ಮುಂಬೈ : 2024 ರ ಅಮೆರಿಕ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸುತ್ತಿದ್ದಂತೆ ಭಾರತದ ಸ್ಟಾಕ್ ಮಾರ್ಕೆಟ್ ಬುಧವಾರ (ನವೆಂಬರ್ 6) ಏರಿಕೆ ಕಂಡಿದೆ. ಅಮೆರಿಕದ ಚುನಾವಣಾ ಫಲಿತಾಂಶಗಳಲ್ಲಿ ಟ್ರೆಂಡ್ಗಳು ಟ್ರಂಪ್ ಮುನ್ನಡೆ ಸಾಧಿಸುತ್ತಿದ್ದಂತೆಯೇ ಬಿಎಸ್ಇ ಸೆನ್ಸೆಕ್ಸ್ 1,093.1 ಪಾಯಿಂಟ್ಗಳು ಅಥವಾ ಶೇಕಡಾ 1.37 ರಷ್ಟು ಏರಿಕೆ ಕಂಡು ಇಂಟ್ರಾಡೇ ಗರಿಷ್ಠ 80,569.73 ಕ್ಕೆ ತಲುಪಿದೆ. ಎನ್ಎಸ್ಇ ನಿಫ್ಟಿ 324.3 ಪಾಯಿಂಟ್ಗಳು ಅಥವಾ ಶೇಕಡಾ 1.33 ರಷ್ಟು ಜಿಗಿದು 24,537.6 ಕ್ಕೆ ತಲುಪಿದೆ. ಏಕೆಂದರೆ ವಿಶ್ಲೇಷಕರು ಟ್ರಂಪ್ ಗೆಲುವು ಭಾರತೀಯ ಮಾರುಕಟ್ಟೆಗಳಿಗೆ ಧನಾತ್ಮಕವಾಗಿರುತ್ತದೆ ಎಂದು ನಿರೀಕ್ಷಿಸುತ್ತಾರೆ. ಸೆನ್ಸೆಕ್ಸ್ ಸೂಚ್ಯಂಕವು ಅಂತಿಮವಾಗಿ 901.5 ಪಾಯಿಂಟ್ಗಳಷ್ಟು ಏರಿಕೆ (ಶೇ 1.13) ಕಂಡು 80,378 ದಲ್ಲಿ ನಿಂತಿತು. ಮತ್ತು ನಿಫ್ಟಿ -50 271 ಪಾಯಿಂಟ್ಗಳು ಅಥವಾ 1.12 ರಷ್ಟು ಏರಿಕೆಯಾಗಿ 24,484 ಕ್ಕೆ ನಿಂತಿತು. ಐಟಿ ವಲಯದ ಎಚ್ ಸಿಎಲ್ ಟೆಕ್, ಇನ್ಫೋಸಿಸ್, ಟೆಕ್ ಮಹೀಂದ್ರ ಮತ್ತು ವಿಪ್ರೋ ಷೇರುಗಳು ಲಾಭ ಗಳಿಸಿದೆ. ಟ್ರಂಪ್ ಗೆಲುವಿನ ಸುದ್ದಿ ಅಮೆರಿಕದ ಈಕ್ವಿಟಿ ಮಾರುಕಟ್ಟೆ ಚೇತರಿಕೆ ಕಂಡಿದ್ದು, ಭಾರತದ ಷೇರುಪೇಟೆ ಲಾಭಗಳಿಸುವಂತೆ ಮಾಡಿದೆ.
ಅಕ್ಟೋಬರ್ನಲ್ಲಿ, ನಿಫ್ಟಿ ಶೇಕಡಾ 6.16 ರಷ್ಟು ಕುಸಿದಿತ್ತು ಮತ್ತು ಬಿಎಸ್ಇ ಸೆನ್ಸೆಕ್ಸ್ ಶೇಕಡಾ 5.7 ರಷ್ಟು ಕುಸಿದಿತ್ತು. ಅದು ಏರಿಕೆ ಕಂಡಿದೆ.
“ಟ್ರಂಪ್ ಗೆಲ್ಲುವ ನಿರೀಕ್ಷೆಯೊಂದಿಗೆ ಅಮೆರಿಕದಿಂದ ನಾವು ಹೆಚ್ಚು ಸ್ನೇಹಪರ ಆರ್ಥಿಕ ನೀತಿಗಳನ್ನು ನಿರೀಕ್ಷಿಸಬಹುದು” ಎಂದು ಇಕ್ವಿನಾಮಿಕ್ಸ್ ರಿಸರ್ಚ್ ಸಂಸ್ಥಾಪಕ ಮತ್ತು ಸಂಶೋಧನಾ ಮುಖ್ಯಸ್ಥ ಜಿ ಚೊಕ್ಕಲಿಂಗಂ ಹೇಳಿದ್ದಾರೆ. ನವೆಂಬರ್ 2024 ರ ಚುನಾವಣೆಯಲ್ಲಿ ಟ್ರಂಪ್ ಗೆಲುವು ಸಾಧಿಸಿದರೆ, ಭಾರತದ ವಾಹನ, ಇಂಧನ ಮತ್ತು ಲೋಹ ಕ್ಷೇತ್ರಗಳಿಗೆ ಲಾಭವಾಗುವ ಸಾಧ್ಯತೆಯಿದೆ ಎಂದು ತಜ್ಞರು ನಂಬಿದ್ದಾರೆ.
ವ್ಯಾಪಾರ-ವ್ಯವಹಾರದ ತಜ್ಞರ ಪ್ರಕಾರ, ಅಮೆರಿಕವು ಭಾರತದ ಸರಕು ರಫ್ತಿನ ಸುಮಾರು 18%ರಷ್ಟನ್ನು ಹೊಂದಿದೆ ಮತ್ತು ಎಲೆಕ್ಟ್ರಾನಿಕ್ಸ್, ಮುತ್ತುಗಳು ಮತ್ತು ಅಮೂಲ್ಯ ಹರಳುಗಳು, ಔಷಧಗಳು, ಪರಮಾಣು ರಿಯಾಕ್ಟರ್ಗಳು, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಸ್ವಲ್ಪ ಮಟ್ಟಿಗೆ, ಕಬ್ಬಿಣ ಮತ್ತು ಉಕ್ಕು, ಆಟೋಗಳು ಮತ್ತು ಜವಳಿ ಭಾರತದಿಂದ ದೊಡ್ಡ ಪ್ರಮಾಣದಲ್ಲಿ ರಫ್ತಾಗುತ್ತವೆ. ವಿಶೇಷವಾಗಿ ಐಟಿ ಮತ್ತು ವೃತ್ತಿಪರ ಸೇವೆಗಳು ಸೇರಿದಂತೆ ಅಮೆರಿಕಕ್ಕೆ ವಿಶ್ವದ ಉನ್ನತ ಸೇವಾ ರಫ್ತುದಾರರಲ್ಲಿ ಭಾರತವು ಒಂದಾಗಿದೆ.
ಜಾಗತಿಕ ಮಾರುಕಟ್ಟೆ
ಬುಧವಾರ ಜಪಾನ್ನ ನಿಕಾಯಿ-225 ಶೇಕಡಾ 2.61 ರಷ್ಟು ಏರಿಕೆಯಾಗಿದೆ. ಆದರೆ ಚೀನಾದ ಮುಖ್ಯ ಶೇರು ಮಾರ್ಕೆಟ್ ಶೇಕಡಾ 0.50 ರಷ್ಟು ಕಡಿಮೆಯಾಗಿದೆ, ಹಾಂಗ್ ಕಾಂಗ್ನ ಹ್ಯಾಂಗ್ ಸೆಂಗ್ ಶೇಕಡಾ 2.23 ರಷ್ಟು ಕಡಿಮೆಯಾಗಿದೆ.
ಚೀನಾ ವಿರೋಧಿ ನೀತಿಗಳಿಂದಾಗಿ ಟ್ರಂಪ್ ಅವರ ಗೆಲುವು ಚೀನಾದ ಮಾರುಕಟ್ಟೆಗಳಿಗೆ ನಕಾರಾತ್ಮಕವಾಗಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.