ನವದೆಹಲಿ: ಮುಂಬರುವ ಉಪರಾಷ್ಟ್ರಪತಿ ಚುನಾವಣೆಗೆ ವಿಪಕ್ಷಗಳ ಮೈತ್ರಿಕೂಟವು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಬಿ.ಸುದರ್ಶನ ರೆಡ್ಡಿ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ಸರ್ವಾನುಮತದ ಉಪರಾಷ್ಟ್ರಪತಿ ಚುನಾವಣೆಗೆ ವಿಪಕ್ಷಗಳನ್ನು ಒಗ್ಗೂಡಿಸುವ ಸರ್ಕಾರದ ಪ್ರಯತ್ನಗಳು ವಿಫಲವಾಗಿವೆ. ಈಗ ಉಪರಾಷ್ಟ್ರಪತಿ ಚುನಾವಣೆಗೆ ವೇದಿಕೆ ಸಜ್ಜಾಗಿದ್ದು, ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್ಡಿಎಯ ಸಿಪಿ ರಾಧಾಕೃಷ್ಣನ್ ಮತ್ತು ವಿಪಕ್ಷಗಳ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ಸುದರ್ಶನ ರೆಡ್ಡಿ ಎದುರಾಳಿಗಳಾಗಿದ್ದಾರೆ. ವಿಶೇಷವೆಂದರೆ ಇಬ್ಬರೂ ದಕ್ಷಿಣ ಭಾರತದವರಾಗಿದ್ದಾರೆ.
ಸೆಪ್ಟೆಂಬರ್ 9ರಂದು ಉಪರಾಷ್ಟ್ರಪತಿ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಯಾಗಿ ಮಹಾರಾಷ್ಟ್ರದ ರಾಜ್ಯಪಾಲ ಮತ್ತು ತಮಿಳುನಾಡಿನ ಬಿಜೆಪಿಯ ಅತಿ ಉನ್ನತ ನಾಯಕರಲ್ಲಿ ಒಬ್ಬರಾದ ಸಿ ಪಿ ರಾಧಾಕೃಷ್ಣನ್ ಅವರ ವಿರುದ್ಧ ಕಣಕ್ಕಿಳಿಸಲಾಗುತ್ತದೆ. ನ್ಯಾಯಮೂರ್ತಿ ರೆಡ್ಡಿ ಅವರ ಹೆಸರನ್ನು ವಿಪಕ್ಷಗಳ ಉನ್ನತ ನಾಯಕರು ಭಾಗವಹಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಲಾಯಿತು. ಎಲ್ಲಾ ವಿಪಕ್ಷಗಳು ಒಪ್ಪಿಕೊಂಡಿದ್ದು ಸುದರ್ಶನ ರೆಡ್ಡಿ ಅವರು ಸರ್ವಾನುಮತದ ಆಯ್ಕೆಯಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ. ಪ್ರಸ್ತುತ, ಲೋಕಸಭೆ ಹಾಗೂ ರಾಜ್ಯಸಭೆ ಸೇರಿ ಸಂಸತ್ತಿನ ಬಲವು 787 ಆಗಿದೆ. ಮುಂದಿನ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಲು ಒಬ್ಬ ಅಭ್ಯರ್ಥಿಗೆ ಕನಿಷ್ಠ 394 ಮತಗಳು ಬೇಕಾಗುತ್ತವೆ.
ಉಪರಾಷ್ಟ್ರಪತಿ ಚುನಾವಣೆ ಸೆಪ್ಟೆಂಬರ್ 9 ರಂದು ನಡೆಯಲಿದೆ. ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 21. ಪರಿಶೀಲನೆಗೆ ಆಗಸ್ಟ್ 22 ಮತ್ತು ಉಮೇದುವಾರಿಕೆಗಳನ್ನು ಹಿಂಪಡೆಯಲು ಆಗಸ್ಟ್ 25 ಕೊನೆಯ ದಿನಾಂಕವಾಗಿದೆ. ಆರೋಗ್ಯ ಸಮಸ್ಯೆಗಳಿಂದಾಗಿ ಜಗದೀಪ ಧನಕರ ಅವರ ಹಠಾತ್ ರಾಜೀನಾಮೆಯ ನಂತರ ಉಪರಾಷ್ಟ್ರಪತಿ ಚುನಾವಣೆ ನಡೆಯುತ್ತಿದೆ.
ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಬಿ.ಸುದರ್ಶನ ರೆಡ್ಡಿ ಜುಲೈ 8, 1946 ರಂದು ಇಂದಿನ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಆಗಿನ ಇಬ್ರಾಹಿಂಪಟ್ಟಣಂ ತಾಲ್ಲೂಕಿನ ಅಕುಲಾ ಮೈಲಾರಾಮ ಗ್ರಾಮದ ರೈತ ಕುಟುಂಬದಲ್ಲಿ ಜನಿಸಿದರು. 1971 ರಲ್ಲಿ ಹೈದರಾಬಾದ್ನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದರು ಮತ್ತು ಆಂಧ್ರಪ್ರದೇಶ ಬಾರ್ ಕೌನ್ಸಿಲ್ನಲ್ಲಿ ವಕೀಲರಾಗಿ ಸೇರಿಕೊಂಡರು. ಅವರು ಆಂಧ್ರಪ್ರದೇಶ ಹೈಕೋರ್ಟ್ನಲ್ಲಿ ರಿಟ್ ಮತ್ತು ಸಿವಿಲ್ ಪ್ರಕರಣಗಳನ್ನು ನಿರ್ವಹಿಸುತ್ತಿದ್ದರು.
ನ್ಯಾಯಾಧೀಶರಾಗುವ ಮೊದಲು, ಅವರು 1988-90ರಲ್ಲಿ ಸರ್ಕಾರಿ ವಕೀಲರಾಗಿ ಕೆಲಸ ಮಾಡಿದ್ದರು. 1990 ರಲ್ಲಿ ಅವರು ಕೇಂದ್ರ ಸರ್ಕಾರದ ಹೆಚ್ಚುವರಿ ಸ್ಥಾಯಿ ಕೌನ್ಸಿಲ್ ಆಗಿ ಕೆಲಕಾಲ ಕೆಲಸ ಮಾಡಿದರು ಮತ್ತು ಉಸ್ಮಾನಿಯಾ ವಿಶ್ವವಿದ್ಯಾಲಯದ ಕಾನೂನು ಸಲಹೆಗಾರ ಮತ್ತು ಸ್ಥಾಯಿ ಕೌನ್ಸಿಲ್ ಆಗಿದ್ದರು.
ಅವರು 1995 ರಲ್ಲಿ ಆಂಧ್ರಪ್ರದೇಶ ಹೈಕೋರ್ಟ್ನ ಕಾಯಂ ನ್ಯಾಯಮೂರ್ತಿಗಳಾದರು. 2005 ರಲ್ಲಿ ಗುವಾಹತಿ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡರು. 2007 ರಲ್ಲಿ ಅವರು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದರು; 2011 ರಲ್ಲಿ ನಿವೃತ್ತರಾದರು.
ಮಾರ್ಚ್ 2013 ರಲ್ಲಿ, ನ್ಯಾಯಮೂರ್ತಿ ರೆಡ್ಡಿ ಗೋವಾದ ಮೊದಲ ಲೋಕಾಯುಕ್ತರಾದರು. ಆದಾಗ್ಯೂ, ಅವರು ತಿಂಗಳುಗಳ ನಂತರ, ಸೆಪ್ಟೆಂಬರ್ನಲ್ಲಿ ವೈಯಕ್ತಿಕ ಕಾರಣಗಳಿಗಾಗಿ ರಾಜೀನಾಮೆ ನೀಡಿದರು.