ಬೆಂಗಳೂರು: ವಿಧಾನಸಭೆಯಲ್ಲಿ ಒಂದು ಸ್ವಾರಸ್ಯಕರ ಸಂಗತಿ ನಡೆಯಿತು. ಎದುರಾಳಿ ಬಿಜೆಪಿ ಸದಸ್ಯರು ಆಡಳಿತ ಗುಂಪಿನವರನ್ನು ಕಾಡಿದರು. ಅದು ತಮಾಷೆಯ ಸಂಗತಿಗೆ ಮಾತ್ರ ಮೀಸಲಾಯಿತು ! ಮುಖ್ಯಮಂತ್ರಿಗೆ ಮೀಸಲಾದ ಆಸನದಲ್ಲಿ ಕುಳಿತುಕೊಳ್ಳಲು ಬಿಜೆಪಿಯ ಉದಯ ಗರುಡಾಚಾರ್ ಮುಂದಾಗುತ್ತಾರೆ. ಆಗ ತಕ್ಷಣ ಕೈ ಅಡ್ಡ ಇಟ್ಟು ತಡೆದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಉದಯ್ ಅವರನ್ನು ಪಕ್ಕಕ್ಕೆ ಎಳೆದ ಅಪರೂಪದ ಪ್ರಸಂಗ ವಿಧಾನಸಭೆಯಲ್ಲಿ ಮಂಗಳವಾರ ನಡೆಯಿತು.
ಶಿವಕುಮಾರ್ ಜೊತೆ ಮಾತನಾಡಲು ಆಡಳಿತ ಪಕ್ಷದ ಸಾಲಿಗೆ ತೆರಳಿದ ಉದಯ್ ಗರುಡಾಚಾರ್ ಅವರು, ಶಿವಕುಮಾರ್ ಅವರ ಎಡಭಾಗದಲ್ಲಿನ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳಲು ಮುಂದಾದರು. ಆಗ ಉಪಮುಖ್ಯಮಂತ್ರಿ ಶಿವಕುಮಾರ್, ಅವರ ಕೈ ಹಿಡಿದು ತಮ್ಮ ಬಲಭಾಗದಲ್ಲಿದ್ದ ಖಾಲಿ ಆಸನದಲ್ಲಿ ಕುಳಿತುಕೊಳ್ಳುವಂತೆ ಸಮಯ ಪ್ರಜ್ಞೆ ಮೆರೆದರು!
ತಮ್ಮ ತಪ್ಪು ಅರಿವಿಗೆ ಬರುತ್ತಿದ್ದಂತೆ ತಲೆ ಚಚ್ಚಿಕೊಂಡರು ಈ ಉದಯ್ ಗರುಡಾಚಾರ್ !
ವಿರೋಧ ಪಕ್ಷದ ಸದಸ್ಯರ ಕಡೆಗೆ ನೋಡಿ, ಏನೂ ಮಾತನಾಡಬೇಡಿ ಶ್ಶ್…! ಶ್ಶ್…! ಎಂದು ಬಾಯಿ ಮೇಲೆ ಬೆರಳಿಟ್ಟುಕೊಂಡು ಸನ್ಹೆ ಮಾಡಿದರು.
ಆದರೂ ಬಿಜೆಪಿಯ ಹಿರಿಯ ಸದಸ್ಯ ಸುನಿಲ್ ಕುಮಾರ್, ಯಾರೊ ಕೂರಬೇಕು ಎಂದುಕೊಂಡಿರುವ ಕುರ್ಚಿಯಲ್ಲಿ ಹೋಗಿ ನೀವು ಕೂರುತ್ತಿದ್ದೀರಲ್ಲಾ?’ ಎಂದು ಉದಯ್ ಮತ್ತು ಶಿವಕುಮಾರ್ ಇಬ್ಬರನ್ನೂ ಕಿಚಾಯಿಸಿದರು.
ಬಳಿಕ ವಿರೋಧ ಪಕ್ಷದ ಸಾಲಿನತ್ತ ಬಂದ ಉದಯ್ ಗರುಡಾಚಾರ್ ಅವರಿಗೆ ಬುದ್ದಿವಾದ ಹೇಳಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ, ‘ನೀವು ಆ ಸಾಲಿಗೆ ಹೋಗಿದ್ದೇ ತಪ್ಪು. ಹೋಗಿ ಆ ರೀತಿ ಮಾಡೋದಾ?’ ಎಂದರು.
ಒಟ್ಟಾರೆ ಈ ಪ್ರಸಂಗ ವಿಧಾನ ಸಭೆಯಲ್ಲಿ ಹಾಸ್ಯ ಮೊಳಗಲು ಕಾರಣವಾಯಿತು !


