ವಾಷಿಂಗ್ಟನ್: ಅಮೆರಿಕದ ಗ್ರೀನ್ಲ್ಯಾಂಡ್ ಸ್ವಾಧೀನ ಪಡಿಸಿಕೊಳ್ಳುವ ಯೋಜನೆಯನ್ನು ವಿರೋಧಿಸುತ್ತಿರುವ ಯುರೋಪಿಯನ್ ರಾಷ್ಟ್ರಗಳ ಮೇಲೆ ಶೇ. 10 ರಷ್ಟು ಆಮದು ಸುಂಕವನ್ನು (Tariff) ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಪ್ರಕಟಿಸಿದ್ದಾರೆ. ಫೆಬ್ರವರಿ 1 ರಿಂದ ಡೆನ್ಮಾರ್ಕ್, ಬ್ರಿಟನ್, ಫ್ರಾನ್ಸ್ ಮತ್ತು ಇತರ ಐರೋಪ್ಯ ಒಕ್ಕೂಟದ (EU) ರಾಷ್ಟ್ರಗಳ ಮೇಲೆ ಈ ಸುಂಕ ಜಾರಿಗೆ ಬರಲಿದೆ.
ತಮ್ಮ ‘ಟ್ರೂತ್ ಸೋಶಿಯಲ್’ (Truth Social) ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಟ್ರಂಪ್, “ಅಮೆರಿಕದಿಂದ ಗ್ರೀನ್ಲ್ಯಾಂಡ್ನ ಸಂಪೂರ್ಣ ಖರೀದಿಗೆ ಸಂಬಂಧಿಸಿದಂತೆ ಒಪ್ಪಂದ ಏರ್ಪಡದಿದ್ದರೆ, ಜೂನ್ 1 ರಿಂದ ಈ ಸುಂಕವನ್ನು ಶೇ. 25 ಕ್ಕೆ ಏರಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ತಮ್ಮ ಗ್ರೀನ್ಲ್ಯಾಂಡ್ ಯೋಜನೆಯನ್ನು ಬೆಂಬಲಿಸದ ದೇಶಗಳ ಮೇಲೆ ಸುಂಕ ಹೇರುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ ಮರುದಿನವೇ ಈ ನಿರ್ಧಾರ ಹೊರಬಿದ್ದಿದೆ.
ಯುರೋಪಿಯನ್ ರಾಷ್ಟ್ರಗಳ ಪ್ರತಿಕ್ರಿಯೆ
ಗ್ರೀನ್ಲ್ಯಾಂಡ್ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಕೇವಲ ಡೆನ್ಮಾರ್ಕ್ ಮತ್ತು ಗ್ರೀನ್ಲ್ಯಾಂಡ್ಗೆ ಮಾತ್ರ ಇದೆ ಎಂದು ಯುರೋಪಿಯನ್ ನಾಯಕರು ಹೇಳಿದ್ದಾರೆ. ಈ ನಡುವೆ, ಮಿತ್ರರಾಷ್ಟ್ರಗಳ ಸಹಕಾರದೊಂದಿಗೆ ಗ್ರೀನ್ಲ್ಯಾಂಡ್ನಲ್ಲಿ ತನ್ನ ಮಿಲಿಟರಿ ಉಪಸ್ಥಿತಿಯನ್ನು ಹೆಚ್ಚಿಸುತ್ತಿರುವುದಾಗಿ ಡೆನ್ಮಾರ್ಕ್ ಈ ವಾರ ತಿಳಿಸಿದೆ.
ಆದರೆ, ಯುರೋಪಿಯನ್ ಮಿಲಿಟರಿ ಉಪಸ್ಥಿತಿಯಿಂದ ಗ್ರೀನ್ಲ್ಯಾಂಡ್ ವಶಪಡಿಸಿಕೊಳ್ಳುವ ತನ್ನ ಗುರಿಯ ಮೇಲೆ ಯಾವುದೇ ಪರಿಣಾಮ ಬೀರದು ಎಂದು ಅಮೆರಿಕ ಹೇಳಿದರೆ, ಫ್ರಾನ್ಸ್ನ ಸಶಸ್ತ್ರ ಪಡೆಗಳ ಸಚಿವೆ ಆಲಿಸ್ ರುಫೋ, “ಇದು ಖಂಡವು ತನ್ನ ಸಾರ್ವಭೌಮತ್ವವನ್ನು ರಕ್ಷಿಸಲು ಸಿದ್ಧವಾಗಿದೆ ಎಂಬುದರ ಸಂಕೇತವಾಗಿದೆ” ಎಂದು ಹೇಳಿದ್ದಾರೆ.
ಟ್ರಂಪ್ ವಾದವೇನು?
ಖನಿಜ ಸಂಪತ್ತಿನಿಂದ ಸಮೃದ್ಧವಾಗಿರುವ ಗ್ರೀನ್ಲ್ಯಾಂಡ್ ಅಮೆರಿಕದ “ರಾಷ್ಟ್ರೀಯ ಭದ್ರತೆ”ಗೆ ಅತ್ಯಗತ್ಯ ಎಂದು ಟ್ರಂಪ್ ಕಳೆದ ಹಲವು ದಿನಗಳಿಂದ ಪ್ರತಿಪಾದಿಸುತ್ತಿದ್ದಾರೆ. “ಗ್ರೀನ್ಲ್ಯಾಂಡ್ ಅಮೆರಿಕದ ವಶಕ್ಕೆ ಬರದಿದ್ದರೆ ಅದು ಸ್ವೀಕಾರಾರ್ಹವಲ್ಲ” ಎಂದು ಅವರು ಹೇಳಿದ್ದಾರೆ. ಚೀನಾ ಮತ್ತು ರಷ್ಯಾ ಈ ಪ್ರದೇಶವನ್ನು ಆಕ್ರಮಿಸಿಕೊಳ್ಳುವುದನ್ನು ತಡೆಯಲು ಅಮೆರಿಕ ಇದನ್ನು ವಶಪಡಿಸಿಕೊಳ್ಳುವುದು ಅನಿವಾರ್ಯ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಪ್ರತಿಭಟನೆ – ವಿರೋಧ
ಗ್ರೀನ್ಲ್ಯಾಂಡ್ ಭವಿಷ್ಯದ ಬಗ್ಗೆ ಡೆನ್ಮಾರ್ಕ್ ಮತ್ತು ಅಮೆರಿಕದ ನಡುವೆ “ಮೂಲಭೂತ ಭಿನ್ನಾಭಿಪ್ರಾಯಗಳಿವೆ” ಎಂದು ಡೆನ್ಮಾರ್ಕ್ ಪ್ರತಿನಿಧಿಗಳು ತಿಳಿಸಿದ್ದಾರೆ. ಅಮೆರಿಕದ ಬೆದರಿಕೆಯ ನಡುವೆ, ಸ್ವಯಂ ಆಡಳಿತದ ಬೆಂಬಲಾರ್ಥವಾಗಿ ಶನಿವಾರ ಸಾವಿರಾರು ಜನರು ಕೋಪನ್ ಹ್ಯಾಗನ್ನಲ್ಲಿ ಮೆರವಣಿಗೆ ನಡೆಸಿದರು. “ಗ್ರೀನ್ಲ್ಯಾಂಡ್ ಮಾರಾಟಕ್ಕಿಲ್ಲ” ಮತ್ತು “ಗ್ರೀನ್ಲ್ಯಾಂಡ್ ಈಗಾಗಲೇ ಶ್ರೇಷ್ಠವಾಗಿದೆ” ಎಂಬ ಫಲಕಗಳನ್ನು ಹಿಡಿದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಡೆನ್ಮಾರ್ಕ್ ವಿದೇಶಾಂಗ ಸಚಿವ ಲಾರ್ಸ್ ಲೊಕ್ಕೆ ರಾಸ್ಮುಸ್ಸೆನ್ ಮಾತನಾಡಿ, “ಅಮೆರಿಕದ ಸ್ವಾಧೀನದ ಪ್ರಶ್ನೆಯೇ ಇಲ್ಲ. ಇದು ಅಂತಾರಾಷ್ಟ್ರೀಯ ನಿಯಮಗಳಿಗೆ ವಿರುದ್ಧವಾಗಿದೆ ಮತ್ತು ಸಾರ್ವಭೌಮತ್ವದ ಉಲ್ಲಂಘನೆಯಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಗ್ರೀನ್ಲ್ಯಾಂಡ್ ಪ್ರಧಾನಿ ಜೆನ್ಸ್-ಫ್ರೆಡೆರಿಕ್ ನೀಲ್ಸನ್ ಸಹ ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ನಾವು ಅಮೆರಿಕ ಮತ್ತು ಡೆನ್ಮಾರ್ಕ್ ನಡುವೆ ಆಯ್ಕೆ ಮಾಡಿಕೊಳ್ಳಬೇಕಾದ ಸಂದರ್ಭ ಬಂದರೆ, ನಾವು ಡೆನ್ಮಾರ್ಕ್, ನಾಟೊ (NATO) ಮತ್ತು ಐರೋಪ್ಯ ಒಕ್ಕೂಟವನ್ನೇ ಆರಿಸಿಕೊಳ್ಳುತ್ತೇವೆ” ಎಂದು ತಿಳಿಸಿದ್ದಾರೆ.


