ನವದೆಹಲಿ: ಅಮೆರಿಕ ಮೂಲದ ಡೇಟಾ ವಿಶ್ಲೇಷಣಾ ಸಂಸ್ಥೆ ಮಾರ್ನಿಂಗ್ ಕನ್ಸಲ್ಟ್ ಇತ್ತೀಚೆಗೆ ನಡೆಸಿದ ಜಾಗತಿಕ ಸಮೀಕ್ಷೆಯ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರು ಶೇ. 75 ರಷ್ಟು ಅನುಮೋದನೆ ರೇಟಿಂಗ್ನೊಂದಿಗೆ ಪ್ರಜಾಪ್ರಭುತ್ವದ ವಿಶ್ವ ನಾಯಕರಾಗಿ ಹೊರಹೊಮ್ಮಿದ್ದಾರೆ.
ಅವರು ವಿಶ್ವ ನಾಯಕರ ‘ಡೆಮಾಕ್ರಟಿಕ್ ಲೀಡರ್ ಅಪ್ರೂವಲ್ ರೇಟಿಂಗ್ಸ್’ ಪಟ್ಟಿಯಲ್ಲಿ ಶೇ. 75 ರಷ್ಟು ಅನುಮೋದನೆ ರೇಟಿಂಗ್ನೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ದಕ್ಷಿಣ ಕೊರಿಯಾದ ಅಧ್ಯಕ್ಷ ಲೀ ಜೇ ಮ್ಯುಂಗ್ ಶೇ. 59 ರಷ್ಟು ಅನುಮೋದನೆಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೇ. 45 ಕ್ಕಿಂತ ಕಡಿಮೆ ಅನುಮೋದನೆಗಳೊಂದಿಗೆ ಎಂಟನೇ ಸ್ಥಾನದಲ್ಲಿದ್ದಾರೆ.
“ಇತ್ತೀಚಿನ ಅನುಮೋದನೆ ರೇಟಿಂಗ್ಗಳು ಜುಲೈ 4-10,ರ ಅವಧಿಯಲ್ಲಿ ಸಂಗ್ರಹಿಸಲಾದ ಡೇಟಾವನ್ನು ಆಧರಿಸಿವೆ. ಸಮೀಕ್ಷೆ ಮಾಡಲಾದ ಪ್ರತಿಯೊಂದು ದೇಶದ ವಯಸ್ಕರಲ್ಲಿ ಏಳು ದಿನಗಳ ಸರಾಸರಿ ವೀಕ್ಷಣೆಗಳನ್ನು ರೇಟಿಂಗ್ಗಳು ಪ್ರತಿಬಿಂಬಿಸುತ್ತವೆ” ಎಂದು ಮಾರ್ನಿಂಗ್ ಕನ್ಸಲ್ಟ್ ಹೇಳಿದೆ.
ಮಾರ್ನಿಂಗ್ ಕನ್ಸಲ್ಟ್ ಸಮೀಕ್ಷೆಯ ಫಲಿತಾಂಶಗಳು ದೇಶದ ಒಳಗೆ ಅಥವಾ ಹೊರಗೆ ಜನಸಾಮಾನ್ಯರಲ್ಲಿ ಪ್ರಧಾನಿ ಮೋದಿಯವರ ಜನಪ್ರಿಯತೆಯನ್ನು ಮತ್ತೊಮ್ಮೆ ದೃಢಪಡಿಸಿವೆ. ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಶೇ. 75 ರಷ್ಟು ಜನರು ಪ್ರಧಾನಿ ಮೋದಿಯವರನ್ನು ವಿಶ್ವ ನಾಯಕ ಎಂದು ಅನುಮೋದಿಸಿದ್ದಾರೆ. ಅವರಲ್ಲಿ ಶೇ. ಏಳು ಜನರು ಈ ಬಗ್ಗೆ ಏನೂ ಅಭಿಪ್ರಾಯ ನೀಡಿಲ್ಲ. ಆದರೆ ಶೇ. 18 ರಷ್ಟು ಜನರು ಅವರ ನಾಯಕತ್ವಕ್ಕೆ ಅನುಮೋದನೆ ನೀಡಿಲ್ಲ.
ಪಟ್ಟಿಯಲ್ಲಿ ಅತ್ಯಂತ ಜನಪ್ರಿಯ ವಿಶ್ವ ನಾಯಕರಲ್ಲಿ ದಕ್ಷಿಣ ಕೊರಿಯಾದ ಅಧ್ಯಕ್ಷ ಲೀ ಜೇ ಮ್ಯುಂಗ್ ಎರಡನೇ ಸ್ಥಾನದಲ್ಲಿದ್ದಾರೆ. ಭಾಗವಹಿಸಿದವರಲ್ಲಿ ಶೇ. 59 ರಷ್ಟು ಜನರು ಅವರನ್ನು ಅನುಮೋದಿಸಿದ್ದಾರೆ. ಭಾಗವಹಿಸಿದವರಲ್ಲಿ ಕನಿಷ್ಠ 13 ಪ್ರತಿಶತದಷ್ಟು ಜನರು ಮ್ಯುಂಗ್ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ, ಆದರೆ ಅವರಲ್ಲಿ 29 ಪ್ರತಿಶತದಷ್ಟು ಜನರು ಅವರ ಬಗ್ಗೆ ತಮ್ಮ ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಕೊರಿಯಾದಲ್ಲಿ ಅತ್ಯುನ್ನತ ಹುದ್ದೆಯನ್ನು ವಹಿಸಿಕೊಂಡು ಕೇವಲ ಒಂದು ತಿಂಗಳು ಕಳೆದಿದೆ ಎಂದು ಪರಿಗಣಿಸಿದರೆ, ಈ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದಿರುವುದು ಮ್ಯುಂಗ್ ಮಟ್ಟಿಗೆ ಒಂದು ಸಾಧನೆಯಾಗಿದೆ.
ಬಲಪಂಥೀಯ ಜನಪರವಾದಿ ಎಂದು ಪರಿಗಣಿಸಲಾದ ಅರ್ಜೆಂಟೀನಾದ ಅಧ್ಯಕ್ಷ ಜೇವಿಯರ್ ಮಿಲೀ, ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಅವರ ಪರವಾಗಿ 57%ರಷ್ಟು ಜನರು ಅನುಮೋದನೆ ನೀಡಿದರೆ, 6%ರಷ್ಟು ಜನರು ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸಲಿಲ್ಲ. ಮತ್ತು ಭಾಗವಹಿಸಿದವರಲ್ಲಿ 37%ರಷ್ಟು ಜನರು ಅವರ ಬಗ್ಗೆ ಅಸಮ್ಮತಿ ವ್ಯಕ್ತಪಡಿಸಿದ್ದಾರೆ.
ಹೊಸದಾಗಿ ಕೆನಡಾದ ಪ್ರಧಾನಿಯಾಗಿ ಆಯ್ಕೆಯಾದ ಮಾರ್ಕ್ ಕಾರ್ನಿ ನಾಲ್ಕನೇ ಸ್ಥಾನದಲ್ಲಿದ್ದು, ಅವರು ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ 56%ರಷ್ಟು ಜನರ ಅನುಮೋದನೆ ಪಡೆದಿದ್ದಾರೆ. 31%ರಷ್ಟು ಜನರು ಅವರ ಅಸಮ್ಮತಿ ವ್ಯಕ್ತಪಡಿಸಿದರೆ 13%ರಷ್ಟು ಜನರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಐದನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಆಂಥೋನಿ ಅಲ್ಬನೀಸ್ 54%ರಷ್ಟುಜನರ ಅನುಮೋದನೆ ಪಡೆದಿದ್ದಾರೆ. 35%ರಷ್ಟು ಮತದಾರರು ಅವರಿಗೆ ಅನುಮೋದನೆ ನೀಡಿಲ್ಲ. 11%ರಷ್ಟು ಜನರು ಯಾವುದೇ ಅಭಿಪ್ರಾಯವನ್ನು ಹಂಚಿಕೊಳ್ಳಲಿಲ್ಲ.
ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಂಟನೇ ಸ್ಥಾನದಲ್ಲಿದ್ದಾರೆ. ಭಾಗವಹಿಸಿದವರಲ್ಲಿ 44%ರಷ್ಟು ಜನರು ಮಾತ್ರ ಅವರನ್ನು ಪ್ರಜಾಪ್ರಭುತ್ವದ ವಿಶ್ವ ನಾಯಕ ಎಂದು ಅನುಮೋದಿಸಿದ್ದಾರೆ. 50%ರಷ್ಟು ಜನರು ಅವರ ಬಗ್ಗೆ ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ಕಳೆದ ನವೆಂಬರ್ನಲ್ಲಿ ಟ್ರಂಪ್ ಅಮೆರಿಕ ಚುನಾವಣೆಯಲ್ಲಿ ಭಾರಿ ಬಹುಮತದಿಂದ ಗೆದ್ದಿದ್ದಾರೆ ಎಂದು ಪರಿಗಣಿಸಿದಾಗ ಇದನ್ನು ಆಶ್ಚರ್ಯಕರವೆಂದು ಪರಿಗಣಿಸಲಾಗುತ್ತಿದೆ. ಆದಾಗ್ಯೂ, ಅವರ ವ್ಯಾಪಾರ ಸುಂಕಗಳು ಮತ್ತು ಆಂತರಿಕವಾಗಿ ತೆಗೆದುಕೊಂಡ ಹಲವಾರು ಪ್ರಮುಖ ನಿರ್ಧಾರಗಳು ಅವರ ಜನಪ್ರಿಯತೆಗೆ ಹಾನಿಯನ್ನುಂಟುಮಾಡಿವೆ.
ಪೋಲೆಂಡ್ನ ಡೊನಾಲ್ಡ್ ಟಸ್ಕ್ ಒಂಬತ್ತನೇ ಸ್ಥಾನದಲ್ಲಿದ್ದರೆ, ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ 10 ನೇ ಸ್ಥಾನದಲ್ಲಿದ್ದಾರೆ.
ಸಮೀಕ್ಷೆಯ ಟಾಪ್ 10 ಜನಪ್ರಿಯ ನಾಯಕರು
ನರೇಂದ್ರ ಮೋದಿ (ಭಾರತ): 75% ಅನುಮೋದನೆ, 7% ಅಭಿಪ್ರಾಯವಿಲ್ಲ, 18% ಅಸಮ್ಮತಿ
ಲೀ ಜೇ-ಮ್ಯುಂಗ್ (ದಕ್ಷಿಣ ಕೊರಿಯಾ): 59% ಅನುಮೋದನೆ, 13% ಅಭಿಪ್ರಾಯವಿಲ್ಲ, 29% ಅಸಮ್ಮತಿ
ಜೇವಿಯರ್ ಮಿಲೀ (ಅರ್ಜೆಂಟೀನಾ): 57% ಅನುಮೋದನೆ, 6% ಅಭಿಪ್ರಾಯವಿಲ್ಲ, 37% ಅಸಮ್ಮತಿ
ಮಾರ್ಕ್ ಕಾರ್ನಿ (ಕೆನಡಾ): 56% ಅನುಮೋದನೆ, 13% ಅಭಿಪ್ರಾಯವಿಲ್ಲ, 31% ಅಸಮ್ಮತಿ
ಆಂಥೋನಿ ಅಲ್ಬನೀಸ್ (ಆಸ್ಟ್ರೇಲಿಯಾ): 54% ಅನುಮೋದನೆ, 11% ಅಭಿಪ್ರಾಯವಿಲ್ಲ, 35% ಅಸಮ್ಮತಿ
ಕ್ಲೌಡಿಯಾ ಶೀನ್ಬಾಮ್ (ಮೆಕ್ಸಿಕೊ): 53% ಅನುಮೋದನೆ, 7% ಅಭಿಪ್ರಾಯವಿಲ್ಲ, 40% ಅಸಮ್ಮತಿ
ಕರಿನ್ ಕೆಲ್ಲರ್-ಸುಟ್ಟರ್ (ಸ್ವಿಟ್ಜರ್ಲೆಂಡ್): 48% ಅನುಮೋದನೆ, 24% ಅಭಿಪ್ರಾಯವಿಲ್ಲ, 28% ಅಸಮ್ಮತಿ
ಡೊನಾಲ್ಡ್ ಟ್ರಂಪ್ (ಯುನೈಟೆಡ್ ಸ್ಟೇಟ್ಸ್): 44% ಅನುಮೋದನೆ, 6% ಅಭಿಪ್ರಾಯವಿಲ್ಲ, 50% ಅಸಮ್ಮತಿ
ಡೊನಾಲ್ಡ್ ಟಸ್ಕ್ (ಪೋಲೆಂಡ್): 41% ಅನುಮೋದನೆ, 11% ಅಭಿಪ್ರಾಯವಿಲ್ಲ, 49% ಅಸಮ್ಮತಿ
ಜಾರ್ಜಿಯಾ ಮೆಲೋನಿ (ಇಟಲಿ): 40% ಅನುಮೋದನೆ, 6% ಅಭಿಪ್ರಾಯವಿಲ್ಲ, 54% ಅಸಮ್ಮತಿ
ಭಾರತದ ಪ್ರಧಾನಿಯಾಗಿ ಎರಡನೇ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಪ್ರಧಾನಿ
ಭಾರತದ ಪ್ರಧಾನಿಯಾಗಿ 4,078 ದಿನಗಳನ್ನು ಪೂರೈಸಿದ ನಂತರ ಪ್ರಧಾನಿ ಮೋದಿ ಅವರು ಪಂಡಿತ್ ಜವಾಹರಲಾಲ ನೆಹರು ನಂತರ ಎರಡನೇ ಅತಿ ಹೆಚ್ಚು ಕಾಲ ನಿರಂತರವಾಗಿ ಅಧಿಕಾರದಲ್ಲಿದ್ದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜನವರಿ 1966 ಮತ್ತು ಮಾರ್ಚ್ 1977 ರ ನಡುವೆ ಸತತ 4,077 ದಿನಗಳ ಕಾಲ ಅಧಿಕಾರದಲ್ಲಿದ್ದ ಇಂದಿರಾ ಗಾಂಧಿ ಅವರನ್ನು ಅವರು ಹಿಂದಿಕ್ಕಿದರು.