ಬೆಳಗಾವಿ :
ಕೇವಲ 16 ದಿನಗಳ ಹಾಗೂ ಎರಡೂವರೆ ಕೆಜಿ ತೂಗುತ್ತಿದ್ದ ನವಜಾತ ಮಗುವೊಂದು ಆಮ್ಲಜನಕ ಭರಿತ ರಕ್ತದ ಕೊರತೆಯಿಂದ ಮೈಬಣ್ಣ ನೀಲಿ ಬಣ್ಣಕ್ಕೆ ತಿರುಗಿ, ತ್ವರಿತ ಹೃದಯ ಬಡಿತದೊಂದಿಗೆ ನಾಡಿಮಿಡಿತವೂ ಕಡಿಮೆಗೊಂಡು ಜೀವನ್ಮರಣದ ನಡುವೆ ಹೋರಾಡುತ್ತಿತ್ತು. ಸತತ 8 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನೆರವೇರಿಸಿ, ಮಗುವಿನ ಪ್ರಾಣ ಉಳಿಸುವಲ್ಲಿ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಹೃದಯಶಸ್ತ್ರಚಿಕಿತ್ಸಾ ತಜ್ಞವೈದ್ಯರು ಯಶಸ್ವಿಯಾಗಿದ್ದಾರೆ.
ಇದು ಅತ್ಯಂತ ಅಪರೂಪದ ಜನ್ಮತಃ ಹೃದಯ ದೋಷವಾಗಿದ್ದು, ಮಗು ತಾಯಿಯ ಗರ್ಭದಲ್ಲಿರುವಾಗ ಕೆಲವೊಮ್ಮೆ ಕಂಡುಬರುವುದಿಲ್ಲ.
ಆಸ್ಪತ್ರೆಗೆ ಆಗಮಿಸಿದ್ದ ಮಹಾರಾಷ್ಟ್ರದ ಚಂದಗಡ ತಾಲೂಕಿನ ನವಜಾತ ಶಿಶುವನ್ನು ಚಿಕ್ಕಮಕ್ಕಳ ಹೃದಯ ತಜ್ಞವೈದ್ಯ ಡಾ. ಡ್ಯಾನಿಶ ಮೆಮನ್ ಪರೀಕ್ಷಿಸಿದಾಗ ಹೃದಯದ ಮುಖ್ಯ ರಕ್ತನಾಳ ಅದಲು ಬದಲಾಗಿ ಆಮ್ಲಜನಕಭರಿತ ರಕ್ತದ ಸಂಚಾರದ ತೊಂದರೆಯಿಂದ ತೀವ್ರ ಅನಾರೋಗ್ಯಕ್ಕೀಡಾಗಿತ್ತು. ತಡಮಾಡದ ವೈದ್ಯರು, ಶಸ್ತ್ರಚಿಕಿತ್ಸೆಗೆ ತೆಗೆದುಕೊಂಡರು.
ಸಾಮಾನ್ಯವಾಗಿ ಹೃದಯದಲ್ಲಿ ಮಹಾಪಧಮನಿಗಳ ಸಾಮಾನ್ಯ ಸಂಪರ್ಕಗಳಿರುತ್ತವೆ. ಅಂದರೆ ಮಹಾಪಧಮನಿ ಎಡಬದಿಯಿಂದ ಮತ್ತು ಶ್ವಾಸಕೋಶದ ಅಪಧಮನಿ ಬಲಬದಿಯಿಂದ ರಚಿಸಲ್ಪಡುತ್ತವೆ.
ಆದರೆ, ಶಿಶುವಿನ ದೊಡ್ಡ ಅಪಧಮನಿಗಳು ಅದಲು ಬದಲಾಗಿ ಸಂಪರ್ಕ ಹೊಂದಿದ್ದು, ಆಮ್ಲಜನಕರಹಿತ ರಕ್ತವನ್ನು ಬಲಕ್ಕೆ ಹಿಂತಿರುಗಿಸುತ್ತದೆ, ಶ್ವಾಸಕೋಶದ ಅಪಧಮನಿ ಎಡಕ್ಕೆ ಇರುವದರಿಂದ ಶ್ವಾಸಕೋಶದಿಂದ ಹಿಂತಿರುಗುವ ಆಮ್ಲಜನಕಯುಕ್ತ ರಕ್ತವನ್ನು ಮರಳಿ ಶ್ವಾಸಕೋಶಕ್ಕೆ ತೆಗೆದುಕೊಂಡು ಹೋಗುತ್ತದೆ.
ಆಮ್ಲಜನಕಯುಕ್ತ ಮತ್ತು ಆಮ್ಲಜನಕ ರಹಿತವನ್ನು ತಾತ್ಕಾಲಿಕವಾಗಿ ಮಿಶ್ರಣ ಮಾಡುವ ಸ್ಥಳವಿಲ್ಲದಿದ್ದರೆ ರಕ್ತ ಪರಿಚಲನೆಯಲ್ಲಿನ ಈ ವ್ಯವಸ್ಥೆಯು ಸಾವಿಗೆ ಕಾರಣವಾಗುತ್ತದೆ.
ಅತ್ಯಂತ ಅಪರೂಪವಾದ ಇದನ್ನು ಅಪಧಮನಿಯ ಸ್ವಿಚ್ ಆಪರೇಷನ್ ಮೂಲಕ ಸರಿಪಡಿಸಲಾಗುತ್ತದೆ. ಈ ವಿಧಾನವನ್ನು ಜನಿಸಿದ ಮೂರು ವಾರಗಳಲ್ಲಿ ಮಾಡಬೇಕಾಗುತ್ತದೆ. ದೊಡ್ಡ ಅಪಧಮನಿಗಳನ್ನು ಅವುಗಳ ಕೋಣೆಗೆ ಸಾಮಾನ್ಯ ಸಂಪರ್ಕಕ್ಕೆ ಬದಲಾಯಿಸಲಾಗುತ್ತದೆ. ನವಜಾತ ಶಿಶುಗಳ ಹೃದಯ ಶಸ್ತ್ರಚಿಕಿತ್ಸೆಯಲ್ಲಿ ಇದು ಅತ್ಯಂತ ಮುಖ್ಯವಾಗಿದ್ದು, ತಾಂತ್ರಿಕವಾಗಿ ಬೇಡಿಕೆಯಿರುವ ಸಂಕೀರ್ಣ ಶಸ್ತ್ರಚಿಕಿತ್ಸೆಯಾಗಿದೆ.
ಆಸ್ಟ್ರೇಲಿಯದ ಸಿಡ್ನಿಯಲ್ಲಿ ತರಬೇತಿ ಪಡೆದ ಚಿಕ್ಕಮಕ್ಕಳ ಹೃದಯ ಶಸ್ತ್ರಚಿಕಿತ್ಸಕ ಡಾ. ಗಣಂಜಯ್ ಸಾಳ್ವೆ ಅವರು ಯಶಸ್ವಿ ಶಸ್ತ್ರಚಿಕಿತ್ಸೆ ನೇರವೇರಿಸುವಲ್ಲಿ ಡಾ. ಆನಂದ ವಾಘರಾಳಿ ಮತ್ತು ಡಾ. ಶರಣಗೌಡ ಪಾಟೀಲ ಅವರು ಅರಿವಳಿಕೆ ನೀಡಿದರೆ, ಚಿಕ್ಕಮಕ್ಕಳ ಇಂಟೆನ್ಸಿವಿಸ್ಟ್ ಡಾ. ನಿಧಿ ಗೋಯೆಲ್ ಮಾನ್ವಿ, ಚಿಕ್ಕಮಕ್ಕಳ ಹೃದ್ರೋಗ ತಜ್ಞ ಡಾ. ವೀರೇಶ್ ಮಾನ್ವಿ ಮತ್ತು ಡಾ. ಡ್ಯಾನಿಶ್ ಮೆಮನ್ ಅವರು ಸಹಕರಿಸಿದರು.
ಶಸ್ತ್ರಚಿಕಿತ್ಸೆಯ ನಂತರ ಹತ್ತನೇ ದಿನಕ್ಕೆ ಮಗುವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದ ಡಾ. ಗನಂಜಯ್ ಸಾಳ್ವೆ ಮತ್ತು ಅವರ ಸಿಬ್ಬಂದಿ ತಂಡಕ್ಕೆ ತಮ್ಮ ಮಗುವಿನ ಕುಟುಂಬಸ್ಥರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
ಹೃದ್ರೋಗದಿಂದ ಬಳಲುತ್ತಿರುವ ನವಜಾತ ಮಕ್ಕಳನ್ನು ನಿಭಾಯಿಸಲು ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರವು ವಿಶ್ವ ದರ್ಜೆಯ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿದೆ ಎಂದು ಮುಖ್ಯ ಹೃದಯಶಸ್ತ್ರಚಿಕಿತ್ಸಕ ಡಾ. ರಿಚರ್ಡ್ ಸಲ್ಡಾನ್ಹಾ ವಿಭಾಗ ಮುಖ್ಯಸ್ಥ ಡಾ. ಮೋಹನ್ ಗಾನ ಅವರು ಹೇಳಿದ್ದಾರೆ. ಯಶಸ್ವಿ ಶಸ್ತ್ರ ಚಿಕಿತ್ಸೆ ನೆರವೇರಿಸಿ ಮಗುವಿಗೆ ಹೊಸ ಜೀವನವನ್ನು ನೀಡಿದ ವೈದ್ಯರ ತಂಡವನ್ನು ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. (ಕರ್ನಲ್) ಎಂ. ದಯಾನಂದ ಅಭಿನಂದಿಸಿದ್ದಾರೆ.