ವಿಜಯಪುರ:
ವಿಜಯಪುರ ಜಿಲ್ಲೆಗೆ 12ನೇ ಶತಮಾನದ ಸಮಾಜ ಸುಧಾರಕ ಬಸವೇಶ್ವರರ ಹೆಸರಿಡಬೇಕು ಎಂಬ ಬೇಡಿಕೆ ಪುನಃ ಮುನ್ನಲೆಗೆ ಬಂದಿದೆ.
ಬಸವ ಜಿಲ್ಲೆ ಅಥವಾ ಬಸವೇಶ್ವರ ಜಿಲ್ಲೆ ಎಂದು ಮರು ನಾಮಕರಣ ಮಾಡಬೇಕು ಎಂಬ ಚರ್ಚೆ ನಡೆದಿದೆ. ಪರ–ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಬಸವೇಶ್ವರರು ಇಲ್ಲಿಯೇ ಜನಿಸಿದ್ದು ಮತ್ತು ಕೊಡುಗೆಗಳು ನೀಡಿದ್ದನ್ನು ಪರಿಗಣಿಸಿ ಜಿಲ್ಲೆಗೆ ಅವರ ಹೆಸರನ್ನು ಇಡುವ ಬಗ್ಗೆ ಜಿಲ್ಲಾಡಳಿತವು ಜಿಲ್ಲೆಯ ಪ್ರತಿನಿಧಿಗಳು, ಗಣ್ಯವ್ಯಕ್ತಿಗಳು, ಸಂಘಸಂಸ್ಥೆಗಳು ಮತ್ತು ಸಾರ್ವಜನಿಕರಿಂದ ಅಭಿಪ್ರಾಯ ಕೇಳಿದೆ. 15 ದಿನಗಳೊಳಗೆ ಸ್ಪಷ್ಟ ಅಭಿಪ್ರಾಯವನ್ನು ಲಿಖಿತ ರೂಪದಲ್ಲಿ ಜಿಲ್ಲಾಧಿಕಾರಿಗೆ ಸಲ್ಲಿಸಲು ಕೋರಲಾಗಿದೆ.
‘ಜಿಲ್ಲೆಗೆ ಬಸವೇಶ್ವರರ ಹೆಸರು ಇಡುವುದು ಸೂಕ್ತ’ ಎಂದು ಕೆಲ ಸಂಘಸಂಸ್ಥೆಗಳು ಮತ್ತು ಬಸವೇಶ್ವರರ ಅನುಯಾಯಿಗಳು ಹೇಳಿದರೆ, ಮರುನಾಮಕರಣ ಪ್ರಕ್ರಿಯೆಯಿಂದ ಆಡಳಿತಾತ್ಮಕವಾಗಿ ಜಿಲ್ಲೆಗೆ ಹಿನ್ನಡೆಯಾಗಲಿದೆ ಎಂಬ ಅಭಿಪ್ರಾಯ ಕೆಲ ಸಂಘಟನೆಯ ಪ್ರಮುಖರು ಹೇಳಿದ್ದಾರೆ. ‘ಹೆಸರು ಬದಲಾವಣೆಗಿಂತ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಬೇಕಿದೆ’ ಎಂದು ಹಲವರು ಅಭಿಪ್ರಾಯಪಡುತ್ತಾರೆ.
ಬಿಜಾಪುರವನ್ನು 2014 ರಲ್ಲಿ ವಿಜಯಪುರ ಎಂದು ಮರುನಾಮಕರಣ ಮಾಡಲಾಗಿದೆ. ಈಗ ಮತ್ತೆ ಹೆಸರು ಬದಲಾವಣೆ ಮಾಡುವುದರಿಂದ ರಾಷ್ಟ್ರಮಟ್ಟದಲ್ಲಿ ಮತ್ತು ಬೇರೆ ಬೇರೆ ಸಂದರ್ಭದಲ್ಲಿ ಜಿಲ್ಲೆ ಹೆಸರು ಗೊಂದಲಕ್ಕೆ ಕಾರಣವಾಗುತ್ತದೆ. ಈಗಾಗಲೇ ಹಲವು ವೆಬ್ಸೈಟ್ಗಳಲ್ಲಿ ವಿಜಯಪುರ ಜಿಲ್ಲೆಯ ಹೆಸರು ಕೊನೆಯ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಿದೆ’ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
‘ಜಿಲ್ಲೆಯ ಬದಲಿಗೆ ರಾಜ್ಯಕ್ಕೆ ಬಸವನಾಡು ಸೂಕ್ತ’
‘ಜಾಗತಿಕ ಮಟ್ಟದಲ್ಲಿ ಅಲ್ಲದೇ ವ್ಯವಹಾರಿಕ ದೃಷ್ಟಿಯಿಂದಲೂ ವಿಜಯಪುರ ಈಗಾಗಲೇ ಪ್ರಸಿದ್ಧಿ ಗಳಿಸಿದೆ. ಬಸವೇಶ್ವರರ ಬಗ್ಗೆ ನಮಗೆಲ್ಲರಿಗೂ ಗೌರವ ಇದೆ. ಅಂತಹ ಮಹಾನ್ ಮಾನವತಾವಾದಿ ಜಿಲ್ಲೆಯಲ್ಲಿ ಜನ್ಮ ತಾಳಿದ್ದು ಹೆಮ್ಮೆಯ ಸಂಗತಿ. ಆದರೆ ಜಿಲ್ಲೆಗೆ ಬಸವೇಶ್ವರರ ಹೆಸರು ಇಡುವುದು ಅಷ್ಟು ಸೂಕ್ತವಲ್ಲ’ ಎಂದು ಇತಿಹಾಸ ತಜ್ಞ ಕೃಷ್ಣಕೊಲ್ಹಾರ ಕುಲಕರ್ಣಿ ಹೇಳಿದರು. ‘ಬಸವಣ್ಣನ ಹೆಸರು ಚಿರಸ್ಥಾಯಿಯಾಗಿಸಲು ಹಲವು ವಿಧಾನ ಮಾರ್ಗಗಳಿವೆ. ರಾಜಕೀಯ ಪ್ರೇರಿತವಾಗಿ ಜಿಲ್ಲೆಗೆ ಬಸವೇಶ್ವರರ ಹೆಸರಿಡುವ ಬದಲು ಕರ್ನಾಟಕ ರಾಜ್ಯದ ಹೆಸರನ್ನೇ ಬಸವನಾಡು ಎಂದು ಬದಲಿಸುವುದು ಸೂಕ್ತ. ಬಸವನ ಬಾಗೇವಾಡಿಯ ಸರ್ವತೋಮುಖ ಅಭಿವೃದ್ಧಿಗೆ ಮತ್ತು ಪ್ರವಾಸೋದ್ಯಮದ ಅಭಿವೃದ್ಧಿಗೆ ಆದ್ಯತೆ ನೀಡಲಿ. ಇದರಿಂದ ಬಸವ ಜನ್ಮಭೂಮಿ ವಿಶ್ವ ಪ್ರಸಿದ್ದ ಮಾಡಲಿ’ ಎಂದರು.
‘ಮುಖ್ಯಮಂತ್ರಿ ಜೊತೆ ಚರ್ಚಿಸಿ ತೀರ್ಮಾನ’
‘ವಿಜಯಪುರ ಹೆಸರು ಬದಲಾವಣೆ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು. ಈಗಾಗಲೇ ಬಿಜಾಪುರವನ್ನು ವಿಜಯಪುರ ಎಂದು ಬದಲಾಯಿಸಲಾಗಿದೆ. ಮತ್ತೆ ಜಿಲ್ಲೆಯ ಹೆಸರು ಬದಲಾವಣೆ ಆಡಳಿತಾತ್ಮಕವಾಗಿ ಸೂಕ್ತವೇ ಎಂಬುದು ನೋಡಬೇಕಿದೆ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ ತಿಳಿಸಿದ್ದಾರೆ. ‘ಬಸವೇಶ್ವರ ಹೆಸರು ಇಡಲು ಯಾರ ವಿರೋಧವೂ ಇಲ್ಲ. ಆದರೆ ಜಿಲ್ಲೆಗೆ ಹೆಸರಿಡುವ ಬದಲು ವಿಜಯಪುರ ವಿಮಾನ ನಿಲ್ದಾಣ ವಿಜಯಪುರ ರೈಲು ನಿಲ್ದಾಣ ಮತ್ತು ಬೆಂಗಳೂರು ಮೆಟ್ರೋ ನಿಲ್ದಾಣಕ್ಕೆ ಬಸವೇಶ್ವರರ ಹೆಸರು ಇಡಲು ಪ್ರಸ್ತಾವ ಸಲ್ಲಿಸಲಾಗುವುದು. ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಿದ್ದಾರೆ. ಜನರು ಜನಪ್ರತಿನಿಧಿಗಳ ಅಭಿಪ್ರಾಯ ಏನಿದೆ ನೋಡೋಣ ಎಂದರು.