ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದ್ದು ತನ್ನ ಗ್ಯಾರಂಟಿ ಯೋಜನೆಗಳ ಜನಪ್ರಿಯತೆ ಹೇಳಿಕೊಳ್ಳುತ್ತಿದೆ. ಅದರ ಪರಿಣಾಮ ಈ ಬಾರಿ 20 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸುತ್ತಿದೆ. ಆದರೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಯಾರಿರಬಹುದು ಎಂಬ ಕಾಂಗ್ರೆಸ್ ಕಾರ್ಯಕರ್ತರ ಕುತೂಹಲಕ್ಕೆ ಇನ್ನು ಕೆಲ ದಿನ ಕಾಯಬೇಕಿದೆ. ಚುನಾವಣಾ ಸಮರಕ್ಕೆ ಕೈ ಪಡೆ ಇನ್ನೂ ಎಂದಿನಂತೆ ಸಿದ್ದವಾಗಿಲ್ಲ !
ಬೆಂಗಳೂರು : ಶತಮಾನದ ಇತಿಹಾಸ ಹೊಂದಿರುವ ಪಕ್ಷ ಎಂದು ಪದೇಪದೇ ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ ಚುನಾವಣೆಯ ಈ ಪರ್ವದಲ್ಲಿ ಮತ್ತೆ ಮೈಮರೆತಿದೆ. ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ್ದ ಕಾಂಗ್ರೆಸ್ ಇನ್ನು ಮೈಕೊಡವಿದಂತೆ ಕಾಣುತ್ತಿಲ್ಲ. ಲೋಕಸಭಾ ಚುನಾವಣೆಗೆ ಸಾಕಷ್ಟು ಮುಂಚಿತವಾಗಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಘೋಷಣೆ ಮಾಡಿದ್ದ ಕಾಂಗ್ರೆಸ್ ಪಕ್ಷ ಇದುವರೆಗೂ ಅಭ್ಯರ್ಥಿಗಳ ಘೋಷಣೆ ಮಾಡಿಲ್ಲ. ಇದು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿದ್ದು ಆಗಬಹುದಾದ ದೂರಗಾಮಿ ಸಾಧ್ಯತೆಗಳ ಹಿನ್ನೆಲೆಯಲ್ಲಿ ಈ ಕೂಡಲೇ ರಾಜ್ಯದ ಕೆಲ ಕ್ಷೇತ್ರಗಳಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.
ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ಇನ್ನೂ ದಿನಾಂಕ ಘೋಷಣೆ ಮಾಡಿಲ್ಲ. ಆದರೆ ಬಿಜೆಪಿ ಇದೀಗ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ ಪ್ರಮುಖ ಎದುರಾಳಿ ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಿದೆ. ಇದರಿಂದ ಸಹಜವಾಗಿ ಕಾಂಗ್ರೆಸ್ ಪಕ್ಷಕ್ಕೆ ಒತ್ತಡ ಉಂಟಾಗಿದೆ. ಹೀಗಾಗಿ ಮುಂದಿನ ವಾರ ಕಾಂಗ್ರೆಸ್ ತನ್ನ ಮೊದಲ ಪಟ್ಟಿಯಲ್ಲಿ ರಾಜ್ಯದ ಪ್ರಮುಖ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.
ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಕೋಲಾರ, ಚಾಮರಾಜನಗರ, ದಾವಣಗೆರೆ, ಚಿತ್ರದುರ್ಗ, ವಿಜಯಪುರ, ಬೀದರ್, ಬಳ್ಳಾರಿ, ರಾಯಚೂರು, ಕೊಪ್ಪಳ, ಬಾಗಲಕೋಟೆ ಕ್ಷೇತ್ರಗಳ ಹೆಸರು ಮೊದಲ ಪಟ್ಟಿಯಲ್ಲಿ ಬಿಡುಗಡೆಯಾಗಲಿದೆ. ಆರರಿಂದ ಹತ್ತು ಕ್ಷೇತ್ರಗಳ ಹೆಸರುಗಳು ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ. ತೀವ್ರ ಪೈಪೋಟಿಯಿಂದ ಕೂಡಿರುವ ಕ್ಷೇತ್ರಗಳಿಗೆ ನಂತರದ ದಿನಗಳಲ್ಲಿ ಹೆಸರು ಘೋಷಣೆಯಾಗಬಹುದು. ಕಾಂಗ್ರೆಸ್ ಪಕ್ಷ ಈ ಹಿಂದೆ ತಾನು ಚುನಾವಣೆಗೆ ಸಾಕಷ್ಟು ಮೊದಲೇ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಘೋಷಣೆ ಮಾಡಿತ್ತು. ಆದರೆ, ಈಗ ಬಿಜೆಪಿ ತನ್ನ ಪಟ್ಟಿ ಬಿಡುಗಡೆ ಮಾಡಿದ್ದರೂ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ ಇದುವರೆಗೂ ಮಾಡಿಲ್ಲ. ಇದರಿಂದ ಎಚ್ಚೆತ್ತಿರುವ ಕಾಂಗ್ರೆಸ್ ಬರುವ ದಿನಗಳಲ್ಲಿ ಎದುರಾಗಬಹುದಾದ ಹಾನಿಯನ್ನು ತುಂಬುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಆದಷ್ಟು ಶೀಘ್ರದಲ್ಲೇ ತನ್ನ ಅಭ್ಯರ್ಥಿಗಳ ಘೋಷಣೆ ಮಾಡುವ ನಿರೀಕ್ಷೆ ಇದೆ.