ಬೆಳಗಾವಿ: ಖಾನಾಪುರ ತಾಲೂಕಿನ ಗೋಟಗಾಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾಂಬೇಗಾಳಿ ಗ್ರಾಮದ ಮನೆಯಲ್ಲಿ ಅಕ್ರಮವಾಗಿ ಸಂಗ್ರಹ ಮಾಡಿ ಇಟ್ಟುಕೊಂಡಿದ್ದ ಕಾಡುಕೋಣದ ಮಾಂಸ ಮತ್ತು ಜಿಂಕೆಯ ಕೊಂಬುಗಳನ್ನು ಗುರುವಾರದಂದು ಅರಣ್ಯ ಇಲಾಖೆಯ ಅಧಿಕಾರಿಗಳು ಪತ್ತೆಹಚ್ಚಿ ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ.
ಖಚಿತ ಮಾಹಿತಿ ಅನ್ವಯ ದಾಳಿ ನಡೆಸಿದ ಅಧಿಕಾರಿಗಳು ಮಹಮ್ಮದ್ ಆಲಿ ಹಲಸಿಕರ ಮತ್ತು ಮೌಲಾಲಿ ಹಲಸಿಕರ ಎಂಬುವರನ್ನು ಬಂಧಿಸಿದ್ದಾರೆ. ಕಾಡುಕೋಣದ ಮಾಂಸ ಹಾಗೂ ಜಿಂಕೆಯ ಕೊಂಬುಗಳನ್ನು ವಶಕ್ಕೆ ಪಡೆಯಲಾಗಿದೆ. ಅವರನ್ನು ಮತ್ತು ದಾಳಿಯ ಸಂದರ್ಭದಲ್ಲಿ ದೊರೆತ ಈ ವಸ್ತುಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ನಾಗರಗಾಳಿ ಉಪ ವಿಭಾಗದ ಎಸಿಎಫ್ ಶಿವಾನಂದ ಅವರ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ.
ಆರ್ಎಫ್ ಒ ಪ್ರಶಾಂತ ಮಂಗಸೂಳಿ, ಕೇದಾರಿ ತೇಲಂಗಿ, ಸಂತೋಷ ಗೌಡರ, ಪ್ರವೀಣ ಕಮ್ಮಾರ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.