ಚಿಕ್ಕೋಡಿ: ‘ವಿಶ್ವಕರ್ಮ ಸಮುದಾಯದ ಉಪ ಜಾತಿಗಳು ಒಂದಾದಾಗ ಮಾತ್ರ ಸಮಾಜದಲ್ಲಿ ಬೆಲೆ ಸಿಗುತ್ತದೆ. ಕಂದಾಚಾರ ಬಿಟ್ಟು ಹೊರಬಂದು, ಜ್ಞಾನದ ತಳಹದಿಯ ಮೇಲೆ ವಿಶ್ವಕರ್ಮ ಸಮಾಜ ಕಟ್ಟುವ ಹೊಣೆಗಾರಿಕೆ ಎಲ್ಲರದ್ದಾಗಿದೆ’ ಎಂದು ಬೆಳಗಾವಿಯ ಶಿಕ್ಷಣ ಕಾಲೇಜಿನ ಪ್ರಾಚಾರ್ಯೆ ನಿರ್ಮಲಾ ಬಟ್ಟಲ ಹೇಳಿದರು.
ಪಟ್ಟಣದ ದಾನಲಿಂಗ ದೇವಸ್ಥಾನದ ಆವರಣದಲ್ಲಿ ದಾನಲಿಂಗ ದೇವಸ್ಥಾನ ಟ್ರಸ್ಟ್ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ದಾನಲಿಂಗ ಸ್ವಾಮಿ ಆರಾಧನಾ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.
‘ಕುಲಕಸುಬು ಮಾಡುವುದರೊಂದಿಗೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದ್ದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಬಹುದು. ಉದ್ಯೋಗದಲ್ಲಿ ಇರುವವರಿಗೂ ಹೆಣ್ಣು ಕೊಟ್ಟು ಮದುವೆ ಮಾಡಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.
ವಿಶ್ವಕರ್ಮ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಪ್ರಭಾಕರ ಬಡಿಗೇರ ಮಾತನಾಡಿ, ‘ನಮ್ಮವರೊಂದಿಗೆ ನಾವೇ ಸ್ಪರ್ಧೆಗಿಳಿಯಬಾರದು. ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದ ಸಮಾಜದವರನ್ನು ಮುಂದೆ ತರಲು ಯತ್ನಿಸಬೇಕು’ ಎಂದು ಹೇಳಿದರು.
ಸವದತ್ತಿಯ ಸೋಮಲಿಂಗಯ್ಯಸ್ವಾಮಿ ವಡಿಯರ ಸಾನ್ನಿಧ್ಯ, ದಾನಯ್ಯಸ್ವಾಮಿ ವಡಿಯರ ಅಧ್ಯಕ್ಷತೆ ವಹಿಸಿದ್ದರು. ಉಮ್ಮಳವಾಡದ ರಾಮಯ್ಯ ವಡಿಯರ, ಮುರುಘರಾಜ ಹಲ್ಯಾಳಕರ, ರಾಜು ದೀಕ್ಷಿತ, ಮಹೇಶ ಬಡಿಗೇರ, ಎಚ್ಚರಪ್ಪ ಬೇನಾಳ, ರಾಘವೇಂದ್ರ ಪತ್ತಾರ, ಶ್ರೀಕಾಂತ ಪತ್ತಾರ, ಅಜೀತ ಪೋದ್ದಾರ ಇದ್ದರು.