ಬೆಳಗಾವಿ:ಬೆಂಗಳೂರು-ಬೆಳಗಾವಿ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರ ಆರಂಭಿಸಬೇಕು ಎಂಬ ಬೇಡಿಕೆ ಇನ್ನೂ ಸಹ ಈಡೇರಿಲ್ಲ. 2023ರ ನವೆಂಬರ್ನಲ್ಲಿ ಈ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ಮುಕ್ತಾಯಗೊಂಡಿದೆ. ಆದರೆ ರೈಲು ಸೇವೆ ಆರಂಭವಾಗಲು ಹಲವಾರು ಅಡೆತಡೆಗಳಿದ್ದು, ಬೆಳಗಾವಿ ಜನರ ಕನಸು ಇನ್ನೂ ಸಹ ನನಸಾಗಿಲ್ಲ. ಸದ್ಯ ರೈಲು ಕೆಎಸ್ಆರ್ ಬೆಂಗಳೂರು-ಧಾರವಾಡ ನಡುವೆ ಮಾತ್ರ ಸಂಚಾರವನ್ನು ನಡೆಸುತ್ತಿದೆ.
ಈಗ ಸಾಮಾಜಿಕ ಜಾಲತಾಣದಲ್ಲಿ ವೇಳಾಪಟ್ಟಿಯೊಂದು ವೈರಲ್ ಆಗಿದೆ. ಬೆಂಗಳೂರು-ಬೆಳಗಾವಿ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರ ಆರಂಭಿಸಲಿದೆ. ಬೆಳಗಾವಿ ಭಾಗದ ಜನರ ಬೇಡಿಕೆ ಶೀಘ್ರದಲ್ಲೇ ಈಡೇರಲಿದೆ. ರೈಲಿನ ಪ್ರಸ್ತಾವಿತ ವೇಳಾಪಟ್ಟಿ ಹೀಗಿದೆ ಎಂದು ಪೋಸ್ಟ್ನಲ್ಲಿ ಮಾಹಿತಿ ನೀಡಲಾಗಿದೆ.
ಬೆಂಗಳೂರು-ಬೆಳಗಾವಿ ನಡುವೆ ವಂದೇ ಭಾರತ್ ರೈಲು ವೇಳಾಪಟ್ಟಿ ಬದಲು, ಬೆಂಗಳೂರು-ಬೆಳಗಾವಿ ನಡುವೆ ವಂದೇ ಭಾರತ್ ರೈಲು
ಸಂಖ್ಯೆ 20662/ 20661 ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವಿನ ವಂದೇ ಭಾರತ್ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಿದರೆ ರೈಲು ಕೆಎಸ್ಆರ್ ಬೆಂಗಳೂರು ಬದಲು ಯಶವಂತಪುರ ನಿಲ್ದಾಣದಿಂದ ಹೊರಡಲಿದೆ ಎಂದು ಈ ವೇಳಾಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ವಂದೇ ಭಾರತ್ ರೈಲು, ಮಾರ್ಗ ವಿವರ
ವೇಳಾಪಟ್ಟಿ, ಶೆಟ್ಟರ್ ಸಭೆ: ಪ್ರಸ್ತಾವಿತ ಕರಡು ವೇಳಾಪಟ್ಟಿ ಪ್ರಕಾರ ಯಶವಂತಪುರ-ಬೆಳಗಾವಿ ರೈಲಿನ ವೇಳಾಪಟ್ಟಿ ಹೀಗಿದೆ. ರೈಲು ಬೆಳಗಾವಿಯಿಂದ ಬೆಳಗ್ಗೆ 5.30ಕ್ಕೆ ಹೊರಡಲಿದೆ. 7.15ಕ್ಕೆ ಧಾರವಾಡ, 7.55ಕ್ಕೆ ಹುಬ್ಬಳ್ಳಿ, 9 ಗಂಟೆಗೆ ದಾವಣಗೆರೆ, 10.55ಕ್ಕೆ ಅರಸೀಕೆರೆ, 12 ಗಂಟೆಗೆ ತುಮಕೂರು, ಮಧ್ಯಾಹ್ನ 1 ಗಂಟೆಗೆ ಯಶವಂತಪುರ ತಲುಪಲಿದೆ. ಬೆಂಗಳೂರಿನ ಯಶವಂತಪುರದಿಂದ ಮಧ್ಯಾಹ್ನ 2.30ಕ್ಕೆ ಹೊರಡುವ ರೈಲು 3.25 ತುಮಕೂರು, 5.30 ಅರಸೀಕೆರೆ, 6.25 ದಾವಣಗೆರೆ, 7.45 ಹುಬ್ಬಳ್ಳಿ, 8.25 ಧಾರವಾಡ, ರಾತ್ರಿ 10.30ಕ್ಕೆ ಬೆಳಗಾವಿಗೆ ತಲುಪಲಿದೆ.
ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಧಾರವಾಡ ಸಂಸದ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಜೊತೆಗೆ ನೈಋತ್ಯ ವಲಯದ ರೈಲ್ವೆ ಮಹಾಪ್ರಬಂಧಕ ಅರವಿಂದ ಶ್ರೀನಿವಾಸ್ ಹಾಗೂ ಇತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಬೆಳಗಾವಿಗೆ ಸಂಬಂಧಿಸಿದ ರೈಲು ಸೇವೆಗಳ ಕುರಿತು ಸುದೀರ್ಘವಾದ ಚರ್ಚೆ ನಡೆಸಿದರು.
ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಬೆಳಗಾವಿ ತನಕ ವಿಸ್ತರಿಸುವುದು ಬಹಳ ಅಗತ್ಯವಿದ್ದು, ಇದು ಬೆಳಗಾವಿ ಜಿಲ್ಲೆಯ ಸಾರ್ವಜನಿಕರ ಬೇಡಿಕೆಯೂ ಸಹ ಆಗಿದೆ. ರೈಲಿನ ಪ್ರವಾಸದ ಸಮಯ ಬದಲಾವಣೆಯೊಂದಿಗೆ ರೈಲು ಸಂಚಾರ ವಿಸ್ತರಣೆ ಸಾಧ್ಯವಿದ್ದು, ಈ ವಿಷಯವನ್ನು ಗಂಭೀರವಾಗಿ ಅವಲೋಕಿಸಿ ಕ್ರಮವನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲು ಸೇವೆಗಾಗಿ ಬೆಳಗಾವಿಯ ಜನರು ಸಂಸದರಿಂದ ಪ್ರಧಾನಿ ನರೇಂದ್ರ ಮೋದಿ ತನಕ ಮನವಿ ಸಲ್ಲಿಕೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಮಾಡಿದ್ದಾರೆ. ಆದರೆ ಇದುವರೆಗೂ ಸಹ ರೈಲು ಸೇವೆ ಆರಂಭವಾಗಿಲ್ಲ.
ಕೆಲವು ದಿನಗಳ ಹಿಂದೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿದ್ದ ಜಗದೀಶ್ ಶೆಟ್ಟರ್ ಬೆಂಗಳೂರು-ಧಾರವಾಡ ನಡುವೆ ಸದ್ಯ ಚಲಿಸುತ್ತಿರುವ ವಂದೇ ಭಾರತ್ ರೈಲು ಸಂಚಾರವನ್ನು ಬೆಳಗಾವಿ ನಗರದ ವರೆಗೆ ವಿಸ್ತರಿಸುವ ಬಗ್ಗೆಯೂ ನಾವು ಚರ್ಚೆ ನಡೆಸಿದ್ದು, ಸಮಯವನ್ನು ಹೊಂದಿಸಿಕೊಂಡು ರೈಲು ಸೇವೆಯನ್ನು ಬೆಳಗಾವಿಯ ತನಕ ವಿಸ್ತರಿಸುವುದು ಸಾಧ್ಯ ಎಂದು ರೈಲ್ವೆ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದರು.