ಜನ ಜೀವಾಳ ಜಾಲ : ಬೆಂಗಳೂರು :ಕನ್ನಡ ಮಾಧ್ಯಮ ಲೋಕದಲ್ಲಿಂದು ಸದಭಿರುಚಿಯ ಟಿವಿ ಚಾನೆಲ್ ಲೋಕಾರ್ಪಣೆಯಾಗುತ್ತಿದೆ.
ಹಿರಿಯ ಪತ್ರಕರ್ತ ಮತ್ತು ಹರಿತ ವಿಶ್ಲೇಷಣೆಗಳಿಗೆ ಹೆಸರಾದ ಹರಿಪ್ರಕಾಶ್ ಕೋಣೆಮನೆ ಅವರ ನೇತೃತ್ವದಲ್ಲಿ ರೂಪುಗೊಂಡಿರುವ ವಿಸ್ತಾರ ನ್ಯೂಸ್ ಚಾನೆಲ್ ಅನಾವರಣ ಇಂದು ( ನ .6 ) ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅದ್ದೂರಿಯಾಗಿ ನಡೆಯಲಿದೆ. ವಿಸ್ತಾರ ಮೀಡಿಯಾ ಪ್ರೈವೆಟ್ ಲಿಮಿಟೆಡ್ನ ಈ ಹೆಮ್ಮೆಯ ಕಾಣಿಕೆ ನಾಡಿನ ಹಲವಾರು ಗಣ್ಯ ವ್ಯಕ್ತಿಗಳ ಉಪಸ್ಥಿತಿಯಲ್ಲಿ ವೈಭವೋಪೇತವಾಗಿ ತೆರೆದುಕೊಳ್ಳಲಿದೆ . ವಿಸ್ತಾರ ನ್ಯೂಸ್ ಚಾನೆಲ್ ಅನಾವರಣದ ಈ ಸಂಭ್ರಮದ ಕ್ಷಣವನ್ನು ‘ವಿಸ್ತಾರ ಕನ್ನಡ ಸಂಭ್ರಮ’ವಾಗಿ ಆಚರಿಸಲಾಗುತ್ತಿದೆ . ಅಂದು ಬೆಳಗ್ಗಿನಿಂದ ರಾತ್ರಿಯವರೆಗೆ ನಡೆಯುವ ಈ ಸಂಭ್ರಮದಲ್ಲಿ ನಾಡಿನ 32 ಮಹಾ ಸಾಧಕರಿಗೆ ಕಾಯಕ ಯೋಗಿ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ . ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ದಿನವಿಡೀ ಹಾಡು , ಮಾತು , ಹಾಸ್ಯ , ಜಾದೂ , ಯಕ್ಷಗಾನಗಳಂಥ ಅತ್ಯುತ್ಕೃಷ್ಟ , ವೈವಿಧ್ಯಮಯ ಸಾಂಸ್ಕೃತಿಕ , ಮನೋರಂಜನಾತ್ಮಕ ಕಾರ್ಯಕ್ರಮಗಳು ಮೇಳೈಸಲಿವೆ . ಸಂಗೀತೋತ್ಸವ , ವಿಶಿಷ್ಟ ಆಹಾರ ಮೇಳ , ಪುಸ್ತಕೋತ್ಸವಗಳು , ಜಾನಪದ ವೈಭವ ಮತ್ತು ಚಿಣ್ಣರ ಕಲರವಗಳೊಂದಿಗೆ ರವೀಂದ್ರ ಕಲಾಕ್ಷೇತ್ರದ ಆವರಣ ರಂಗೇರಲಿದೆ.
ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್ನ ಸಿಇಒ ಮತ್ತು ಪ್ರಧಾನ ಸಂಪಾದಕರಾಗಿರುವ ಹರಿಪ್ರಕಾಶ್ ಕೋಣೆಮನೆ , ಚೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವ ಎಚ್.ವಿ. ಧರ್ಮೇಶ್ ಹಾಗೂ ನಿರ್ದೇಶಕರಾಗಿರುವ ಶ್ರೀನಿವಾಸ್ ಹೆಬ್ಬಾರ್ ಅವರ ನೇತೃತ್ವದಲ್ಲಿ ನಾಡಿನ ಜನ ಸಕುಟುಂಬಿಕರಾಗಿ ಬಂದು ಸಂಭ್ರಮಿಸಲು ಅನುಕೂಲವಾಗುವಂತೆ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಎರಡು ಪ್ರಧಾನ ವೇದಿಕೆ ಕಾರ್ಯಕ್ರಮಗಳು ಬೆಳಗ್ಗೆ 11.30 ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ನಾಡಿನ 32 ಸಾಧಕರಿಗೆ ವಿಸ್ತಾರ ಕಾಯಕಯೋಗಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ . ಸಂಜೆ 6 ಗಂಟೆಗೆ ಆರಂಭವಾಗಲಿರುವ ಮತ್ತೊಂದು ಅದ್ದೂರಿ ಕಾರ್ಯಕ್ರಮದಲ್ಲಿ ನಾಡಿನ ಜನತೆಯ ಬಹುನಿರೀಕ್ಷೆಯ ವಿಸ್ತಾರ ನ್ಯೂಸ್ ಚಾನೆಲ್ ಲೋಕಾರ್ಪಣೆಗೊಳ್ಳಲಿದೆ. ಉಳಿದಂತೆ ಹಲವು ವೇದಿಕೆಗಳಲ್ಲಿ ಏಕಕಾಲದಲ್ಲಿ ಸಾಂಸ್ಕೃತಿಕ ವೈಭವಗಳು ಮೇಳೈಸಲಿವೆ.