ಬೆಳಗಾವಿ :
ಪ್ರಜಾಪ್ರಭುತ್ವದ ಯಶಸ್ಸಿಗೆ ಮತಚಲಾವಣೆಯು ಅತ್ಯಂತ ನಿರ್ಣಾಯಕವಾದುದು. ಮತಚಲಾವಣೆಯಲ್ಲಿ ದೇಶದ ಭವಿಷ್ಯವಿದೆ ಎಂದು ಪ್ರಾಚಾರ್ಯ ಡಾ. ಶಂಕರ ಎಸ್. ತೇರದಾಳ ಅಭಿಪ್ರಾಯ ಪಟ್ಟರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗ, ಚುನಾವಣಾ ಸಾಕ್ಷರತಾ ಕ್ಲಬ್ ಹಾಗೂ ಮತದಾರರ ಜಾಗೃತ ವೇದಿಕೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ, ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿದರು.
ಭಾರತವು ಜಗತ್ತಿನಲ್ಲಿ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ. ಭಾರತದ ಸಂವಿಧಾನವು ಸಾರ್ವತ್ರಿಕ ವಯಸ್ಕ ಮತದಾನದ ಅವಕಾಶ ನೀಡಿದೆ. ಧರ್ಮ, ಜಾತಿ, ಜನಾಂಗಗಳ ಭೇದ-ಭಾವವಿಲ್ಲದೇ ನಿರ್ಭಯವಾಗಿ ಮತದಾನ ಮಾಡಲು ಅವಕಾಶ ಕಲ್ಪಿಸಿದೆ. ಯುವಕರು ಪ್ರಜಾಪ್ರಭುತ್ವದ ಜಾತ್ರೆಯಾದ ಚುನಾವಣೆಯಲ್ಲಿ ಉತ್ಸಾಹದಿಂದ ಭಾಗಿಯಾಗಿ ಮತಚಲಾವಣೆ ಮಾಡಬೇಕು. ಜೊತೆಗೆ ಶೇಕಡಾ ನೂರರಷ್ಟು ಮತದಾನವಾಗಲು ನಾವೆಲ್ಲರೂ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ಇದರಿಂದ ಒಳ್ಳೆಯ, ಸುದೃಢ ಸರ್ಕಾರ ಆಯ್ಕೆ ಸಾಧ್ಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಪ್ರಕಾಶ ಕಟ್ಟಿಮನಿ ಅವರು ಪ್ರಜಾಪ್ರಭುತ್ವ ಯಶಸ್ವಿಗೆ ಜಾಗೃತ ಮತದಾರರ ಪಾತ್ರ ಮಹತ್ವದ್ದಾಗಿದೆ. ಮತದಾನ ನಮ್ಮೆಲ್ಲರ ಹಕ್ಕು. ಜೊತೆಗೆ ಕರ್ತವ್ಯವೂ ಆಗಿದೆ. ಕಡ್ಡಾಯ ಮತದಾನ ಮಾಡುವುದರ ಮೂಲಕ ಪ್ರಜಾಪ್ರಭುತ್ವದಲ್ಲಿ ನಿಮ್ಮ ಹೊಣೆಗಾರಿಕೆಯನ್ನು ಸಾದರಪಡಿಸಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾಡಳಿತ ಆಯೋಜಿಸಿದ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಡಾ. ಮಲ್ಲೇಶ ದೊಡ್ಡಲಕ್ಕಣ್ಣವರ ನಿರೂಪಿಸಿದರು, ಪ್ರಕಾಶ ಕಮತಿ ವಂದಿಸಿದರು. ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.