ಕೋಲಾರ :
ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಘೋಷಿಸಿದ ಬಳಿಕ ಬಸ್ನಲ್ಲಿ ಸೀಟಿಗಾಗಿ ಮಹಿಳೆಯರ ಗಲಾಟೆ-ಜಗಳ ನಡೆಯುತ್ತಿರುವುದು ವರದಿಯಾಗುತ್ತಿವೆ.
ಕೋಲಾರದಲ್ಲಿ ಸೀಟಿಗಾಗಿ ಮಹಿಳೆಯರು ಕಿತ್ತಾಡಿಕೊಂಡ ಘಟನೆಯಲ್ಲಿ ಪೊಲೀಸರು ಲಾಠಿ ಚಾರ್ಜ್ ಮಾಡುವ ಹಂತದ ವರೆಗೆ ಬಂದಿತ್ತು ಎಂದು ವರದಿಯಾಗಿದೆ.
ಕೋಲಾರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಲಾಠಿ ಚಾರ್ಜ್ ಮಾಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಕೋಲಾರದಿಂದ ಬೆಂಗಳೂರಿಗೆ ತೆರಳುವ ಬಸ್ನಲ್ಲಿ ಇಬ್ಬರು ಮಹಿಳೆಯರು ಕಿತ್ತಾಡಿಕೊಂಡಿದ್ದಾರೆ.
ಸೀಟು ಹಿಡಿಯಲು ಮಹಿಳೆಯೊಬ್ಬರು ಕಿಟಕಿಯಿಂದ ಬ್ಯಾಗ್ ಹಾಕಿದ್ದರು ಎನ್ನಲಾಗಿದ್ದು, ಬ್ಯಾಗ್ ಹಾಕಿದ್ದ ಸೀಟಿನಲ್ಲಿ ಬೇರೊಬ್ಬ ಮಹಿಳೆ ಕುಳಿತುಕೊಂಡಿದ್ದೇ ಇಷ್ಟೆಲ್ಲ ರಾದ್ದಾಂತಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.
ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಅದು ವಿಕೋಪಕ್ಕೆ ಹೋಗಿ ಗಲಾಟೆಗೆಯಾಗಿದೆ.
ಗಲಾಟೆ ಜೋರಾದ ನಂತರ ಮಹಿಳೆ ತನ್ನ ಸಂಬಂಧಿಕರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾಳೆ. ನಂತರ ಬಸ್ ಅಡ್ಡಗಟ್ಟಿ ಗಲಾಟೆ ನಡೆದಿದೆ.
ಮಹಿಳೆಯರ ನಡುವೆ ಗಲಾಟೆ ಮಿತಿ ಮೀರಿದ ನಂತರ ಗುಂಪು ಸೇರಿದೆ.
ಸ್ಥಳಕ್ಕೆ ಬಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದ್ದಾರೆ.
ಬಳಿಕ ಇಬ್ಬರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ಎಚ್ಚರಿಕೆ ನೀಡಿ ಕಳುಹಿಸಲಾಗಿದೆ ಎನ್ನಲಾಗಿದೆ.