಸ್ಥಾಪಿಸಲು ಕಾಯಿದೆ ಅವಕಾಶ ನೀಡಿತ್ತು. ಇದೀಗ ತಿದ್ದುಪಡಿ ಮಸೂದೆ ಅಘಾಖಾನಿ ಮತ್ತು ಬೊಹ್ರಾ ಪಂಗಡಗಳಿಗೆ ಕೂಡ ಪ್ರತ್ಯೇಕ ವಕ್ಫ್ ಮಂಡಳಿ ರಚಿಸಿಕೊಳ್ಳಲು ಅನುಮತಿ ನೀಡಿದೆ.
ಕಾಯಿದೆ ಪ್ರಕಾರ ವಕ್ಫ್ ನ್ಯಾಯಮಂಡಳಿಯ ನಿರ್ಧಾರಗಳೇ ಅಂತಿಮವಾಗಿತ್ತು. ನ್ಯಾಯಾಲಯದಲ್ಲಿ ಅದರ ನಿರ್ಧಾರ ಪ್ರಶ್ನಿಸುವಂತಿರಲಿಲ್ಲ. ಮಂಡನೆಯಾಗಿರುವ ಮಸೂದೆಯ ಪ್ರಕಾರ ವಕ್ಫ್ ನ್ಯಾಯಮಂಡಳಿಗಳ ಆದೇಶಗಳನ್ನು 90 ದಿನಗಳಲ್ಲಿ ಹೈಕೋರ್ಟ್ಗಳಲ್ಲಿ ಪ್ರಶ್ನಿಸಬಹುದಾಗಿದೆ.