ಬೆಳಗಾವಿ:
ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಂಡೋಳ್ಳಿ ಗ್ರಾಮದ ಶ್ರೀ ಮಾರುತಿ, ಶ್ರೀ ವಿಠ್ಠಲ ರುಕ್ಮಾಯಿ ಹಾಗೂ ಶ್ರೀ ಕಲ್ಮೇಶ್ವರ ದೇವಸ್ಥಾನಗಳ ನೂತನ ಕಟ್ಟಡ ನಿರ್ಮಾಣಕ್ಕಾಗಿ ಕರ್ನಾಟಕ ಸರಕಾರದಿಂದ ಎರಡು ಕೋಟಿ ರೂ. ಗಳನ್ನು (2 Cr) ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಮಂಜೂರು ಮಾಡಿಸಿದ್ದು, 50 ಲಕ್ಷ ರೂ.ಗಳನ್ನು (50 lakhs) ದೇವಸ್ಥಾನಗಳ ಟ್ರಸ್ಟ್ ಕಮಿಟಿಯವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ.
ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಗ್ರಾಮದ ಜನರೆಲ್ಲರೂ ಸೇರಿ ಅರಿಶಿಣ ಕುಂಕುಮ ಕಾರ್ಯಕ್ರಮ ಏರ್ಪಡಿಸಿ, ಲಕ್ಷ್ಮೀ ಹೆಬ್ಬಾಳಕರ ಹಾಗೂ ಅವರ ಸಹೋದರ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರನ್ನು ಗ್ರಾಮಕ್ಕೆ ಆಹ್ವಾನಿಸಿ, ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿದ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ, ಕ್ಷೇತ್ರದಲ್ಲಿ ಶ್ರದ್ಧಾಕೇಂದ್ರಗಳ ಅಭಿವೃದ್ಧಿಗೆ ತಮ್ಮ ಅವಧಿಯಲ್ಲಿ ನಿರೀಕ್ಷೆ ಮೀರಿದ ಅನುದಾನ ನೀಡಲಾಗಿದ್ದು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚು ಅನುದಾನ ತಂದು ಇನ್ನಷ್ಟು ಅಭಿವೃದ್ಧಿ ಮಾಡಲಾಗುವುದು. ಕ್ಷೇತ್ರದ ಜನ ನೀಡುತ್ತಿರುವ ಪ್ರೀತಿ, ವಿಶ್ವಾಸಕ್ಕಿಂತ ದೊಡ್ಡದಾದ ಕಾಣಿಕೆ ಬೇರೊಂದಿಲ್ಲ. ಜನತೆಯ ಈ ಆಶೀರ್ವಾದ ಹೀಗೆಯೇ ಮುಂದುವರಿಯಲಿ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಶ್ವಿನಿ ತಳವಾರ, ನಾರಾಯಣ ಶಿಂಧೆ, ಎಪಿಎಂಸಿ ಅಧ್ಯಕ್ಷ ಯುವರಾಜ ಕದಂ, ಲಕ್ಷ್ಮೀ ಕಣಬರಕರ, ನಾಗೇಶ ಡೋರಣ್ಣವರ, ಮಾರುತಿ ಮುನ್ನೋಳಕರ, ಸಾಗರ ದಳ್ವಿ, ರಾಜು ಪಾಟೀಲ, ಕಲ್ಲಪ್ಪ ದಳ್ವಿ, ಯಲ್ಲಪ್ಪ ಪಾಟೀಲ, ದೀಪಕ್ ನೆವ್ಗೆ, ಶಂಕರ ಪಾಟೀಲ, ಖಂಡೋಬಾ ಪಾಟೀಲ, ವಿನಾಯಕ ಕಣಬರ್ಕರ್, ಶ್ಯಾಮರಾವ್ ಕಣಬರಕರ, ಹಾಗೂ ಪಕ್ಷದ ಕಾರ್ಯಕರ್ತರು, ಆಪ್ತ ಸಹಾಯಕರು ಉಪಸ್ಥಿತರಿದ್ದರು.