ಮೂಡಲಗಿ: ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯ ಇಂದ್ರಧನುಷ್ ಮತ್ತು ಮಾತೃವಂದನ ಯೋಜನೆಗಳ ಜೊತೆ ಹಲವಾರು ಇಲಾಖೆಯ ಯೋಜನೆಗಳನ್ನು ಕರ್ನಾಟಕ ಸರ್ಕಾರ ಬಳಸಿಕೊಳ್ಳುವಲ್ಲಿ ವಿಫಲವಾದ ಕಾರಣ ಕಳೆದ 19 ತಿಂಗಳಲ್ಲಿ 736ಕ್ಕೂ ಹೆಚ್ಚು ಬಾಣಂತಿಯರು ಹಾಗೂ 1100ಕ್ಕೂ ಹೆಚ್ಚು ನವಜಾತ ಶಿಶುಗಳು ಸಾವನ್ನಪ್ಪಿರುವುದ ಅತ್ಯಂತ ದುರದೃಷ್ಟಕರ ಸಂಗತಿ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ನವದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಬಜೆಟ್ ಚರ್ಚೆಯಲ್ಲಿ ಮಾತನಾಡಿದರು ಸಂಸದ ಈರಣ್ಣ ಕಡಾಡಿ ಅವರು ಕೇಂದ್ರ ಸರ್ಕಾರ ಈ ವರ್ಷದ ಬಜೆಟ್ನಲ್ಲಿ, ಆರೋಗ್ಯ ಕ್ಷೇತ್ರಕ್ಕೆ ರೂ. 99,858.56 ಕೋಟಿಗಳ ಐತಿಹಾಸಿಕ ಹಂಚಿಕೆಯನ್ನು ಮಾಡಿದೆ, ಇದು ಕಳೆದ ಹತ್ತು ವರ್ಷಗಳ ಹಿಂದಿನ ಬಜೆಟ್ಗಿಂತ್ ಪ್ರತಿಶತ 191% ರಷ್ಟು ಹೆಚ್ಚಾಗಿದೆ. ಈ ಬಜೆಟ್ನ ಮೂಲಕ ಆರೋಗ್ಯ ಸೇವೆಗಳನ್ನು ವಿಸ್ತರಿಸುವುದಲ್ಲದೆ, ವೈದ್ಯಕೀಯ ಸೌಲಭ್ಯಗಳನ್ನು ಆಧುನೀಕರಿಸಿಗೊಳಿಸುವ ಮೂಲಕ ಸಮಾಜದ ಅತ್ಯಂತ ಕಟ್ಟಕಡೆಯ ಬಡವರಿಗೂ ಕೂಡಾ ಚಿಕಿತ್ಸೆಯನ್ನು ಅತಿ ಹೆಚ್ಚು ಸುಲಭವಾಗಿ ಲಭ್ಯವಾಗುವಂತೆ ನೋಡಿಕೊಳ್ಳಲಾಗಿದೆ ಎಂದರು
ಕೇಂದ್ರ ಸರ್ಕಾರ 2023 ಫೆಬ್ರುವರಿಯಲ್ಲಿ ಬೆಳಗಾವಿಗೆ 100 ಹಾಸಿಗೆಗಳ ನೂತನ ಇ.ಎಸ.ಐ ಆಸ್ಪತ್ರೆಯನ್ನು ಸ್ಥಾಪಿಸಲು ಅನುಮೋದನೆ ನೀಡಿದೆ. ಆದರೆ ರಾಜ್ಯ ಸರ್ಕಾರ ಜಮೀನು ಒದಗಿಸಲು ವಿಳಂಬ ಧೋರಣೆ ಅನುಸರಿಸುವ ಮೂಲಕ ಕಿತ್ತೂರು ಕರ್ನಾಟಕದ ಜನತೆಗೆ ದ್ರೋಹ ಬಗೆದಿದೆ ಎಂದು ಆರೋಪಿಸಿದರು.
ಕರ್ನಾಟಕ ರಾಜ್ಯದಲ್ಲಿ ಕಾರ್ಮಿಕ ಇಲಾಖೆಯ ಸುಮಾರು 12.39 ಲಕ್ಷ ಕಟ್ಟಡ ಕಾರ್ಮಿಕರಿಗೇ ನ್ಯೂಟ್ರೇಶನ್ ಕಿಟ್ಗಳನ್ನು ವಿತರಣೆ ಮಾಡಿದ್ದಾರೆ. ಅದರಲ್ಲಿ ಬಹಳ ದೊಡ್ಡ ಭ್ರಷ್ಟಾಚಾರ ನಡೆದಿದೆ. ಪ್ರತಿ ಕಿಟ್ಗೆ ಮಾರುಕಟ್ಟೆಯಲ್ಲಿ ಸರಾಸರಿ 1000 ರೂ.ಗಳ ಬೆಲೆ ಬಾಳುವ ಕಿಟ್ ಗಳನ್ನು 2600 ರೂಪಾಯಿಗೆ ಖರೀದಿ ಮಾಡಿ ವಿತರಣೆ ಮಾಡಿದ್ದಾರೆ. ಇದರಲ್ಲಿ 75 ಕೋಟಿ ರೂಪಾಯಿಗಳ ಬಹು ದೊಡ್ಡ ಹಗರಣ ನಡೆದಿದೆ ಮತ್ತು ರಾಜ್ಯ ಕಾಂಗ್ರೇಸ್ ಸರ್ಕಾರ ರಾಜ್ಯದ 18 ವೈದ್ಯಕೀಯ ಕಾಲೇಜುಗಳಲ್ಲಿ 114 ಮಾಡ್ಯುಲರ್ ಆಪರೇಷನ್ ಥಿಯೇಟರ್ಗಳ ಖರೀದಿ ಮತ್ತು ಆಧುನೀಕರಣದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 117 ಕೋಟಿ ರೂ.ಗಳ ಹಗರಣ ನಡೆದಿದೆ ಎಂದ ಸದನದ ಗಮನಕ್ಕೆ ತಂದರು.
ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ, ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳು, ರಾಷ್ಟ್ರೀಯ ಆರೋಗ್ಯ ಮಿಷನ್, ವೈದ್ಯಕೀಯ ಕಾಲೇಜುಗಳ ವಿಸ್ತರಣೆ, ಜೀವ ಉಳಿಸುವ ಔಷಧಿಗಳ ಮೇಲಿನ ಸುಂಕ ವಿನಾಯಿತಿ, ಕ್ಯಾನ್ಸರ್ ಆರೈಕೆ ಕೇಂದ್ರಗಳು ಮತ್ತು ಡಿಜಿಟಲ್ ಆರೋಗ್ಯ ರಕ್ಷಣೆ-ಭಾರತವನ್ನು ಆರೋಗ್ಯಕರ ಮತ್ತು ಸಬಲೀಕೃತ ರಾಷ್ಟ್ರವನ್ನಾಗಿ ಮಾಡುವಲ್ಲಿ ಮೈಲಿಗಲ್ಲುಗಳಾಗಿವೆ. ಈ ಬಜೆಟ್ ಆರೋಗ್ಯ ಸೇವೆಗಳ ಲಭ್ಯತೆಯನ್ನು ಹೆಚ್ಚಿಸುವುದಲ್ಲದೆ, ರೋಗಿಗಳ ಚಿಕಿತ್ಸೆಯನ್ನು ಅಗ್ಗ ಮತ್ತು ಪರಿಣಾಮಕಾರಿಯಾಗಿಸಲು ಈ ಎಲ್ಲ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು.
ಕೇಂದ್ರ ಸರ್ಕಾರ ಅದ್ಬುತ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಜನ ಸಾಮಾನ್ಯರ ಸಹಾಯಕ್ಕೆ ನಿಂತಿದ್ದಾರೆ ಆದರೆ ರಾಜ್ಯದ ಕಾಂಗ್ರೇಸ್ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಪಟಂತಹ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುತ್ತಿಲ್ಲ ಮತ್ತು ಅದರ ಹಣ ದುರಪಯೋಗವಾಗಿದೆ ಅದರ ಪರಿಣಾಮವಾಗಿ ರಾಜ್ಯ ಇವತ್ತು ಗಂಭೀರ ಸವಾಲಗಳನ್ನು ಎದುರಿಸುತ್ತಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಆರೋಪಿಸಿದರು.