ಭೋಪಾಲ್:
ಬುಡಕಟ್ಟು ಸಮುದಾಯದ ಕಾರ್ಮಿಕನೊಬ್ಬನ ಮೇಲೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಕಾರ್ಮಿಕ ದಶಮತ್ ರಾವತ್ ಅವರ ಪಾದ ತೊಳೆಯುವ ಮೂಲಕ ಕ್ಷಮೆಯಾಚಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ನನ್ನ ಮನಸ್ಸು ದುಃಖದಲ್ಲಿದೆ. ದಶಮತ್ ಅವರೆ, ನಿಮ್ಮ ದುಃಖವನ್ನು ಹಂಚಿಕೊಳ್ಳಲು ಇದೊಂದು ಸಣ್ಣ ಪ್ರಯತ್ನ. ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ. ನನಗೆ ಜನರೇ ದೇವರು‘ ಎಂದು ಬರೆದುಕೊಂಡಿದ್ದಾರೆ.
ಕಾರ್ಮಿಕ ದಶಮತ್ ಅವರನ್ನು ಕುರ್ಚಿಯ ಮೇಲೆ ಕೂರಿಸಿ, ಆತನ ಪಾದಗಳನ್ನು ಬಟ್ಟಲ ಮೇಲೆ ಇರಿಸಿ ಪಾದ ತೊಳೆದಿದ್ದಾರೆ. ನಂತರ ಆತನನ್ನು ಭೋಪಾಲ್ನ ಸ್ಮಾರ್ಟ್ ಸಿಟಿ ಪಾರ್ಕ್ಗೆ ಕರೆದುಕೊಂಡು ಹೋಗಿ ಆತನಿಂದ ಸಸಿ ನೆಟ್ಟಿಸಿದ್ದಾರೆ.
ಏಳು ದಿನಗಳ ಹಿಂದೆ ಮಧ್ಯಪ್ರದೇಶದ ಸಿಂಧಿ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ. ಬುಡಕಟ್ಟು ಸಮುದಾಯಕ್ಕೆ ಸೇರಿದ ದಶಮತ್ ರಾವತ್ ಪಾದಾಚಾರಿ ಮಾರ್ಗದಲ್ಲಿ ಕುಳಿತಿದ್ದರು. ಈ ವೇಳೆ ಅಲ್ಲಿಗೆ ಬಂದ ಆರೋಪಿ ಪ್ರವೇಶ್ ಶುಕ್ಲಾ, ದಶಮತ್ ಅವರ ಮೇಲೆ ಮೂತ್ರ ವಿಸರ್ಜನೆ ಮಾಡಿ, ವಿಡಿಯೊ ಮಾಡಿದ್ದನು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಆರೋಪಿ ಬಂಧನಕ್ಕೆ ನೆಟ್ಟಿಗರು ಒತ್ತಾಯಿಸಿದ್ದರು.
ತಕ್ಷಣ ಆರೋಪಿ ಪ್ರವೇಶ್ ಶುಕ್ಲಾ ಅವರನ್ನು ಬಂಧಿಸಿದ ಪೊಲೀಸರು ಆತನ ವಿರುದ್ಧ ಐಪಿಸಿ ಸೆಕ್ಷನ್ 294 (ಅಸಭ್ಯ ವರ್ತನೆ), 504 (ಉದ್ದೇಶ ಪೂರ್ವಕ ಅವಹೇಳನ), ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಆರೋಪಿಗೆ ಸೇರಿದ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡುವುದಾಗಿಯೂ ಗೃಹ ಸಚಿವರು ತಿಳಿಸಿದ್ದರು.