ಬೆಂಗಳೂರು :
ಕರ್ನಾಟಕ ವಿಧಾನ ಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಬಸ್ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗಲಿದೆ. ಮೇ 10 ರಂದು ಚುನಾವಣೆ ಮತದಾನ ನಡೆಯಲಿದ್ದು, ಮೇ 9 ಮತ್ತು ಮೇ 10 ರಂದು ಬಸ್ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಒದಗಿಸಿದ ಕಾರಣದಿಂದಾಗಿ ಸಾರ್ವಜನಿಕರ ಪ್ರಯಾಣಕ್ಕೆ ಬಸ್ಗಳ ಸಂಖ್ಯೆ ಕೂಡ ಕಡಿಮೆ ಇರಲಿದೆ. ಪ್ರಯಾಣಿಕರು ಸಹಕರಿಸುವಂತೆ ರಾಜ್ಯ ಸಾರಿಗೆ ಇಲಾಖೆ ಮನವಿ ಮಾಡಿಕೊಂಡಿದೆ.
ಮತದಾನ ದಿನಕ್ಕೂ ಮುನ್ನ ಎಲ್ಲ ಬೂತ್ಗಳಿಗೆ ಚುನಾವಣಾ ಸಿಬ್ಬಂದಿ, ಪೊಲೀಸರು ಸೇರಿದಂತೆ ಇವಿಎಂ ಮಷಿನ್ ಮತ್ತು ವಿವಿ ಪ್ಯಾಟ್ಗಳನ್ನು ತಲುಪಿಸಲು ಎಂದಿನಂತೆ ಕೆಎಸ್ಆರ್ಟಿಸಿ ಬಸ್ಗಳನ್ನು ಬಳಸಿಕೊಳ್ಳಲಾಗಿದೆ. ಮೇ 10ರಂದು ರಾಜ್ಯದ 224 ಕ್ಷೇತ್ರಗಳಲ್ಲಿ ಮತದಾನ ನಡೆಯುವ ಹಿನ್ನೆಲೆ ಮೇ 9, 10ರಂದು ಕರ್ನಾಟಕ ಸಾರಿಗೆ ಬಸ್ ಸಂಚಾರದಲ್ಲಿ ವ್ಯತ್ಯಯವಾಗಲಿದೆ.
ರಾಜ್ಯದಲ್ಲಿ ಒಟ್ಟು 8,100 ಕೆಎಸ್ಆರ್ಟಿಸಿ ಬಸ್ಗಳಿದ್ದು, ಈ ಪೈಕಿ 3,700 ಬಸ್ಗಳು ಕರ್ನಾಟಕ ವಿಧಾನಸಭೆ ಚುನಾವಣಾ ಕರ್ತವ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಈ ಕಾರಣಕ್ಕೆ ಮೇ 9 ಮತ್ತು 10ರಂದು 4,400 ಕೆಎಸ್ಆರ್ಟಿಸಿ ಬಸ್ಗಳು ಮಾತ್ರ ಕಾರ್ಯ ನಿರ್ವಹಿಸಲಿದೆ. ಈ ಹಿನ್ನೆಲೆಯಲ್ಲಿ ಮತದಾನ ಮಾಡಲು ಒಂದು ಊರಿನಿಂದ ಮತ್ತೊಂದು ಊರಿಗೆ ಅಥವಾ ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಉದ್ಯೋಗ ನಿರ್ವಹಿಸುತ್ತಿರುವವರು ತಮ್ಮ ಗ್ರಾಮಗಳಿಗೆ ಹೋಗಲು ಈ ಎರಡು ದಿನಗಳ ಕಾಲ ಕೆಎಸ್ಆರ್ಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಕೆಎಸ್ಆರ್ಟಿಸಿ ಬಸ್ ಸಿಗದವರು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬಹುದು.