ಲಕ್ನೋ: ವರದಕ್ಷಿಣೆ ಸಾವಿನ ಪ್ರಕರಣವೊಂದು ಅಚ್ಚರಿಯ ಟ್ವಿಸ್ಟ್ ಪಡೆದುಕೊಂಡ ವಿದ್ಯಮಾನ ಉತ್ತರಪ್ರದೇಶದ ಔರೈಯಾ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮಹಿಳೆಯ ಸಾವಿಗೆ ವರದಕ್ಷಿಣೆಯ ಕಿರುಕುಳ ಕಾರಣ ಎಂದು ಆಕೆಯ ಅತ್ತೆ-ಮಾವನ ಮೇಲೆ ದೂರು ದಾಖಲಾಗಿ ವಿಚಾರಣೆ ನಡೆಯುತ್ತಿರುವಾಗ ಸತ್ತಿದ್ದಾಳೆಂದು ಭಾವಿಸಲಾಗಿದ್ದ ಉತ್ತರ ಪ್ರದೇಶದ ಮಹಿಳೆ ಮಧ್ಯಪ್ರದೇಶದಲ್ಲಿ ಜೀವಂತವಾಗಿ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಈ ಪ್ರಕರಣವು 2023ರದ್ದು. ಮದುವೆಯಾದ ಸುಮಾರು 18 ತಿಂಗಳ ನಂತರ ಮಹಿಳೆಯು ಔರೈಯಾ ಜಿಲ್ಲೆಯ ತನ್ನ ಗಂಡನ ಮನೆಯಿಂದ ನಾಪತ್ತೆಯಾಗಿದ್ದಳು. ಆ ಸಮಯದಲ್ಲಿ, ಆಕೆಯ ಕುಟುಂಬವು ಮಹಿಳೆ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಿತು. ತೀವ್ರ ಹುಡುಕಾಟದ ನಂತರವೂ ಆಕೆಯ ಬಗ್ಗೆ ಯಾವುದೇ ಸುಳಿವು ಸಿಗದಿದ್ದಾಗ, ಆಕೆಯ ತವರು ಮನೆಯವರು ವರದಕ್ಷಿಣೆಗಾಗಿ ಆಕೆಯನ್ನು ಕೊಲ್ಲಲಾಗಿದೆ ಎಂದು ಆರೋಪಿಸಿ ದೂರು ದಾಖಲಿಸಿದರು.
ನಂತರ ತನಿಖೆ ನಡೆಸಿದ್ದ ಪೊಲೀಸರಿಗೆ ಮಹಿಳೆಯ ಯಾವ ಕುರುಹುಗಳು ಪತ್ತೆಯಾಗಿರಲಿಲ್ಲ. ಕೊನೆಗೆ ನ್ಯಾಯಾಲಯದ ಆದೇಶದಂತೆ ಮಹಿಳೆಯ ಪತಿ ಹಾಗೂ 6 ಮಂದಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು.
ಈ ಪ್ರಕರಣ ಸುಮಾರು ಎರಡು ವರ್ಷಗಳ ಕಾಲ ನ್ಯಾಯಾಲಯದಲ್ಲಿ ಮುಂದುವರೆಯಿತು. ನಂತರ ತನಿಖೆಯನ್ನು ವಿಶೇಷ ಕಾರ್ಯಾಚರಣೆ ಗುಂಪು (SOG) ಮತ್ತು ಉತ್ತರ ಪ್ರದೇಶ ಪೊಲೀಸರ ಕಣ್ಗಾವಲು ತಂಡಕ್ಕೆ ಹಸ್ತಾಂತರಿಸಲಾಯಿತು. ತಿಂಗಳುಗಳ ಮೇಲ್ವಿಚಾರಣೆ ಮತ್ತು ಶೋಧ ಕಾರ್ಯಾಚರಣೆಯ ನಂತರ, ಮಹಿಳೆ ಕೊನೆಗೂ ಮಧ್ಯಪ್ರದೇಶದಲ್ಲಿ ಜೀವಂತವಾಗಿ ಪತ್ತೆಯಾಗಿದ್ದಾಳೆ…!
ಬುಧವಾರ ಮಹಿಳೆಯನ್ನು ಔರೈಯಾಗೆ ಕರೆತರಲಾಯಿತು. ಮಹಿಳೆ ಪತ್ತೆಯಾಗಿರುವುದು ಹೊಸ ಪ್ರಶ್ನೆಗಳನ್ನು ಸೃಷ್ಟಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಕೆ ಇಷ್ಟು ದಿನ ಮಧ್ಯಪ್ರದೇಶದಲ್ಲಿ ಏಕೆ ಇದ್ದರು ಮತ್ತು ಈ ಅವಧಿಯಲ್ಲಿ ತಮ್ಮ ತವರು ಮನೆಯವರನ್ನು ಅಥವಾ ಗಂಡನ ಮನೆಯವರನ್ನು ಏಕೆ ಸಂಪರ್ಕಿಸಲಿಲ್ಲ ಎಂಬುದರ ಕುರಿತು ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ. “ಇದು ನ್ಯಾಯಾಲಯದಲ್ಲಿರುವ ಪ್ರಕರಣದ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.