ಬೆಳಗಾವಿ : ಚಿಕ್ಕೋಡಿ ತಾಲೂಕು ಹತ್ತರವಾಟ ಗ್ರಾಮದ ಕಿರಣ ಸಣ್ಣಪ್ಪ ಕಮತೆ( 29 )ಇಡೀ ದೇಶಕ್ಕೆ 53ನೇ ಮತ್ತು ಕರ್ನಾಟಕಕ್ಕೆ ಮೊದಲ ರಾಂಕ್ ಪಡೆಯುವ ಮೂಲಕ ಕೀರ್ತಿ ತಂದಿದ್ದಾರೆ. ಬೆಳಗಾವಿಯ ಪ್ರತಿಷ್ಠಿತ ಗೋಗಟೆ ಎಂಜಿನಿಯರಿಂಗ್ ಕಾಲೇಜ್ ನಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದಿರುವ ಅವರು ಬೆಂಗಳೂರು ಲೋಕೋಪಯೋಗಿ ಇಲಾಖೆ ಮುಖ್ಯ ಕಚೇರಿಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಐದು ಸಲ ಪ್ರಿಲಿಮ್ಸ್ ಪಾಸಾಗಿದ್ದ ಅವರು ಮೇನ್ಸ್ ಪರೀಕ್ಷೆಯಲ್ಲಿ ವಿಫಲರಾಗಿದ್ದರು. ಆರನೇ ಸಲ ಇದೀಗ ಯಶಸ್ಸು ಸಾಧಿಸಿದ್ದಾರೆ. ನಿಡಸೋಸಿ ಹಿರಾ ಶುಗರ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅವರ ತಂದೆ ಸಣ್ಣಪ್ಪ ಕಮತೆ ಪ್ರಾಚಾರ್ಯರಾಗಿದ್ದಾರೆ. ತಾಯಿ ರುಕ್ಮಿಣಿ ಗೃಹಿಣಿ. ಸಹೋದರಿ ಕೀರ್ತಿ ಬೆಂಗಳೂರಿನಲ್ಲಿ ಆರ್ಕಿಟೆಕ್ಟರ್ ಆಗಿದ್ದಾರೆ.
2023ರಲ್ಲಿ ಕೆಲಸಕ್ಕೆ ಸೇರಿದ್ದೇನೆ. ಕೆಲಸ ಮಾಡುತ್ತಾ ದಿನಕ್ಕೆ 5 ಗಂಟೆ ಓದುತ್ತಿದ್ದೆ. ಈ ಸಲ 250ನೇ ರ್ಯಾಂಕ್ ಬರುವ ನಿರೀಕ್ಷೆ ಇತ್ತು. 53 ನೇ ರ್ಯಾಂಕ್ ಬಂದಿದ್ದು ಖುಷಿ ಕೊಟ್ಟಿದೆ ಎಂದು ಕಿರಣ ಅವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.


