ಬೆಳಗಾವಿ: ಮಹತ್ವದ ಪುಣೆ – ಹುಬ್ಬಳ್ಳಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು 2025 ರ ಜನವರಿ 2 ರಿಂದ ಬೆಳಗಾವಿ ಜಿಲ್ಲೆಯ ಮತ್ತೊಂದು ನಿಲ್ದಾಣವಾದ ಘಟಪ್ರಭಾದಲ್ಲಿ ನಿಲುಗಡೆಯಾಗಲಿದೆ.
ಅತ್ಯಂತ ವೇಗವಾಗಿ ಸಂಚರಿಸುವ ಈ ರೈಲು ಕರ್ನಾಟಕ, ಮಹಾರಾಷ್ಟ್ರದ ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ ನಿಲುಗಡೆಯಾಗುತ್ತಿದೆ. ಆದರೆ ಬೆಳಗಾವಿ ಜಿಲ್ಲೆಯ ಜನರ ಬೇಡಿಕೆಗೆ ತ್ವರಿತವಾಗಿ ಸ್ಪಂದಿಸಿದ ರಾಜ್ಯಸಭೆಯ ಸದಸ್ಯ ಈರಣ್ಣ ಕಡಾಡಿ ಅವರು ರೈಲ್ವೆ ಇಲಾಖೆ ಮೇಲೆ ನಿರಂತರ ಒತ್ತಡ ಹೇರಿ ಕೊನೆಗೂ ತಮ್ಮ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿದ್ದಾರೆ.
ನೈರುತ್ಯ ರೈಲ್ವೆ ಇಲಾಖೆ ವೇಳಾಪಟ್ಟಿ ಪ್ರಕಟಿಸಿದೆ. ಈ ರೈಲು ವಾರದಲ್ಲಿ ಮೂರು ಬಾರಿ ಹುಬ್ಬಳ್ಳಿಯಿಂದ (ಬುಧವಾರ, ಶುಕ್ರವಾರ ಹಾಗೂ ಭಾನುವಾರ) ಮತ್ತು ಪುಣೆಯಿಂದ (ಗುರುವಾರ, ಶನಿವಾರ ಮತ್ತು ಸೋಮವಾರ) ಸಂಚರಿಸಲಿದೆ. ಪುಣೆಯಿಂದ ಮಧ್ಯಾಹ್ನ 2.15 ಕ್ಕೆ ಹೊರಟು ರಾತ್ರಿ 7.38 ಕ್ಕೆ ಘಟಪ್ರಭಾ ನಿಲ್ದಾಣಕ್ಕೆ ಆಗಮಿಸಲಿದೆ. ಹುಬ್ಬಳಿ ನಿಲ್ದಾಣದಿಂದ ಬೆಳಗ್ಗೆ 5.15 ಕ್ಕೆ ಹೊರಟು 7.23 ಕ್ಕೆ ಘಟಪ್ರಭಾ ರೈಲು ನಿಲ್ದಾಣಕ್ಕೆ ಆಗಮಿಸಲಿದೆ. ಘಟಪ್ರಭಾ ನಿಲ್ದಾಣದಲ್ಲಿ 2 ನಿಮಿಷ ನಿಲುಗಡೆ ಅವಕಾಶ ಕಲ್ಪಿಸಲಾಗಿದೆ. ಪ್ರಯಾಣಿಕರ ಸ್ಪಂದನೆ ಮತ್ತು ಜನದಟ್ಟಣೆ ಗಮನದಲ್ಲಿಟ್ಟುಕೊಂಡು ಈ ರೈಲನ್ನು ಪ್ರತಿದಿನ ಸಂಚರಿಸುವಂತೆ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. ಘಟಪ್ರಭಾ ರೈಲು ನಿಲ್ದಾಣದಲ್ಲಿ ಜನವರಿ 2 ರಂದು ರಾತ್ರಿ 7 ಗಂಟೆಗೆ ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ತಿಳಿಸಿದ್ದಾರೆ.
ವಿಶೇಷ ರೈಲುಗಳ ವಿಸ್ತರಣೆ: ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ರೈಲು ಸಂಖ್ಯೆ 07301/07302 ಬೆಳಗಾವಿ-ಮಿರಜ್-ಬೆಳಗಾವಿ ಮತ್ತು ರೈಲು ಸಂಖ್ಯೆ 07303/07304 ಬೆಳಗಾವಿ-ಮಿರಜ್-ಬೆಳಗಾವಿ ಕಾಯ್ದಿರಿಸದ ವಿಶೇಷ ಎಕ್ಸ್ಪ್ರೆಸ್ ಸೇವೆಗಳನ್ನು ಜನವರಿ 31, 2025 ರವರೆಗೆ ವಿಸ್ತರಿಸಿದೆ. ಈ ಸೇವೆಗಳನ್ನು ಈ ಹಿಂದೆ ಡಿಸೆಂಬರ್ 31, 2024 ರವರೆಗೆ ಓಡಿಸಲು ನಿರ್ಧರಿಸಲಾಗಿತ್ತು. ವಿಶೇಷ ರೈಲುಗಳು ತಮ್ಮ ಅಸ್ತಿತ್ವದಲ್ಲಿರುವ ಸಂಯೋಜನೆ, ಸಮಯ ಮತ್ತು ನಿಲುಗಡೆಗಳೊಂದಿಗೆ ಕಾರ್ಯನಿರ್ವಹಿಸುವುದನ್ನು ಮುಂದುವರಿಸಲಿವೆ. ಬೀರೂರು ನಿಲ್ದಾಣದಲ್ಲಿ ತಾತ್ಕಾಲಿಕ ರೈಲು ನಿಲುಗಡೆಬೀರೂರು ನಿಲ್ದಾಣದಲ್ಲಿ ರೈಲುಗಳಿಗೆ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆಯನ್ನು ಮುಂದುವರಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ. ರೈಲು ಸಂಖ್ಯೆ 16587/16588 ಯಶವಂತಪುರ-ಬಿಕಾನೇರ್-ಯಶವಂತಪುರ ವಾರಕ್ಕೆರಡು ಬಾರಿ ಬೀರೂರು ನಿಲ್ದಾಣದಲ್ಲಿ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆಯ ಜನವರಿ 01 ರಿಂದ ಜೂನ್ 30, 2025 ರವರೆಗೆ ಇನ್ನೂ ಆರು ತಿಂಗಳ ಕಾಲ ಮುಂದುವರಿಯುತ್ತದೆ. ಹಲವು ರೈಲುಗಳು ರದ್ದು
ರೈಲು ಸಂಖ್ಯೆ 07589 (ಹೊಸ ಸಂಖ್ಯೆ 57405) ತಿರುಪತಿ – ಕದಿರಿದೇವರ ಪಲ್ಲಿ, ಡಿಸೆಂಬರ್ 28, 2024 ರಿಂದ ಫೆಬ್ರವರಿ 28, 2025 ರವರೆಗೆ ರೈಲಿನ ಪ್ರಯಾಣವನ್ನು ರದ್ದುಗೊಳಿಸಲಾಗಿದೆ.
ರೈಲು ಸಂಖ್ಯೆ 07590 (ಹೊಸ ಸಂಖ್ಯೆ 57406) ಕದಿರಿದೇವರ ಪಲ್ಲಿ-ತಿರುಪತಿ, ಡಿಸೆಂಬರ್ 29, 2024 ರಿಂದ ಮಾರ್ಚ್ 01, 2025 ರವರೆಗೆ ರೈಲಿನ ಪ್ರಯಾಣವನ್ನು ರದ್ದುಗೊಳಿಸಲಾಗಿದೆ.
ರೈಲು ಸಂಖ್ಯೆ 07657 (ಹೊಸ ಸಂಖ್ಯೆ 57401) ತಿರುಪತಿ-ಎಸ್ಎಸ್ಎಸ್ ಹುಬ್ಬಳ್ಳಿ, ಡಿಸೆಂಬರ್ 28, 2024 ರಿಂದ ಫೆಬ್ರವರಿ 28, 2025 ರವರೆಗೆ ರೈಲಿನ ಪ್ರಯಾಣವನ್ನು ರದ್ದುಗೊಳಿಸಲಾಗಿದೆ.
ರೈಲು ಸಂಖ್ಯೆ 07658 (ಹೊಸ ಸಂಖ್ಯೆ 57402) ಎಸ್ಎಸ್ಎಸ್ ಹುಬ್ಬಳ್ಳಿ-ತಿರುಪತಿ, ಡಿಸೆಂಬರ್ 29, 2024 ರಿಂದ ಮಾರ್ಚ್ 01, 2025 ರವರೆಗೆ ರೈಲಿನ ಪ್ರಯಾಣವನ್ನು ರದ್ದುಗೊಳಿಸಲಾಗಿದೆ.
ಜಿಲ್ಲೆಯ ಜನರಿಗೆ ಹೆಚ್ಚಿನ ಅನುಕೂಲ :
ದೇಶದ ಅತ್ಯಂತ ಮಹತ್ವಾಕಾಂಕ್ಷಿಯ, ಅತಿ ವೇಗವಾಗಿ ಸಂಚರಿಸುವ ವಂದೇ ಭಾರತ್ ರೈಲು ಬೆಳಗಾವಿ ಜಿಲ್ಲೆಯ ಮತ್ತೊಂದು ಪ್ರಮುಖ ರೈಲ್ವೇ ನಿಲ್ದಾಣವಾಗಿರುವ ಘಟಪ್ರಭಾದಲ್ಲಿ ನಿಲುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದ ಜನರಲ್ಲಿ ಸಂತಸ ಮೂಡಿದೆ. ಜನರ ಬಹುದಿನಗಳ ಬೇಡಿಕೆಗೆ ನಾನು ಸ್ಪಂದಿಸಿ ರೈಲ್ವೆ ಇಲಾಖೆ ಮೇಲೆ ಒತ್ತಡ ಹೇರಿದ ಪರಿಣಾಮ ಕೊನೆಗೂ ಇದೀಗ ಘಟಪ್ರಭಾದಲ್ಲಿ ವಂದೇ ಭಾರತ್ ರೈಲು ನಿಲುವಡೆಯಾಗುತ್ತಿದೆ. ಇದಕ್ಕಾಗಿ ಕೇಂದ್ರದ ನರೇಂದ್ರ ಮೋದಿ ಸರಕಾರವನ್ನು ಅಭಿನಂದಿಸುವೆ.
*ಈರಣ್ಣ ಕಡಾಡಿ, ರಾಜ್ಯಸಭಾ ಸದಸ್ಯರು