ಬೆಳಗಾವಿ : ನಗರದ ಕೆ.ಎಲ್.ಇ ಸಂಸ್ಥೆಯ ರಾಜಾಲಖಮಗೌಡ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ದಿನಾಂಕ ೨೫-೦೧-೨೦೨೫ ರಂದು “ರಾಷ್ಟ್ರೀಯ ಮತದಾರರ ದಿನಾಚರಣೆ” ಆಚರಿಸಲಾಯಿತು.
ಮಹಾವಿದ್ಯಾಲಯದ ಪ್ರಾಚಾರ್ಯ ವಿಶ್ವನಾಥ. ಚ. ಕಾಮಗೋಳ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ, ಪ್ರಜಾಪ್ರಭುತ್ವವಿರುವ ರಾಷ್ಟ್ರಗಳಲ್ಲಿ ಮತದಾನವು ಪವಿತ್ರವಾದುದು. ಮತದಾನವು ದೇಶದ ನಾಗರಿಕರ ಹಕ್ಕು ಮತ್ತು ಕರ್ತವ್ಯವಾಗಿರುತ್ತದೆ. ಇಂದಿನ ಯುವಕರೆ ಮುಂದಿನ ನಾಗರಿಕರು ಮತ್ತು ನಾಯಕರಾಗುವರು. ನಾಗರಿಕರಾಗಿ ತಮ್ಮನ್ನು ಪ್ರತಿನಿಧಿಸುವ ಪ್ರತಿನಿಧಿಯನ್ನು ಆಯ್ಕೆ ಮಾಡುವ ಹೊಣೆಗಾರಿಕೆ ಯುವಕರ ಮೇಲೆ ಇರುತ್ತದೆ. ಯುವಕರು ಆಸೆ ಆಮಿಷಗಳಿಗೆ ಒಳಗಾಗದೆ ನಿರ್ಭಯವಾಗಿ ಮತದಾನ ಮಾಡಿ ಪ್ರತಿನಿಧಿಯನ್ನು ಚುನಾಯಿಸುವುದು ಆದ್ಯ ಕರ್ತವ್ಯವಾಗಿರುತ್ತದೆ ಎಂದು ಮತದಾನದ ಪ್ರಾಮುಖ್ಯತೆಯನ್ನು ವಿವರಿಸಿದರು.
ಕನ್ನಡ ಉಪನ್ಯಾಸಕ ಸಹದೇವ ಬ ಬನ್ನಿಮಟ್ಟಿ ಮತದಾರರ ಪ್ರತಿಜ್ಞಾ ವಿಧಿ ಭೋದಿಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಉಪ ಪ್ರಾಚಾರ್ಯ ಡಾ. ಸಂದೀಪ ಜವಳಿ ಅವರು, ಮತದಾರರ ಸಾಕ್ಷರತಾ ಕ್ಲಬ್ನ ಸಂಯೋಜಕ ನಟರಾಜ ಎಮ್ ಪಾಟೀಲ, ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.