ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯ ನಂತರ ಭಾರತ ಪಾಕಿಸ್ತಾನದ ಮೇಲೆ ತೀವ್ರ ಪ್ರತಿಕಾರದ ಕ್ರಮ ಕೈಗೊಂಡಿತ್ತು. ಇದೀಗ ಭಾರತೀಯ ಸೇನೆ ‘ಆಪರೇಷನ್ ಸಿಂಧೂರ’ ಎಂಬ ಸೇನಾ ಕಾರ್ಯಾಚರಣೆಯನ್ನು ಪಾಕಿಸ್ತಾನದ ವಿರುದ್ಧ ಇಂದು ಅಧಿಕೃತವಾಗಿ ಆರಂಭಿಸಿದೆ.
ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದನಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ಮಂಗಳವಾರ ತಡರಾತ್ರಿ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ನಿರ್ದಿಷ್ಟ ದಾಳಿ ನಡೆಸಿದೆ. ಒಂಬತ್ತು ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಭಾರತೀಯ ಸೇನೆ ಹೇಳಿದೆ. ಈ ಕಾರ್ಯಾಚರಣೆಗೆ ʼಆಪರೇಷನ್ ಸಿಂಧೂರ” ಎಂದು ಹೆಸರಿಡಲಾಗಿದೆ.
ʼಆಪರೇಷನ್ ಸಿಂಧೂರ” ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನು ಬೇಗ ಮುಗಿಸುತ್ತಿರೆಂಬ ಆಶಾಭಾವನೆ ಇದೆ ಎಂದು ಹೇಳಿದ್ದಾರೆ. ಈ ಕುರಿತು ಸುದ್ದಿಸಂಸ್ಥೆ ಪಿಟಿಐ ಪೋಸ್ಟ್ ಹಂಚಿಕೊಂಡಿದೆ.
ಭಾರತ ನಡೆಸಿರುವ ದಾಳಿಗೆ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ʼಇದು ನಾಚಿಕೆಗೇಡು. ಈಗಷ್ಟೇ ಇದರ ಬಗ್ಗೆ ತಿಳಿಯಿತು. ಹಿಂದಿನ ಬೆಳವಣಿಗೆಗಳನ್ನು ನೋಡಿದರೆ ಏನೋ ನಡೆಯುತ್ತದೆ ಎಂದು ಜನರು ಅಂದುಕೊಂಡಿದ್ದರು. ಅವರು ಹಲವು ದಶಕಗಳು ಮತ್ತು ಶತಮಾನಗಳಿಂದ ಸಂಘರ್ಷ ನಡೆಸುತ್ತಿದ್ದಾರೆ. ಅದು ಬೇಗ ಕೊನೆಗೊಳ್ಳಲಿದೆ ಎಂಬ ವಿಶ್ವಾಸ ನನಗಿದೆ” ಎಂದು ಹೇಳಿದ್ದಾರೆ.
ಭಾರತ ಪಾಕಿಸ್ತಾನಗಳ ನಡುವೆ ಸೇನಾ ಸಮರದ ನಡೆಯಲಿದೆ ಎಂದು ಚರ್ಚೆಯಾಗಿತ್ತು. ಅದಕ್ಕೆ ಪೂರಕ ಎಂಬಂತೆ ಎರಡು ರಾಷ್ಟ್ರಗಳು ಸಮರಾಭ್ಯಾಸ ಸೇರಿದಂತೆ ಸೇನೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ಆರಂಭಿಸಿದ್ದವು. ಶತ್ರು ರಾಷ್ಟ್ರದಿಂದ ದಾಳಿ ನಡೆದ ಪಕ್ಷದಲ್ಲಿ ನಾಗರಿಕರಿಗೆ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಬೇಕಾದ ಸಿದ್ಧತೆಯನ್ನು ಕೈಗೊಳ್ಳುವುದಕ್ಕಾಗಿ ಬುಧವಾರ ನಾಗರಿಕ ಸ್ವರಕ್ಷಣೆ ತಾಲೀಮು ನಡೆಸಲು ಕೇಂದ್ರ ಗೃಹಸಚಿವಾಲಯ ಎಲ್ಲ ರಾಜ್ಯಗಳಿಗೆ ಸೂಚಿಸಿತ್ತು. ರಾಜ್ಯಗಳು ಸಿದ್ಧತೆಯನ್ನೂ ನಡೆಸಿದ್ದವು. ಇದರ ನಡುವೆಯೇ ಭಾರತೀಯ ಸೇನೆಯು ಮಂಗಳವಾರ ರಾತ್ರಿ ಉಗ್ರರ ಶಿಬಿರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ.
ಟ್ವೀಟ್ಗಳ ಮಹಾಪೂರ: ನಿರ್ದಿಷ್ಟ ದಾಳಿಯ ಸುದ್ದಿ ತಿಳಿಯುತ್ತಲೇ, ʼಎಕ್ಸ್ʼನಲ್ಲಿ ಟ್ವೀಟ್ಗಳ ಮಹಾಪೂರವೇ ಹರಿಯುತ್ತಿದೆ. ರಕ್ಷಣಾ ಸಚಿವ ರಾಜನಾಥ ಸಿಂಗ್ ಸೇರಿದಂತೆ ಕೇಂದ್ರದ ಹಲವು ಸಚಿವರು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಬಿಜೆಪಿಯ ಹಲವು ಮುಖಂಡರು ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಬಳಕೆದಾರರು ಕೂಡ ಈ ಬಗ್ಗೆ ಪೋಸ್ಟ್ಗಳು, ಹಾಗೂ ದಾಳಿಯ ವಿಡಿಯೊ ತುಣುಕುಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಅಮೆರಿಕ ಜೊತೆ ಮಾತುಕತೆ: ದಾಳಿಯ ಬೆನ್ನಲ್ಲೇ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರಿಗೆ ಕರೆ ಮಾಡಿ, ದಾಳಿ ಬಗ್ಗೆ ಮಾಹಿತಿ ನೀಡಿದ್ದಾರೆ.