ಬೆಳಗಾವಿ:
ಇಂದಿನ ತಂತ್ರಜ್ಞಾನದ ಉತ್ತುಂಗದ ದಿನಗಳಲ್ಲಿ ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಎದುರಿಸುವ ಅನಿವಾರ್ಯತೆ ಇದ್ದು ಈ ನಿಟ್ಟಿನಲ್ಲಿ ಅವರನ್ನು ಅಣಿಗೊಳಿಸಲು ಸರಕಾರಿ ಶಾಲೆಗಳನ್ನು ಉನ್ನತೀಕರಿಸುವ ಅಗತ್ಯ ಹೆಚ್ಚಿದೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.
ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಾವಿನಕಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಒಂದು ಸ್ಮಾರ್ಟ್ ಕ್ಲಾಸ್ ಸೇವೆ ಹಾಗೂ ನಾಲ್ಕು ಹೆಚ್ಚುವರಿ ಕೊಠಡಿಗಳನ್ನು ಉದ್ಘಾಟಿಸಿ, ಮಾತನಾಡಿದರು.
ಸ್ಮಾರ್ಟ್ ಕ್ಲಾಸ್ ಸೇವೆಯಲ್ಲಿ ಪ್ರೊಜೆಕ್ಟರ್, ಎಸಿ, ಬೆಂಚ್, ಯುಪಿಎಸ್ ಮತ್ತು ಇನವರ್ಟರ್, ಕಂಪ್ಯೂಟರ್, ಪ್ರಿಂಟರ್, ಟ್ಯಾಬ್, ಸ್ಮಾರ್ಟ್ ಕ್ಯಾಬಿನೆಟ್, ಪೋಡಿಯಮ್, ವಿಂಡೋ ಕರ್ಟನ್ಸ್, ಡೋರ್, ಮ್ಯಾಟ್ಸ್, ಡಿಜಿಟಲ್ ಕಂಟೆಂಟ್, ಎಲೆಕ್ಟ್ರಿಶಿಯನ್, ವಾಲ್ ಕ್ಲಾಕ್, ನೇಮ್ ಪ್ಲೇಟ್, ಪೇಂಟಿಂಗ್, ಟೈಲ್ಸ್ ಹಾಗೂ ಮುಂತಾದ ಸಾಮಗ್ರಿಗಳನ್ನು ಅಳವಡಿಸಲಾಗಿದೆ.
ಇದೇ ಸಂದರ್ಭದಲ್ಲಿ ಅವರು ಗ್ರಾಮದ ಸರಕಾರಿ ಹಿರಿಯ ಪ್ರೌಢಶಾಲೆಗೆ ಹೆಚ್ಚುವರಿಯಾಗಿ ಎರಡು ಕೊಠಡಿಗಳ ನಿರ್ಮಾಣಕ್ಕೂ ಸಹ ಭೂಮಿ ಪೂಜೆಯನ್ನು ಕೈಗೊಂಡು ಚಾಲನೆಯನ್ನು ನೀಡಿದರು.
ಗ್ರಾಮದ ಹಿರಿಯರು, ಶಂಕರಗೌಡ ಪಾಟೀಲ, ಉಳವಪ್ಪ ಮಲ್ಲಣ್ಣವರ, ಧರೇಗೌಡ ಪಾಟೀಲ, ಬಸವರಾಜ ಮಲ್ಲಣ್ಣವರ, ಎಸ್ ಡಿಎಂಸಿ ಅಧ್ಯಕ್ಷರು, ರಾಜು ನೇಸರಗಿ, ನಾಗರಾಜ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.