ಬೆಳಗಾವಿ: ಹುಬ್ಬಳ್ಳಿ-ಪುಣೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಘಟಪ್ರಭಾ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಮಾಡಲು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರು ಆದೇಶಿಸಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.
ಇತ್ತಿಚಿಗೆ ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವರನ್ನು ಭೇಟಿಯಾಗಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಬೆಳಗಾವಿಯನ್ನು ಹೊರತು ಪಡಿಸಿದರೆ ನೇರವಾಗಿ ಮಹಾರಾಷ್ಟ್ರದ ಮೀರಜ ಮತ್ತು ಸಾಂಗ್ಲಿ ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ನೀಡಲಾಗಿದೆ. ಜಿಲ್ಲೆಯ ಅತ್ಯಂತ ಮಧ್ಯವರ್ತಿ ಸ್ಥಳವಾಗಿರುವ ಘಟಪ್ರಭಾ ಹಲವಾರು ತಾಲೂಕುಗಳ ಕೇಂದ್ರ ಸ್ಥಾನವಾಗಿದ್ದು ಹಾಗೂ ಅಮೃತ ಭಾರತ ಯೋಜನೆಯಡಿ ನವೀಕರಣಗೊಂಡ ರೈಲು ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಲಾಗಿತ್ತು. ನನ್ನ ಮನವಿಗೆ ಸ್ಪಂದಿಸಿ ಶೀಘ್ರವಾಗಿ ರೈಲು ನಿಲುಗಡೆ ಆದೇಶ ನೀಡಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ, ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣ ಹಾಗೂ ಸಹಕಾರ ನೀಡಿದ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ ಜೋಶಿ ಅವರುಗಳಿಗೆ ಈ ಭಾಗದ ಜನತೆಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ. ಶೀಘ್ರದಲ್ಲಿ ರೈಲು ನಿಲುಗಡೆಗೆ ದಿನಾಂಕ ತಿಳಿಸಲಾಗುವುದು ಎಂದು ಸಂಸದ ಈರಣ್ಣ ಕಡಾಡಿ ಹೇಳಿದ್ದಾರೆ.
ಮೂಡಲಗಿ: ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಘಟಕ ಯೋಜನೆಯಡಿ ಕರ್ನಾಟಕ ರಾಜ್ಯದಲ್ಲಿ 375 ಎಸ್.ಸಿ, 189 ಎಸ್.ಟಿ ಮತ್ತು 2,351 ಒಬಿಸಿ ಫಲಾನುಭವಿಗಳ 5,177 ಸೂಕ್ಷ್ಮ ಆಹಾರ ಸಂಸ್ಕರಣಾ ಘಟಕಗಳಿಗೆ ಸಾಲಗಳನ್ನು ಮಂಜೂರು ಮಾಡಲಾಗಿದೆ ಮತ್ತು ಸುಮಾರು 21,852 ನೇರ/ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಎಂದು ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ರಾಜ್ಯ ಸಚಿವ ರವನೀತ್ ಸಿಂಗ್ ಅವರು ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.
ನವದೆಹಲಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಆಹಾರ ಸಂಸ್ಕರಣಾ ಘಟಕಗಳ ಯೋಜನೆಯ ಅನುಷ್ಠಾನದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಘಟಕ ಯೋಜನೆಯನ್ನು ದೇಶದಲ್ಲಿನ ಸೂಕ್ಷ್ಮ ಆಹಾರ ಸಂಸ್ಕರಣಾ ಉದ್ಯಮಗಳ ಉನ್ನತೀಕರಣಕ್ಕಾಗಿ ಆರ್ಥಿಕ, ತಾಂತ್ರಿಕ ಮತ್ತು ವಾಣಿಜ್ಯ ಸಹಾಯವನ್ನು ಒದಗಿಸಲು ಜಾರಿಗೊಳಿಸುತ್ತಿದೆ. ಈ ಯೋಜನೆಯು 2020-21 ರಿಂದ 2025-26 ರವರೆಗೆ 10,000 ಕೋಟಿ ರೂ. ಅನುದಾನ ನೀಡಲಾಗಿದೆ.
ದೇಶದಲ್ಲಿ 9,298 ಎಸ್.ಸಿ, 5,201 ಎಸ್.ಟಿ ಮತ್ತು 56,540 ಒಬಿಸಿ ಫಲಾನುಭವಿಗಳಿಗೆ 1,08,580 ಸೂಕ್ಷ್ಮ ಆಹಾರ ಸಂಸ್ಕರಣಾ ಘಟಕಗಳಿಗೆ ಸಾಲಗಳನ್ನು ಮಂಜೂರು ಮಾಡಲಾಗಿದೆ ಮತ್ತು ಸುಮಾರು 3,78,004 ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಎಂದರು.
ಆಹಾರ ಸಂಸ್ಕರಣೆ ಮತ್ತು ಸಂರಕ್ಷಣೆ ಸಾಮರ್ಥ್ಯ ಸೃಷ್ಟಿ/ವಿಸ್ತರಣೆ ಯೋಜನೆಯಡಿ ಕರ್ನಾಟಕ ರಾಜ್ಯಕ್ಕೆ 14 ಯೋಜನೆಗಳನ್ನು ಅನುಮೋದಿಸಲಾಗಿದೆ. ಮೆಗಾ ಫುಡ್ ಪಾರ್ಕ್ ಯೋಜನೆಯಡಿ ಕರ್ನಾಟಕ ರಾಜ್ಯಕ್ಕೆ 2 ಯೋಜನೆಗಳನ್ನು ಅನುಮೋದಿಸಲಾಗಿದೆ, ಇದು ಸರಿಸುಮಾರು 5620 ನೇರ/ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ. 726 ಜಿಲ್ಲೆಗಳಿಗೆ ಒಂದು ಜಿಲ್ಲೆ ಒಂದು ಉತ್ಪನ್ನವನ್ನು ಅನುಮೋದಿಸಿದೆ.
ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಘಟಕ ಯೋಜನೆಯಡಿ ಯೋಜನಾ ವೆಚ್ಚದ 35% ದರದಲ್ಲಿ ಕ್ರೆಡಿಟ್ ಲಿಂಕ್ಡ್ ಕ್ಯಾಪಿಟಲ್ ಸಬ್ಸಿಡಿ, ಪ್ರತಿ ಯೂನಿಟ್ಗೆ ಗರಿಷ್ಠ 10 ಲಕ್ಷ ರೂ. ಹಣಕಾಸಿನ ಸಹಾಯವನ್ನು ನೀಡಲಾಗುತ್ತದೆ. ಸ್ವಸಹಾಯ ಗುಂಪುಗಳ ಪ್ರತಿ ಸದಸ್ಯರಿಗೆ ರೂ 40,000 ದರದಲ್ಲಿ ಆರಂಭಿಕ ಬಂಡವಾಳ, ಸ್ವಸಹಾಯ ಗುಂಪುಗಳ ಒಕ್ಕೂಟಕ್ಕೆ ಗರಿಷ್ಠ ರೂ 4 ಲಕ್ಷ. ರೂ.ಗೆ ಒಳಪಟ್ಟಿರುತ್ತದೆ. ಎಫ್ಪಿಒಗಳು, ಎಸ್ಎಚ್ಜಿಗಳು, ಸಹಕಾರಿ ಸಂಘಗಳು ಅಥವಾ ಮೈಕ್ರೋ ಫುಡ್ ಪ್ರೊಸೆಸಿಂಗ್ ಎಂಟರ್ಪ್ರೈಸಸ್ಗಳ ಬ್ರ್ಯಾಂಡಿAಗ್ ಮತ್ತು ಮಾರ್ಕೆಟಿಂಗ್ಗಾಗಿ 50% ವರೆಗೆ ಅನುದಾನ ನೀಡಲಾಗುತ್ತದೆ ಎಂದು ಸಚಿವರು ಉತ್ತರಿಸಿದ್ದಾರೆಂದು ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.