ದುಬಾೖ: ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ 41 ವರ್ಷಗಳ ಇತಿಹಾಸದಲ್ಲಿ ಭಾರತ-ಪಾಕಿಸ್ಥಾನ ತಂಡಗಳು ಮೊದಲ ಸಲ ಫೈನಲ್ನಲ್ಲಿ ಎದುರಾಗುವ ಕಾಲ ಸನ್ನಿಹಿತವಾಗಿದೆ. ರವಿವಾರ ರಾತ್ರಿ “ದುಬಾೖ ಇಂಟರ್ನ್ಯಾಶನಲ್ ಸ್ಟೇಡಿಯಂ’ನಲ್ಲಿ ಇತ್ತಂಡಗಳು ಮುಖಾಮುಖೀಯಾಗಲಿವೆ. ಹಿಂದಿನೆರಡು ರವಿವಾರ ನಡೆದ ಲೀಗ್ ಹಾಗೂ ಸೂಪರ್-4 ಪಂದ್ಯಗಳೆರಡರಲ್ಲೂ ಪಾಕಿಸ್ಥಾನವನ್ನು ಬಗ್ಗುಬಡಿದಿದ್ದ ಹಾಲಿ ಚಾಂಪಿಯನ್ ಭಾರತ ಮತ್ತೂಂದು “ಸೂಪರ್ ಸಂಡೇ’ಯನ್ನಾಚರಿಸುವ ಯೋಜನೆಯಲ್ಲಿದೆ.
ಹಸ್ತಲಾಘವ ಇಲ್ಲದ, ಆದರೂ ಮೈದಾನದ ಕಿರಿಕ್ಗಳಿಂದ ಮುಕ್ತವಾಗದ ಕಾರಣಕ್ಕೆ ಭಾರತ-ಪಾಕಿಸ್ಥಾನ ನಡುವಿನ ಹಿಂದಿನೆರಡು ಪಂದ್ಯಗಳು ದೊಡ್ಡ ಮಟ್ಟದಲ್ಲೇ ಸುದ್ದಿ ಮಾಡಿದ್ದವು. ಈ ನಡುವೆ ಐಸಿಸಿ ಕೆಲವು ಆಟಗಾರರಿಗೆ ದಂಡವನ್ನೂ ವಿಧಿಸಿ ಎಚ್ಚರಿಸಿತು. ಆದರೂ ಫೈನಲ್ ಪಂದ್ಯ ವಿವಾದರಹಿತವಾಗಿ ಮುಗಿಯಲಿದೆ ಎಂಬ ನಂಬಿಕೆಯಂತೂ ಇಲ್ಲ.
ಭಾರತದ ವಿರುದ್ಧ ಸದಾ ಒತ್ತಡದಲ್ಲೇ ಆಡುವ, ಈ ಟೂರ್ನಿಯಲ್ಲೇ ಈವರೆಗೆ ಎರಡು ಸಲ ಹೊಡೆಸಿಕೊಂಡ ಪಾಕಿಸ್ಥಾನಕ್ಕೆ ಇದು ಪ್ರತಿಷ್ಠೆಯ ಫೈನಲ್. ಮತ್ತೂಂದು ಸೋಲನುಭವಿಸಿ ತವರಿಗೆ ತೆರಳಿದರೆ ಅಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಯನ್ನು ಎದುರಿಸಬೇಕಾಗುವುದು ನಿಶ್ಚಿತ. ಒಂದೇ ಸರಣಿಯಲ್ಲಿ ಭಾರತದಿಂದ ಮೂರು ಮುಖಭಂಗವನ್ನು ಕಲ್ಪಿಸಿಕೊಳ್ಳಲು ಪಾಕಿಗಳಿಂದ ಖಂಡಿತ ಸಾಧ್ಯವಿಲ್ಲ.
ಈ ಕೂಟದಲ್ಲಿ ಭಾರತದೆದುರು ಪಾಕಿಸ್ಥಾನಿ ಗಳ ಯಾವ ಆಟವೂ ನಡೆಯಲಿಲ್ಲ. ಮೈದಾನದಲ್ಲೂ ಅಷ್ಟೇ, ಮೈದಾನದಾಚೆಯೂ ಅಷ್ಟೇ. ಬಹುಶಃ ಫೈನಲ್ನಲ್ಲೂ ಇದಕ್ಕಿಂತ ಭಿನ್ನ ಫಲಿತಾಂಶ ದಾಖಲಾಗಲಿಕ್ಕಿಲ್ಲ ಎಂಬ ದೃಢ ನಂಬಿಕೆ ಭಾರತದ ಕ್ರಿಕೆಟ್ ಅಭಿಮಾನಿಗಳದ್ದು.
ಅಭಿಷೇಕ್ ಬ್ಯಾಟಿಂಗ್ ನಿರ್ಣಾಯಕ:
ಭಾರತದ ಬ್ಯಾಟಿಂಗ್ ಸರದಿ ಬಲಿಷ್ಠ ಎಂಬುದರಲ್ಲಿ ಎರಡು ಮಾತಿಲ್ಲ. ಅಭಿಷೇಕ್ ಶರ್ಮ ಪ್ರತಿಯೊಂದು ಪಂದ್ಯದಲ್ಲೂ ಸ್ಫೋಟಕ ಪ್ರದರ್ಶನ ನೀಡುತ್ತಲೇ ಇದ್ದಾರೆ. ಈವರೆಗೆ 309 ರನ್ ಪೇರಿಸಿ ಅಗ್ರಸ್ಥಾನ ಅಲಂಕರಿಸಿದ್ದಾರೆ. ಫೈನಲ್ನಲ್ಲೂ ಅವರ ಬ್ಯಾಟಿಂಗ್ ಆರ್ಭಟ ಮುಂದುವರಿಯಬೇಕು. ಆದರೆ ಅಭಿಷೇಕ್ ಒಬ್ಬರನ್ನೇ ನಂಬಿ ಕೂರುವುದು ತಪ್ಪು. ಗಿಲ್ ಕ್ರೀಸ್ ಆಕ್ರಮಿಸಿಕೊಳ್ಳುವುದು ಮುಖ್ಯ. ಸೂಪರ್ ಫೋರ್ನಲ್ಲಿ ಪಾಕ್ ವಿರುದ್ಧ ಇವರು ಶತಕದ ಜತೆಯಾಟ ನಡೆಸಿದ್ದನ್ನು ಮರೆಯುವಂತಿಲ್ಲ.
ಬ್ಯಾಟಿಂಗ್ ವಿಭಾಗದ ದೊಡ್ಡ ಸಮಸ್ಯೆ ಯೆಂದರೆ ಸೂರ್ಯಕುಮಾರ್ ಯಾದವ್ ಫಾರ್ಮ್ನದ್ದು. ಅವರು ಈವರೆಗೆ ಕೂಟದಲ್ಲಿ ಕಪ್ತಾನನ ಆಟವನ್ನು ಆಡಿಲ್ಲ. 5 ಪಂದ್ಯಗಳಿಂದ ಗಳಿಸಿದ್ದು 71 ರನ್ ಮಾತ್ರ. ಲೀಗ್ನಲ್ಲಿ ಪಾಕ್ ವಿರುದ್ಧ ಅಜೇಯ 47 ರನ್ ಮಾಡಿದ್ದೇ ಉತ್ತಮ ಸಾಧನೆ. ಅಭಿಷೇಕ್ ಹೊರತುಪಡಿಸಿದರೆ ಕಾಣಿಸುವ ಹೆಸರು ತಿಲಕ್ ವರ್ಮ ಅವರದು (144 ರನ್).
ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಶ್ರೀಲಂಕಾ ಪಂದ್ಯದ ವೇಳೆ ಸ್ನಾಯು ಸೆಳೆತಕ್ಕೆ ಸಿಲುಕಿದ್ದು, ಆಡುವುದು ಅನುಮಾನ ಎಂಬ ಸುದ್ದಿ ಇದೆ. ರವಿವಾರ ಬೆಳಗ್ಗೆ ಪಾಂಡ್ಯ ಫಿಟ್ನೆಸ್ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲಾಗುವುದು. ಅಕಸ್ಮಾತ್ ಪಾಂಡ್ಯ ಲಭ್ಯರಾಗದೇ ಹೋದರೆ ಇವರ ಸ್ಥಾನಕ್ಕೆ ಸೂಕ್ತ ಆಲ್ರೌಂಡರ್ ಕೊರತೆ ಕಾಡಲಿದೆ. ಅರ್ಷದೀಪ್ ಅವರನ್ನು ಉಳಿಸಿಕೊಳ್ಳುವುದೇ ಪರ್ಯಾಯ ಮಾರ್ಗ.
ಕುಲದೀಪ್ “ಕಂಟಕ’:
ಭಾರತದ ಬ್ಯಾಟಿಂಗ್ ಸಮಸ್ಯೆಗಳೇನೇ ಇದ್ದರೂ ಸವಾಲಿನ ಮೊತ್ತಕ್ಕೇನೂ ಕೊರತೆ ಕಾಡದು ಎಂಬ ನಂಬಿಕೆ ಇದೆ. ಆದರೆ ಪಾಕಿಸ್ಥಾನಕ್ಕೆ ಇದೇ ಮಾತು ಅನ್ವಯವಾಗದು. ಸಾಹಿಬ್ಜಾದ ಫರ್ಹಾನ್ ಹೊರತುಪಡಿಸಿದರೆ ನಿಂತು ಆಡಿದವರು ಯಾರೂ ಇಲ್ಲ. ಸೈಮ್ ಅಯೂಬ್ ಸೊನ್ನೆ ಸುತ್ತುತ್ತಲೇ ಇದ್ದಾರೆ. ಅನುಭವಿ ಫಖರ್ ಜಮಾನ್, ನಾಯಕ ಸಲ್ಮಾನ್ ಅಲಿ ಆಘಾ, ಹುಸೇನ್ ತಲತ್ ಕೂಡ ಕ್ಲಿಕ್ ಆಗಿಲ್ಲ. ಭಾರತದ ಸ್ಪಿನ್ ತ್ರಿವಳಿಗಳನ್ನು ಎದುರಿಸಿ ನಿಲ್ಲುವುದರಲ್ಲಿ ಹಾಗೂ ವೇಗಿಗಳಾದ ಅಫ್ರಿದಿ ರೌಫ್ ಅವರ ಬೌಲಿಂಗ್ ದಾಳಿಯಲ್ಲಿ ಪಾಕಿಸ್ಥಾನದ ಯಶಸ್ಸು ಅಡಗಿದೆ ಎನ್ನಬಹುದು.
ಈ ಕೂಟದಲ್ಲಿ 13 ವಿಕೆಟ್ ಉಡಾಯಿಸಿರುವ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಭಾರತದ ಪಾಲಿನ “ಟ್ರಂಪ್ಕಾರ್ಡ್’ ಆಗಬಲ್ಲರು.
ಫೀಲ್ಡಿಂಗ್ ಸುಧಾರಣೆ ಅಗತ್ಯ:
ಸದ್ಯ ಭಾರತವನ್ನು ಕಾಡುತ್ತಿರುವ ದೊಡ್ಡ ಸಮಸ್ಯೆಯೆಂದರೆ ಕಳಪೆ ಫೀಲ್ಡಿಂಗ್ನದ್ದು. ಕಳೆದೆರಡು ಪಂದ್ಯಗಳಲ್ಲಿ ನಮ್ಮವರು ಬಿಟ್ಟ ಕ್ಯಾಚ್ಗಳಿಗೆ ಲೆಕ್ಕವಿಲ್ಲ. ಫೈನಲ್ನಲ್ಲಿ ಫೀಲ್ಡಿಂಗ್ ವೈಫಲ್ಯಕ್ಕೊಂದು ಪರಿಹಾರ ಲಭಿಸಲೇಬೇಕು.
ಮೊಹ್ಸಿನ್ ನಖ್ವಿ ಅವರಿಂದ ಏಷ್ಯಾ ಕಪ್ ಸ್ವೀಕರಿಸುವ ಸಂದರ್ಭ ಎದುರಾದರೆ?
ಈ ಪಂದ್ಯಾವಳಿಯಲ್ಲಿ ಪಾಕಿಸ್ಥಾನಿ ಕ್ರಿಕೆಟಿಗರಿಗೆ ಈವರೆಗೆ ಹಸ್ತಲಾಘವ ಮಾಡುವುದಿರಲಿ, ಪಾಕ್ ಕ್ರಿಕೆಟಿಗರತ್ತ ತಿರುಗಿಯೂ ನೋಡದ ಟೀಮ್ ಇಂಡಿಯಾ ಫೈನಲ್ನಲ್ಲೂ ಈ ನಿರ್ಧಾರಕ್ಕೆ ಅಂಟಿಕೊಳ್ಳುವುದರಲ್ಲಿ ಅನುಮಾನವಿಲ್ಲ. ಆದರೆ ಪ್ರಶ್ನೆ ಇದಲ್ಲ. ಒಂದು ವೇಳೆ ಭಾರತ ತಂಡ ಚಾಂಪಿಯನ್ ಎನಿಸಿಕೊಂಡು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ, ಪಾಕಿಸ್ಥಾನದವರಾದ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸುವ ಸಂದರ್ಭ ಎದುರಾದರೆ ಏನು ಮಾಡಲಿದೆ ಎಂಬುದು ಇಲ್ಲಿನ ಪ್ರಶ್ನೆ.
ಪ್ರಶಸ್ತಿ ಸಮಾರಂಭದಲ್ಲಿ ನಖ್ವಿ ಅವರಿಂದ ಭಾರತ ತಂಡ ಟ್ರೋಫಿ ಪಡೆದುಕೊಂಡೀತೇ, ಅನಂತರ ಅವರಿಗೆ ಹಸ್ತಲಾಘವ ಮಾಡೀತೇ ಎಂಬೆಲ್ಲ ಪ್ರಶ್ನೆಗಳು ಕಾಡಲಾರಂಭಿಸಿವೆ. ನಖೀÌ ಕೇವಲ ಎಸಿಸಿ ಅಧ್ಯಕ್ಷರಷ್ಟೇ ಅಲ್ಲ, ಪಾಕಿಸ್ಥಾನದ ಸಚಿವರೂ ಆಗಿದ್ದಾರೆ. ಅವರು ಪ್ರಶಸ್ತಿ ಸಮಾರಂಭದಲ್ಲಿ ಉಪಸ್ಥಿತರಿರಲೇಬೇಕು. ಅಷ್ಟೇ ಅಲ್ಲ, ಟ್ರೋಫಿಯನ್ನು ಹಸ್ತಾಂತರಿಸುವ ಹಕ್ಕು ಕೂಡ ಅವರಿಗಿದೆ. ಶಿಷ್ಟಾಚಾರದಂತೆ ವಿಜೇತ ತಂಡದ ಆಟಗಾರರಿಗೆ ಹಸ್ತಲಾಘವ ಕೂಡ ಮಾಡಬೇಕು. ಆಗ ಭಾರತದ ಕ್ರಿಕೆಟಿಗರು ಏನು ಮಾಡಿಯಾರು?
ಇದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಭಾರತೀಯ ಕ್ರಿಕೆಟಿಗರಿಗೆ ಈವರೆಗೆ ಯಾವುದೇ ಮಾಹಿತಿ ನೀಡಿದ ಬಗ್ಗೆ ವರದಿಯಾಗಿಲ್ಲ.
ಸಂಭಾವ್ಯ ತಂಡಗಳು:
ಭಾರತ: ಅಭಿಷೇಕ್ ಶರ್ಮ, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮ, ಸಂಜು ಸ್ಯಾಮ್ಸನ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ/ಅರ್ಷದೀಪ್ ಸಿಂಗ್/ರಿಂಕು ಸಿಂಗ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ.
ಪಾಕಿಸ್ಥಾನ: ಸಾಹಿಬ್ಜಾದ ಫರ್ಹಾನ್, ಫಖರ್ ಜಮಾನ್, ಸೈಮ್ ಅಯೂಬ್, ಸಲ್ಮಾನ್ ಆಘಾ (ನಾಯಕ), ಹುಸೇನ್ ತಲತ್, ಮೊಹಮ್ಮದ್ ಹ್ಯಾರಿಸ್, ಶಾಹೀನ್ ಅಫ್ರಿದಿ, ಮೊಹಮ್ಮದ್ ನವಾಜ್, ಫಾಹೀಮ್ ಅಶ್ರಫ್, ಹ್ಯಾರಿಸ್ ರೌಫ್, ಅಬ್ರಾರ್ ಅಹ್ಮದ್.