ವಿಜಯಪುರ: ಗಾಣಿಗ ಗುರುಪೀಠ ವನಶ್ರೀ ಸಂಸ್ಥಾನಮಠದ ಲಿಂ.ಜಯದೇವ ಜಗದ್ಗುರುಗಳ 85ನೇ ಜಯಂತ್ಯೋತ್ಸವ ಹಾಗೂ 15ನೇ ವಾರ್ಷಿಕ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭವು ಅಕ್ಟೋಬರ್ 2 ಬುಧವಾರದಂದು ಬೆಳಗ್ಗೆ 11 ಗಂಟೆಗೆ ನಗರದ ಜಿಲ್ಲಾ ಪಂಚಾಯಿತಿ ಬಳಿಯ ವನಶ್ರೀ ಸಂಸ್ಥಾನಮಠದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಗಾಣಿಗ ಸಮಾಜ ಸಂಘದ ಜಿಲ್ಲಾ ಅಧ್ಯಕ್ಷ ಬಿ.ಬಿ.ಪಾಸೋಡಿ ಹಾಗೂ ಪ್ರಧಾನ ಕಾರ್ಯದರ್ಶಿ ಡಾ.ಬಾಬು ಸಜ್ಜನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ ಜಿಲ್ಲಾ ಗಾಣಿಗ ಸಮಾಜ ಸಂಘ ಹಾಗೂ ಶ್ರೀಜಗದ್ಗುರು ಜಯದೇವ ಶಿವಯೋಗೇಶ್ವರ ಟ್ರಸ್ಟ್ ಸಹಯೋಗದೊಂದಿಗೆ ಗಾಣಿಗ ಗುರುಪೀಠದ ಡಾ. ಜಯಬಸವ ಕುಮಾರ ಸ್ವಾಮಿಗಳು ದಿವ್ಯ ಸಾನಿಧ್ಯ ಹಾಗೂ ವನಶ್ರೀ ಸಂಸ್ಥಾನಮಠದ ಅಧ್ಯಕ್ಷ ಸಿದ್ದಮುತ್ಯಾ ಅವರು, ಹಿರೇರೊಗಿ ಮುಕ್ತಿಮಂದಿರದ ಸುಗಲಾದೇವಿ ಮಾತೋಶ್ರೀ ಹಾಗೂ ಆಳೂರು-ಚಳಕಾಪುರ ಶಿವಯೋಗಾಶ್ರಮ ಸಿದ್ದಾರೂಢಮಠದ ಶಂಕರಾನಂದ
ಸ್ವಾಮಿಗಳ ಸಾನಿಧ್ಯದಲ್ಲಿ ಜರುಗಲಿರುವ ಅಂದಿನ ಕಾರ್ಯಕ್ರಮದಲ್ಲಿ ಬಾಗಲಕೋಟೆ ಲೋಕಸಭಾ ಸದಸ್ಯರಾದ ಪಿ.ಸಿ. ಗದ್ದಿಗೌಡರ ಉದ್ಘಾಟಕರಾಗಿ ಆಗಮಿಸಲಿದ್ದಾರೆ. ಮಾಜಿ ಉಪಮುಖ್ಯಮಂತ್ರಿಗಳು, ಶಾಸಕ ಲಕ್ಷ್ಮಣ ಸವದಿ, ಅಖಿಲ ಭಾರತ ಗಾಣಿಗ ಸಮಾಜ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಎಸ್. ಲೋಣಿ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಹಿರಿಯ ಮಾಜಿ ಶಾಸಕರಾದ ಬಿ.ಜಿ.ಪಾಟೀಲ (ಹಲಸಂಗಿ), ಜಿ.ಎಸ್.ನ್ಯಾಮಗೌಡ, ರಮೇಶ ಭೂಸನೂರ ಆನಂದ ನ್ಯಾಮಗೌಡ ಹಾಗೂ ಸಮಾಜದ ಅನೇಕ ಗಣ್ಯಮಾನ್ಯರು, ಮುಖಂಡರು ಪಾಲ್ಗೊಳ್ಳಲಿದ್ದಾರೆ.
2023-24 ನೇ ಸಾಲಿನ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಮಾಧ್ಯಮ ಸಾಧಕ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಬಸವರಾಜ ಎಸ್. ಉಳ್ಳಾಗಡ್ಡಿ ಮತ್ತು ರಾಜ್ಯಮಟ್ಟದ ವಾಣಿಜ್ಯ ರತ್ನ ಪ್ರಶಸ್ತಿ ಪುರಸ್ಕೃತ ಉದ್ಯಮಿ ಶರಣು ಎ. ಸಜ್ಜನ ಅವರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಣೆಯಲ್ಲಿ
ತಿಳಿಸಲಾಗಿದೆ.