ಬೆಳಗಾವಿ: ಚಿಕನ್ ಸೆಂಟರ್’ ನಡೆಸುತ್ತಿದ್ದ ಇಬ್ಬರು ಸಹೋದರ ಮೇಲೆ ಶುಕ್ರವಾರ ಹಾಡಹಗಲೇ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿರುವ ಘಟನೆ ಚನ್ನಮ್ಮನ ಕಿತ್ತೂರಿನ ಗುರುವಾರ ಪೇಟೆಯ ಸರ್ಕಾರಿ ಪ್ರಾಥಮಿಕ ಶಾಲೆ ಬಳಿ ಇರುವ ‘ಡೈಮಂಡ್ ಚಿಕನ್ ಸೆಂಟರ್’ನಲ್ಲಿ ನಡೆದಿದೆ.
ಮುಜಮ್ಮಿಲ ಇನ್ನಾ ಜಮಾದಾರ (33), ತೌಸೀಫ್ ಇನ್ನಾ ಜಮಾದಾರ (36) ಹಲ್ಲೆಗೊಳಗಾದವರು. ಇವರಲ್ಲಿ ಮುಜಮ್ಮಿಲ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಗಂಭೀರವಾಗಿ ಗಾಯಗೊಂಡಿರುವ ಮುಜಮ್ಮಿಲ ಅವರನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಇಬ್ಬರ ನಡುವಿನ ಹಣಕಾಸಿನ ವ್ಯವಹಾರವೇ ಈ ಘಟನೆಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ಕ್ರೂಸರ್ ವಾಹನದಲ್ಲಿ ಸುಮಾರು ಹತ್ತು, ಹನ್ನೆರಡು ಜನರಿದ್ದ ತಂಡವು ಅಂಗಡಿಯೊಳಗೆ ಬೆಳಿಗ್ಗೆ ನುಗ್ಗಿತು. ಅಂಗಡಿಯಲ್ಲಿದ್ದ ಒಬ್ಬನನ್ನು ಎಳೆದುಕೊಂಡು ಹೊರಗೆ ಬಂದು ಮಚ್ಚಿನಿಂದ ಹಲ್ಲೆ ಮಾಡಿತು. ಉಳಿದವರು ಮತ್ತೊಬ್ಬನ ಮೇಲೆ ಹಲ್ಲೆ ಮಾಡಲು ಅಂಗಡಿಗೆ ನುಗ್ಗಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ಹಾಡಹಗಲೇ ಮಚ್ಚು, ಲಾಂಗು ಝಳಪಿಸುವುದನ್ನು ಕಂಡು ಆ ಪ್ರದೇಶದ ಜನರಲ್ಲಿ ಆತಂಕ ವ್ಯಕ್ತವಾಗಿದೆ. ಕೈಯಲ್ಲಿದ್ದ ಮಾರಕಾಸ್ತ್ರಗಳನ್ನು ನೋಡಿ ಯಾರೂ ಹತ್ತಿರ ಸುಳಿಯಲು ಧೈರ್ಯವಾಗಲಿಲ್ಲ ಎಂದು ಯುವಕರು ಹೇಳಿದರು.
ನೇಸರಗಿಯ ಯಲ್ಲಪ್ಪ ಲಕ್ಕುಂಡಿ, ವಿನೋದ ಸೇರಿ 12 ಜನರಿಂದ ತಂಡವು ನನ್ನ ಮಕ್ಕಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಮುಜಮ್ಮಿಲ ತಂದೆ ಇನ್ನಾ ಜಮಾದಾರ ತಿಳಿಸಿದರು. ಅವರಿಗೆ ಕೊಡಬೇಕಾದ ಹಣ, ಬಡ್ಡಿ ಸೇರಿ ಪಾವತಿ ಮಾಡಿದ್ದೇವೆ. ಆದರೂ ಇನ್ನೂ ಕೊಡಬೇಕು ಎಂದು ಹಲ್ಲೆ ಮಾಡಿದ್ದಾರೆ’ ಎಂದು ಅಳಲು ತೋಡಿಕೊಂಡರು.