ಬೆಳಗಾವಿ :
ಭಾರತ ಸಂಸದೀಯ ಪ್ರಜಾಪ್ರಭುತ್ವವನ್ನು ಹೊಂದಿದ್ದು, ಸಂಸತ್ತು ಹಾಗೂ ರಾಜ್ಯ ಶಾಸಕಾಂಗದ ಸದನಗಳಿಗೆ ಸಾರ್ವತ್ರಿಕ ವಯಸ್ಕ ಮತದಾನದ ಮೂಲಕ ಪ್ರಜೆಗಳು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ಭಾರತ ಜಗತ್ತಿನಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿದ್ದು, ಪ್ರತಿಯೊಬ್ಬ ನಾಗರಿಕನಿಗೂ ಚುನಾವಣೆ ಪ್ರಕ್ರಿಯೆ ಬಗ್ಗೆ ಅರಿವು ಇರುವುದು ಅವಶ್ಯಕವಾಗಿದೆ. ಮತದಾನ ನಮ್ಮೆಲ್ಲರ ಅಮೂಲ್ಯವಾದ ಹಕ್ಕಾಗಿದೆ, ಅದನ್ನು ದೇಶದ ಹಿತಕ್ಕಾಗಿ ಚಲಾಯಿಸಬೇಕು ಎಂದು ಪ್ರಾಚಾರ್ಯೆ ಮಂಗಳಗೌರಿ ಗಡ್ಡಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಶನಿವಾರ ತುಮ್ಮರಗುದ್ದಿಯ (ಪ್ರಸ್ತುತ ಉಚಗಾವಿನಲ್ಲಿರುವ) ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್ ವತಿಯಿಂದ ಸಂಯೋಜಿಸಲಾದ ಶಾಲಾ ಸಂಸತ್ತು ಚುನಾವಣೆ ಅಂಗವಾಗಿ ಹಮ್ಮಿಕೊಂಡ ಮತದಾನ ಪ್ರಕ್ರಿಯೆ ಉದ್ಘಾಟಿಸಿ ಮಾತನಾಡಿದರು.
ಚುನಾವಣಾ ಸಾಕ್ಷರತಾ ಕ್ಲಬ್ ನ ಸಂಯೋಜಕಿ ಸುಮತಿ ಬಳೋಲ ಮಾತನಾಡಿ, ಪ್ರಜಾಪ್ರಭುತ್ವ ಯಶಸ್ವಿಯಾಗಲು ಶೇ. ನೂರರಷ್ಟು ಮತದಾನದ ಅವಶ್ಯಕತೆ ಇದೆ. ಹೀಗಾಗಿ ಸರ್ಕಾರ ಶಾಲಾ ಹಂತದಲ್ಲಿಯೇ ಚುನಾವಣಾ ಸಾಕ್ಷರತಾ ಕ್ಲಬ್ಗಳ ಮೂಲಕ ವಿದ್ಯಾರ್ಥಿಗಳಿಗೆ ಚುನಾವಣಾ ಪ್ರಕ್ರಿಯೆಗಳಾದ ಮತದಾರ ಪಟ್ಟಿ ಸಿದ್ಧತೆ, ಪರಿಷ್ಕರಣೆ, ಚುನಾವಣಾ ಘೋಷಣೆ, ನಾಮಪತ್ರ ಸಲ್ಲಿಕೆ, ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂತೆಗೆತ, ಚುನಾವಣಾ ಪ್ರಚಾರ, ಮತದಾನ, ಮತ ಎಣಿಕೆಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಈ ಕುರಿತು ಅರಿವು ಮೂಡಿಸಲು ಶಾಲಾ ಸಂಸತ್ತು ಚುನಾವಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಪ್ರಯೋಜನ ಪಡೆದುಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಶಾಲಾ ಸಂಸತ್ತು ಚುನಾವಣೆಯಲ್ಲಿ ಮತದಾನದ ಪ್ರಕ್ರಿಯೆಯನ್ನು ಮೊಬೈಲ್ ಮೂಲಕ ವೋಟಿಂಗ್ ಆಫ್ ಬಳಿಸಿ ವಿದ್ಯುನ್ಮಾನ ಮತಯಂತ್ರದ ಬಗ್ಗೆ ಅರಿವು ಮೂಡಿಸಲಾಯಿತು.
ಶಾಲಾ ಸಂಸತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಸಮಾಜ ವಿಜ್ಞಾನ ಶಿಕ್ಷಕಿ ಸುಮತಿ ಬಳೋಲ ಹಾಗೂ ಗಣಕಯಂತ್ರ ಶಿಕ್ಷಕ ಗುರುರಾಜ ಬಳೂಟಗಿ, ಎ.ಪಿ.ಆರ್.ಒ.ಗಳಾಗಿ, ಗಣಿತ ಶಿಕ್ಷಕಿ ಹೇಮಾ ಸಿಮಾನಿ ಹಾಗೂ ಇಂಗ್ಲಿಷ್ ಶಿಕ್ಷಕಿ ನೀಲಾವತಿ ಹುನ್ನೂರ ಪಿ.ಆರ್.ಒ.ಗಳಾಗಿ, ಕಲಾ ಶಿಕ್ಷಕಿ ಈರಮ್ಮ ನೇಸರಗಿ ಹಾಗೂ ವಿಜ್ಞಾನ ಶಿಕ್ಷಕಿ ಸುಜಾತಾ ಪಿ.ವೋ.ಗಳಾಗಿ ಹಾಗೂ ದೈಹಿಕ ಶಿಕ್ಷಕ ರವಿ ಪೂಜಾರಿ ಶಿಸ್ತು ಸಮಿತಿ ಮುಖ್ಯಸ್ಥರಾಗಿ ಕಾರ್ಯ ನಿರ್ವಸಿದರು.
ಈ ಪ್ರಕ್ರಿಯೆಯಲ್ಲಿ ಶಾಲೆಯ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದರು.