ಬೆಳಗಾವಿ : ಡಿಸಿಸಿ ಬ್ಯಾಂಕ್ ಚುನಾವಣೆ ಅಕ್ಟೋಬರ್ 19ರಂದು ನಿಗದಿಯಾಗಿದ್ದು ಈ ಚುನಾವಣೆಯಲ್ಲಿ ತಾಲೂಕಿನ ಎಲ್ಲಾ ಸೊಸೈಟಿಗಳು ಅಭೂತಪೂರ್ವ ಬೆಂಬಲ ನೀಡುವ ಮೂಲಕ ನನ್ನ ಗೆಲುವಿಗೆ ಶ್ರಮಿಸಬೇಕು. ನಾನು ಗೆಲುವು ಸಾಧಿಸಿದಲ್ಲಿ ಖಾನಾಪುರ ತಾಲೂಕಿಗೆ ನ್ಯಾಯಯುತವಾಗಿ ಡಿಸಿಸಿ ಬ್ಯಾಂಕಿನಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ತರಲು ಪ್ರಾಮಾಣಿಕವಾಗಿ ಶ್ರಮಿಸುದಾಗಿ ಖಾನಾಪುರ ಶಾಸಕ ವಿಠ್ಠಲ ಹಲಗೇಕರ ತಿಳಿಸಿದ್ದಾರೆ.
ಆಗಸ್ಟ್ 30 ರಿಂದ ಚುನಾವಣೆ ನೀತಿ ಸಂಹಿತೆ ಜಾರಿಯಾಗಲಿದೆ. ಚುನಾವಣೆಗೆ ನಾನು ಸ್ಪರ್ಧೆ ನಡೆಸುತ್ತೇನೆ. ಖಾನಾಪುರ ತಾಲೂಕಿನಿಂದ ಡಿಸಿ ಬ್ಯಾಂಕ್ ಚುನಾವಣೆಗೆ ಸ್ಪರ್ಧಿಸುವ ಕುರಿತು ಸಮಿತಿ ರಚಿಸಲಾಗಿತ್ತು. ವಿಧಾನ ಪರಿಷತ್ ಚನ್ನರಾಜ ಹಟ್ಟಿಹೊಳಿ, ರಾಜು ಸಿದ್ದಾಣಿ ಮತ್ತು ನಾನು ಅರ್ಜಿ ಸಲ್ಲಿಸಿದ್ದೆವು. ಆದರೆ, ಸಚಿವ ಸತೀಶ ಜಾರಕಿಹೊಳಿ ಅವರ ವಿನಂತಿ ಮೇರೆಗೆ ಈಗಾಗಲೇ ಚನ್ನರಾಜ ಹಟ್ಟಿಹೊಳಿ ಅವರು ಚುನಾವಣಾ ಕಣದಿಂದ ಹಿಂದೆ ಸರಿಯುವುದಾಗಿ ಪ್ರಕಟಿಸಿದ್ದಾರೆ. ರಾಜು ಸಿದ್ದಾಣಿ ಅವರು ಸಹಾ ಚುನಾವಣೆಯಲ್ಲಿ ಸ್ಪರ್ಧೆ ನಡೆಸುವುದಿಲ್ಲ ಎಂದು ನಿರ್ಣಯಿಸಿದ್ದಾರೆ. ಈಗ ಸಮಿತಿ ನನ್ನ ಹೆಸರನ್ನು ಆಯ್ಕೆ ಮಾಡಿದೆ. ಚುನಾವಣೆಗೆ ನಾನು ಸಕಲ ಸಿದ್ಧತೆ ನಡೆಸಿದ್ದೇನೆ. ನನಗೆ ಮೊದಲಿನಿಂದಲೂ ಸೊಸೈಟಿಗಳ ಜೊತೆ ನಿಕಟವಾದ ಒಡನಾಟ, ನಂಟು ಇದೆ. ಹೀಗಾಗಿ ಈ ಸಲದ ಚುನಾವಣೆಯಲ್ಲಿ ನನ್ನ ಗೆಲುವು ನಿಶ್ಚಿತ. ಖಾನಾಪುರದ ಎಲ್ಲಾ ಸೊಸೈಟಿಗಳು ನನ್ನ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸುವ ಮೂಲಕ ತಾಲೂಕಿನ ಸೊಸೈಟಿಗಳಿಗೆ ಇನ್ನಷ್ಟು ಶಕ್ತಿ ನೀಡಲು ಬಲ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಡಿಸಿಸಿ ಬ್ಯಾಂಕಿನಿಂದ ಖಾನಾಪುರ ತಾಲೂಕಿಗೆ ಹೆಚ್ಚಿನ ಸೌಲಭ್ಯ ತರಲು ಬೆಂಬಲಿಸಿ : ವಿಠ್ಠಲ ಹಲಗೇಕರ ಮನವಿ
