ಪಪಪ
ಸಮಕಾಲೀನ ಜಗತ್ತು ಸ್ಪರ್ಧಾತ್ಮಕತೆಯಿಂದ ಕೂಡಿದೆ. ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಜ್ಞಾನ ನೀಡುವುದರ ಮೂಲಕ ಅವರಲ್ಲಿ ಸ್ಪರ್ಧಾತ್ಮಕ ಮನೋಭಾವಗಳನ್ನು ಬೆಳೆಸುವ ಬಹುದೊಡ್ಡ ಜವಾಬ್ದಾರಿ ಹೊಂದಿದೆ. ವಿದ್ಯಾರ್ಥಿಗೆ ತನ್ನ ಓದಿನ ಜೊತೆಗೆ ತನ್ನ ಭವಿಷ್ಯ ರೂಪಿಸಿಕೊಳ್ಳುವ ಸಲಕರಣೆಗಳನ್ನು ಶಿಕ್ಷಣ ಸಂಸ್ಥೆಗಳು ಒದಗಿಸಬೇಕು ಎಂದು ನಾಡಿನ ಖ್ಯಾತ ಹಾಸ್ಯ ಭಾಷಣಕಾರರಾದ ಪ್ರೊ. ಎಂ. ಕೃಷ್ಣೇಗೌಡ ಆಶಯ ವ್ಯಕ್ತಪಡಿಸಿದರು.
ನಗರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪಿಜಿ ಜಿಮ್ ಖಾನಾ ವಿದ್ಯಾರ್ಥಿ ಒಕ್ಕೂಟ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಪ್ರೊ. ಎಂ. ಕೃಷ್ಣೇಗೌಡ ಅವರು ಉದ್ಘಾಟನೆ ಮಾಡಿ ಮಾತನಾಡಿದರು. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಗಳಿಸುವ ಅಂಕ ಮುಖ್ಯವಲ್ಲ. ಅವರಲ್ಲಿ ಆತ್ಮವಿಶ್ವಾಸ ಮುಖ್ಯ. ಇಂದಿನ ಯುಗ ಜ್ಞಾನದ ಯುಗ. ಜ್ಞಾನಕ್ಕೆ ಇಡೀ ವಿಶ್ವವೇ ತಲೆಬಾಗುತ್ತದೆ. ನಮ್ಮ ದೇಶದಲ್ಲಿನ ಕುಗ್ರಾಮದ ಪ್ರತಿಭೆಗಳು ಇಂದು ತಮ್ಮ ಜ್ಞಾನದ ಮೂಲಕ ಇಡೀ ಜಗತ್ತನ್ನೇ ಆಳುತ್ತಿದ್ದಾರೆ. ಇಂದಿನ ತಂತ್ರಜ್ಞಾನವನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು. ಶಿಕ್ಷಕರು ವಿದ್ಯಾರ್ಥಿಗಳಿಗೆ ಸರಿಯಾಗಿ ಮಾರ್ಗದರ್ಶನ ಮಾಡುವುದರ ಮೂಲಕ ವಿದ್ಯಾರ್ಥಿ ಮತ್ತು ದೇಶದ ಭವಿಷ್ಯ ರೂಪಿಸಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕುಲಪತಿಗಳಾದ ಪ್ರೊ. ಎಂ. ರಾಮಚಂದ್ರ ಗೌಡ ಅವರು ಮಾತನಾಡುತ್ತಾ, ನಮ್ಮ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ರಾಜ್ಯದಲ್ಲಿಯೇ ಅತ್ಯಂತ ದೊಡ್ಡ ವಿಶ್ವವಿದ್ಯಾಲಯ. ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಬೌದ್ಧಿಕ ಮತ್ತು ಭೌತಿಕ ಸಾಮರ್ಥ್ಯ ವೃದ್ಧಿಸುತ್ತದೆ. ಕ್ರಿಡಾ ಮತ್ತು ಸಾಂಸ್ಕೃತಿಕ ವಿಭಾಗದಿಂದ ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ನಮ್ಮ ವಿದ್ಯಾರ್ಥಿಗಳು ಭಾಗವಹಿಸುವುದರ ಮೂಲಕ ವಿಶ್ವ ವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ. ಈ ಎರಡೂ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸರಕಾರ ಮತ್ತು ಸರ್ಕಾರೇತರ ಸಂಸ್ಥೆಗಳಲ್ಲಿ ಅಪಾರವಾದ ಉದ್ಯೋಗದ ಅವಕಾಶಗಳಿವೆ ಎಂದರು.
ವೇದಿಕೆಯಲ್ಲಿ ಕುಲಸಚಿವರಾದ ರಾಜಶ್ರೀ ಜೈನಾಪುರ, ಮೌಲ್ಯ ಮಾಪನ ಕುಲಸಚಿವರಾದ ಪ್ರೊ. ಶಿವಾನಂದ ಗೋರನಾಳೆ, ವಿತ್ತಾಧಿಕಾರಿ ಪ್ರೊ. ಎಸ್. ಬಿ.ಆಕಾಶ್, ಜಿಮ್ ಖಾನ ಅಧ್ಯಕ್ಷರಾದ ಪ್ರೊ. ವಿಜಯ್ ನಾಗಣ್ಣವರ್, ವಿದ್ಯಾರ್ಥಿ ಕಲ್ಯಾಣ ಅಧಿಕಾರಿಯಾದ ಪ್ರೊ. ಬಸವರಾಜ ಪದ್ಮಶಾಲಿ ಮತ್ತು ವಿದ್ಯಾರ್ಥಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಜಿಮ್ ಖಾನ್ ಉಪಾಧ್ಯಕ್ಷರುಗಳಾದ ಡಾ. ಗಜಾನನ ನಾಯ್ಕ ಸ್ವಾಗತಿಸಿದರು, ಡಾ. ಪಿ. ನಾಗರಾಜ್ ವಂದಿಸಿದರು. ವಿದ್ಯಾರ್ಥಿನಿ ಸೋನಾಲಿ ಕಾರವೇಕರ್ ನಿರೂಪಿಸಿದರು. ಸಮಾರಂಭದಲ್ಲಿ ವಿಶ್ವವಿದ್ಯಾಲಯ ಮತ್ತು ಮಹಾವಿದ್ಯಾಲಯದ ಬೋಧಕ – ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.