ನವದೆಹಲಿ: ಇಡೀ ದೇಶದ ಜನರಲ್ಲಿ ತೀವ್ರ ಕುತೂಹಲ ಮೂಡಿಸಿರುವ ದೇಶದ ಅತ್ಯಂತ ದೊಡ್ಡ ರಾಜ್ಯಗಳಲ್ಲಿ ಒಂದಾಗಿರುವ ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆ ಆರಂಭವಾಗಿದೆ. ಬಿಜೆಪಿ ನೇತೃತ್ವದ ಎನ್ಡಿಎ ಮತ್ತೆ ಅಧಿಕಾರಕ್ಕೆ ಬರಲು ಹವಣಿಸುತ್ತಿದ್ದರೆ ಬಿಜೆಪಿಯಿಂದ ಅಧಿಕಾರ ಕಸಿಯಲು ಕಾಂಗ್ರೆಸ್ ನೇತೃತ್ವದ ಇಂಡಿಯಾ ನಾಯಕರು ಹರಸಾಹಸ ಮಾಡುತ್ತಿದ್ದಾರೆ. ಒಟ್ಟಾರೆ ಈ ಸಲದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಇಡೀ ದೇಶದ ಜನತೆಯಲ್ಲಿ ಏನಾಗಬಹುದು ಎಂಬ ಕುತೂಹಲ ಕೆರಳಿಸಿರುವುದಂತೂ ನಿಜ.
ಮಹಾರಾಷ್ಟ್ರದ ಎಲ್ಲಾ 288 ವಿಧಾನಸಭಾ
ಕ್ಷೇತ್ರಗಳಲ್ಲಿ ಇಂದು (ಬುಧವಾರ) ಚುನಾವಣೆ ನಡೆಯುತ್ತಿದ್ದು, ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಜಾರ್ಖಂಡ್ ವಿಧಾನಸಭೆಯ ಎರಡನೇ ಹಂತದ 38 ಕ್ಷೇತ್ರಗಳಲ್ಲೂ ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭಗೊಂಡಿದೆ. ಇತ್ತ ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ 15 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಹಾಗೂ ನಾಂದೇಡ್ ಲೋಕಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿದ್ದು, ಎಲ್ಲಾ ಕ್ಷೇತ್ರಗಳಲ್ಲಿ ಈಗಾಗಲೇ ಮತದಾನ ಆರಂಭಗೊಂಡಿದ್ದು, ಮತದಾರರು ಮತಗಟ್ಟೆಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.
ನವೆಂಬರ್ 23ರಂದು ಮಹಾರಾಷ್ಟ್ರ, ಜಾರ್ಖಂಡ್ ಮತ್ತು 46 ವಿಧಾನಸಭಾ ಕ್ಷೇತ್ರಗಳ ಮತ್ತು ಎರಡು ಲೋಕಸಭಾ ಸ್ಥಾನಗಳ ಉಪಚುನಾವಣೆಯ ಮತ ಎಣಿಕೆ ನಡೆಯಲಿದೆ.
ಮಹಾರಾಷ್ಟ್ರದಲ್ಲಿ ಆಡಳಿತಾರೂಢ ‘ಮಹಾಯುತಿ’ ಹಾಗೂ ವಿಪಕ್ಷ ‘ಮಹಾ ವಿಕಾಸ ಆಘಾಡಿ’ ಮೈತ್ರಿಕೂಟಗಳ ನೇರ ಹಣಾಹಣಿಗೆ ಸಾಕ್ಷಿಯಾಗಿರುವ ವಿಧಾನಸಭಾ ಚುನಾವಣೆ ಅಂತಿಮ ಘಟ್ಟಕ್ಕೆ ತಲುಪಿದೆ.
ತಮ್ಮ ಮೈತ್ರಿಕೂಟದ ಅಭ್ಯರ್ಥಿಗಳ ಪರವಾಗಿ ಪ್ರಮುಖ ನಾಯಕರಾದ ನರೇಂದ್ರ ಮೋದಿ, ಅಮಿತ್ ಶಾ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಹಲವು ಕ್ಯಾಲಿಗಳಲ್ಲಿ ಭಾಗಿಯಾಗಿ ಮತ ಸೆಳೆಯುವ ಕಸರತ್ತು ನಡೆಸಿದ್ದಾರೆ.
ಮಹಾರಾಷ್ಟ್ರ 288 ಕ್ಷೇತ್ರಗಳ ಪೈಕಿ 75 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಜಾತಿ ಆಧಾರಿತ ಜನಗಣತಿ, ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ರಕ್ಷಣೆಯಂತಹ ವಿಷಯಗಳನ್ನು ಕಾಂಗ್ರೆಸ್ ಪಾಳಯ ಚುನಾವಣಾ ಅಸ್ತ್ರ ಮಾಡಿಕೊಂಡು ಪ್ರಚಾರ ನಡೆಸಿದೆ.