ಇಂದು ಪರಮ ಪವಿತ್ರವಾದ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ. ಮಹಿಳೆಯರಿಗೆ ಲಕ್ಷ್ಮೀ ವ್ರತ ಎಂದರೆ ಸಡಗರ ಸಂಭ್ರಮ. ಅದು ಸಮೃದ್ಧಿ ಮತ್ತು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯನ್ನು ಪೂಜಿಸುವ ಹಬ್ಬವೆಂದು ಹೇಳಲಾಗಿದೆ. ಈ ಹಬ್ಬವನ್ನು ಮುಖ್ಯವಾಗಿ ವಿವಾಹಿತ ಮಹಿಳೆಯರು ತಮ್ಮ ಕುಟುಂಬದ ಯೋಗಕ್ಷೇಮಕ್ಕಾಗಿ ಆಚರಿಸುತ್ತಾರೆ. ಲಕ್ಷ್ಮೀದೇವಿಯ ವರಲಕ್ಷ್ಮಿ ರೂಪವನ್ನು ಪೂಜಿಸುವುದರಿಂದ ತನ್ನ ಭಕ್ತರ ಎಲ್ಲಾ ಆಸೆಗಳನ್ನು ಪೂರೈಸುತ್ತಾಳೆ ಎಂಬುವುದು ನಂಬಿಕೆಯಾಗಿದೆ.
ಲಕ್ಷ್ಮೀ ಹಬ್ಬದಂದು ಮಹಿಳೆಯರು ಪಾಲಿಸಲೇಬೇಕಾದ ಮುಖ್ಯ ಕ್ರಮಗಳ ಬಗ್ಗೆ ನೋಡುವುದಾದರೆ…
ಹಬ್ಬದ ದಿನದಿಂದು ಮಹಿಳೆಯರು ಬೇಗನೆ ಎದ್ದು ಸ್ನಾನ ಇತ್ಯಾದಿ ಕರ್ಮಗಳನ್ನು ಮುಗಿಸಿದ ನಂತರ, ಉಪವಾಸ ವ್ರತವನ್ನು ಮಾಡಿ ಸಣ್ಣ ಉಕ್ಕಿನ ಬಿಂದಿಗೆ ಅಥವಾ ಬೆಳ್ಳಿ ಚೆಂಬನ್ನು ಕಲಶದ ರೂಪದಲ್ಲಿ ಇಟ್ಟು ಅದರಲ್ಲಿ ನೀರನ್ನು ತುಂಬಿಸಿ, ಬಳಿಕ ಆ ಚೊಂಬಿಗೆ ಸ್ವಲ್ಪ ಖರ್ಜೂರ ಹಾಗೂ ದ್ರಾಕ್ಷಿಯನ್ನು ಹಾಕಿದ ನಂತರ ತಟ್ಟೆಯಲ್ಲಿ ಅಕ್ಕಿಯನ್ನು ಹರಡಿ ಅದರಲ್ಲಿ ಕಲಶವನ್ನು ಇಟ್ಟು. ಮಾವಿನ ಎಲೆ ಹಾಗೂ ವೀಳ್ಯದೆಲೆಯನ್ನು ಕಲಶ ಸುತ್ತ ಜೋಡಿಸಿ, ಅದರ ಮೇಲೆ ಅರಶಿಣ ಹಚ್ಚಿದ ತೆಂಗಿನ ಕಾಯಿಯನ್ನು ಇಟ್ಟು ಅದಕ್ಕೆ ಸೀರೆಯನ್ನು ಉಡಿಸಿ ಒಡವೆಗಳನ್ನು ಹಾಕಿ ಅಲಂಕರಿಸಿ ಇಡಿ.
ಕೈ ಕಂಕಣವು ಮಂಗಳಕರ ಮತ್ತು ಪವಿತ್ರ ಸಂಕೇತ ಹಾಗೂ ಇದು ಪೂಜೆಯ ಒಂದು ಪ್ರಮುಖ ಭಾಗವಾಗಿದೆ. ಇದನ್ನು ಸಾಮಾನ್ಯವಾಗಿ ಅರಶಿಣ ಬಣ್ಣದ ದಾರದಿಂದ ತಯಾರಿಸಿ ಕೈ ಕಂಕಣವಾಗಿ ಕಟ್ಟಿಕೊಳ್ಳಲಾಗುತ್ತದೆ.
ದೇವರಿಗೆ ಪೂಜೆ ಸಲ್ಲಿಸುವ ಮುನ್ನ ಕೈಗೆ ಕಂಕಣ ಕಟ್ಟಿಕೊಂಡು ತಾಯಿ ಲಕ್ಷ್ಮೀಗೆ ಪೂಜೆ ಮಾಡುವುದು ಪದ್ಧತಿಯಾಗಿದೆ.
ಸಂಜೆಯ ಸಮಯದಲ್ಲಿ ದೇವಿಗೆ ಆರತಿಯನ್ನು ಮಾಡಿ, ಮರುದಿನ ಕಲಶದ ನೀರನ್ನು ಮನೆಯ ಸುತ್ತಲೂ ಚುಮುಕಿಸಬೇಕು. ಬಳಿಕ ಕಲಶದಲ್ಲಿದ್ದ ಅಕ್ಕಿ ಕಾಳುಗಳನ್ನು ಬಿಸಾಡದೆ ಆ ಅಕ್ಕಿಕಾಳುಗಳಿಂದ ಸಿಹಿಯನ್ನು ತಯಾರಿಸಿ ಮನೆಯ ಸದಸ್ಯರಿಗೆಲ್ಲ ಹಂಚುವುದರಿಂದ ಶ್ರೇಯಸ್ಸು ಎಂದು ಹೇಳುತ್ತಾರೆ ಹಿರಿಯರು. ಹಬ್ಬ ಎಂದರೆ ನೈವೇದ್ಯ ಇಟ್ಟು ಪೂಜೆ ಸಲ್ಲಿಸಿದರೆ ಅದು ಪರಿಪೂರ್ಣ ಎನಿಸಿಕೊಳ್ಳುವುದು.
ವರಲಕ್ಷ್ಮೀ ಹಬ್ಬಕ್ಕೆ ನೈವೇದ್ಯ ತಯಾರಿಸುವ ವಿಧಾನ
ದೇವಿಗೆ ಕಡಲೆಬೇಳೆ ಎಂದರೆ ಅಚ್ಚು ಮೆಚ್ಚು. ಆದ್ದರಿಂದ ಹಬ್ಬದ ದಿನ ಕಡಲೆಬೇಳೆಯಿಂದ ತಯಾರಿಸಿದ ಪಾಯಸ ಹೋಳಿಗೆ ಇತ್ಯಾದಿ ಸಿಹಿತಿನಿಸುಗಳನ್ನು ನೈವೇದ್ಯವಾಗಿ ಅರ್ಪಿಸಬಹುದು.
ಪೂಜೆ ಮಾಡುವ ವಿಧಾನ: ವ್ರತದ ನಿಯಮದ ಪ್ರಕಾರ ಪೂಜೆಯ ಸಿದ್ಧತೆಗಳೆಲ್ಲ ಆದ ನಂತರ ಮೊದಲು ವಿಘ್ನ ನಿವಾರಕ ಗಣಪತಿಯನ್ನು ಪೂಜಿಸಿ, ನಂತರ ವರಲಕ್ಷ್ಮಿಗೆ ಓಂ ಹೀಂ ಶ್ರೀ ಲಕ್ಷ್ಮೀಭ್ಯೋ ನಮಃ ಈ ಮಂತ್ರವನ್ನು 21 ಬಾರಿ ಪಠಿಸುವ ಮೂಲಕ ದೇವಿಗೆ ಪೂಜೆ ಸಲ್ಲಿಸಿ.
ಮನೆಗೆ ಮುತ್ತೈದೆಯರನ್ನು ಕರೆದು ಅರಶಿನ ಕುಂಕುಮ ಸಿಹಿ ಹಂಚುವುದರಿಂದ ಹಬ್ಬವನ್ನು ಇನ್ನಷ್ಟು ಸಂಭ್ರಮದಿಂದ ಆಚರಿಸಲು ಸಹಕಾರಿಯಾಗುತ್ತದೆ.
ಶಕ್ತಿಗೆ ಹಲವು ರೂಪಗಳು, ಹಲವು ನೆಲೆಗಳು. ವಿದ್ಯೆ, ಬುದ್ಧಿ, ಬಲ, ಬೆಳೆ – ಎಲ್ಲವೂ ಶಕ್ತಿಯ ರೂಪಗಳೇ. ಶಕ್ತಿಯನ್ನು ಮಾತೃಸ್ವರೂಪದಲ್ಲಿ ಪೂಜಿಸುತ್ತೇವೆ; ಅವಳ ನೆಲೆಯನ್ನು ಸಂಪತ್ತಿನ ಮೂಲಗಳಲ್ಲಿ ಕಾಣುತ್ತೇವೆ; ಎಲ್ಲ ಸಂಪತ್ತುಗಳ ಒಡತಿಯಾಗಿ ಅವಳನ್ನು ಲಕ್ಷ್ಮಿಯ ಸ್ವರೂಪದಲ್ಲಿ ಆರಾಧಿಸುತ್ತೇವೆ. ನಮ್ಮ ಜೀವನದ ಸುಖ–ನೆಮ್ಮದಿಗಳು ಈ ಸಂಪತ್ತುಗಳನ್ನು ಆಶ್ರಯಿಸಿರುವುದರಿಂದ ಅವಳಲ್ಲಿ ವರಗಳನ್ನು ಬೇಡುತ್ತೇವೆ. ಅಂತೆಯೇ ವರಮಹಾಲಕ್ಷ್ಮಿಯ ವ್ರತವನ್ನೂ ಆಚರಿಸುತ್ತೇವೆ.
ಲಕ್ಷ್ಮಿಯ ಕಲ್ಪನೆ ಬಹಳ ಪ್ರಾಚೀನವಾದುದು. ನಮಗೆ ಇಂದು ಲಕ್ಷ್ಮಿ ಎಂದರೆ ಕೇವಲ ದುಡ್ಡು, ಸಂಪತ್ತು – ಎಂದಷ್ಟೆ ಆಗಿದೆ. ಆದರೆ ನಮ್ಮ ಪೂರ್ವಜರು ಅವಳನ್ನು ಹಲವು ರೂಪಗಳಲ್ಲಿ ಸಾಕ್ಷಾತ್ಕರಿಸಿಕೊಂಡಿದ್ದಾರೆ. ಮನುಷ್ಯನ ಮೊದಲ ಸಂಪತ್ತು ಎಂದರೆ ಅದು ‘ಮಾತು’. ಹೀಗಾಗಿ ಮಾತನ್ನು ಕೂಡ ನಮ್ಮವರು ಲಕ್ಷ್ಮಿಯನ್ನಾಗಿಯೇ ಆರಾಧಿಸಿದ್ದಾರೆ. ಮಾತಿನ ಸಂಪತ್ತು ಮನುಷ್ಯನಿಗೆ ದಕ್ಕದೆ ಇದ್ದಿದ್ದರೆ ಆಗ ಅವನ ಜೀವನ ಹೇಗಿರುತ್ತಿತ್ತು ಎಂದು ಒಮ್ಮೆ ಊಹಿಸಿಕೊಂಡರೆ ತಿಳಿದೀತು, ಮಾತಿನ ಶಕ್ತಿ.
ವರಮಹಾಲಕ್ಷ್ಮಿಯನ್ನು ಪೂಜಿಸಲು ಸಂಪ್ರದಾಯದಲ್ಲಿ ನಿರ್ದಿಷ್ಟ ದಿನವನ್ನು ಆರಿಸಿಕೊಳ್ಳಲಾಗಿದೆ. ಹೀಗೆಂದು ವರ್ಷದಲ್ಲಿ ಒಂದು ದಿನ ಮಾತ್ರ ಅವಳನ್ನು ಪೂಜಿಸಬೇಕು ಎಂದು ಅರ್ಥವಲ್ಲ. ಪ್ರತಿದಿನದ ಪೂಜೆಯ ಸಾರ್ಥಕತೆ ಈ ದಿನದ ಆಚರಣೆಯಲ್ಲಿ ಅಭಿವ್ಯಕ್ತವಾಗಬೇಕು ಎಂಬುದು ಇದರ ಆಶಯ. ಶ್ರಾವಣಮಾಸದಲ್ಲಿ ಯಾವ ಶುಕ್ರವಾರವು ಹುಣ್ಣಿಮೆಗೆ ಸಮೀಪದಲ್ಲಿ ಇರುತ್ತದೆಯೋ ಅಂದು ವರಮಹಾಲಕ್ಷ್ಮಿಯ ವ್ರತವನ್ನು ಆಚರಿಸುವುದು ರೂಢಿ.
ವ್ರತಾಚರಣೆಗೆ ನಿರ್ದಿಷ್ಟ ವಿಧಿ–ವಿಧಾನಗಳು ಇವೆ. ಆದರೆ ಇವು ಕಾಲ–ದೇಶಗಳನ್ನು ಅವಲಂಬಿಸಿರುತ್ತವೆ. ಪೂಜೆಯನ್ನು ಹೀಗೇ ಮಾಡಬೇಕೆಂಬ ಹಟದಲ್ಲಿಯೋ ನೆಪದಲ್ಲಿಯೋ ಅದನ್ನು ಮಾಡದಿರುವುದಕ್ಕಿಂತಲೂ, ನಮಗೆ ಆ ಸಮಯಕ್ಕೆ ಸಿಕ್ಕುವ ದ್ರವ್ಯಗಳಿಂದ ಪೂಜೆಯನ್ನು ಮಾಡುವುದು ಬಹಳ ಮುಖ್ಯ. ಪೂಜೆಗೆ ಪ್ರಧಾನವಾಗಿ ಬೇಕಾಗಿರುವುದು ನಮ್ಮ ಶ್ರದ್ಧೆ. ಎಲ್ಲ ಇದ್ದೂ ಶ್ರದ್ಧೆ ಇಲ್ಲದಿದ್ದಾಗ ನಾವು ಪೂಜೆಯನ್ನು ಎಷ್ಟು ವೈಭವದಿಂದ ಮಾಡಿದರೂ ಅದು ವ್ಯರ್ಥವೇ ಆಗುತ್ತದೆ; ಅಂತೆಯೇ ಯಾವ ಸಲಕರಣೆ ಇಲ್ಲದಿದ್ದರೂ ಶ್ರದ್ಧೆಯಿಂದ ಮಹಾಲಕ್ಷ್ಮಿಗೆ ನಮಿಸುವುದೇ ವ್ರತಕ್ಕೆ ಸಮ ಎನಿಸಿಕೊಳ್ಳುತ್ತದೆ. ಆದುದರಿಂದ ವ್ರತಾಚರಣೆಗಳು ನಮ್ಮ ಸಂಪತ್ತಿನ ಪ್ರದರ್ಶನಕ್ಕೆ ವೇದಿಕೆಯಾಗದೆ, ಶ್ರದ್ಧಾ–ಭಕ್ತಿಗಳ ದರ್ಶನಕ್ಕೆ ಅಧಿಷ್ಠಾನವಾಗಬೇಕು.
ಸಾಮಾನ್ಯವಾಗಿ ಹೆಣ್ಣುಮಕ್ಕಳೇ ವರಮಹಾಲಕ್ಷ್ಮಿಯ ವ್ರತವನ್ನು ಆಚರಿಸುವುದು. ಹಬ್ಬದ ದಿನ ಪ್ರಾತಃಕಾಲದಲ್ಲಿಯೇ ಶುಚಿರ್ಭೂತರಾಗಿ ವ್ರತಾಚರಣೆಗೆ ಬೇಕಾದ ಎಲ್ಲ ವಸ್ತುಗಳನ್ನು ಸಿದ್ಧಮಾಡಿಕೊಳ್ಳಬೇಕು. ಕಳಶವನ್ನು ಸ್ಥಾಪಿಸಿ ದೇವಿಯನ್ನು ಆಹ್ವಾನಿಸಿ, ಪ್ರಾಣಪ್ರತಿಷ್ಠಾಪನೆಯನ್ನು ನೆರವೇರಿಸಿ, ವಿಧಿವತ್ತಾಗಿ ಪೂಜಾಕಲಪಗಳನ್ನು ನಡೆಸಬೇಕು. ಕಳಶಪೂಜೆಯ ಸಂಪ್ರದಾಯವಿಲ್ಲದವರು, ಮಹಾಲಕ್ಷ್ಮಿಯ ಪಟವನ್ನಿಟ್ಟೂ ಪೂಜಿಸಬಹುದು. ಆಚಾರ್ಯರ ನೆರವಿನಿಂದ ಪೂಜಾವಿಧಿಗಳನ್ನು ನೆರವೇರಿಸಬಹುದು; ಅಥವಾ ದೇವಿಯ ಸ್ತೋತ್ರಗಳನ್ನು ಪಠಿಸುತ್ತ, ಹಾಡುಗಳನ್ನು ಹಾಡುತ್ತಲೂ ಅವಳನ್ನು ಅರ್ಚಿಸಬಹುದು. ಗುರು–ಹಿರಿಯರ ಮಾರ್ಗದರ್ಶನಲ್ಲಿ ನೆರವೇರಿಸುವ ಪೂಜಾಕಲಾಪಗಳಿಗೆ ಹೆಚ್ಚಿನ ಕಳೆ ಒದಗುತ್ತದೆ; ಮನೆಯವರೆಲ್ಲರೂ ಒಂದಾಗಿ ಸೇರಿ ಆಚರಿಸುವ ಹಬ್ಬಕ್ಕೆ ಬಲ ಬರುತ್ತದೆ.
ಇಂದು ನಾವು ಎಲ್ಲ ಸಂಪತ್ತನ್ನೂ ಹಣದ ರೂಪದಲ್ಲಿಯೇ ಕಾಣುತ್ತಿದ್ದೇವೆ. ವಿವೇಕಲಕ್ಷ್ಮಿಯು ನಮಗೆ ಒಲಿಯದೆ, ದೂರ ಸರಿದಿರುವುದೇ ಇದಕ್ಕೆ ಕಾರಣ. ಹೀಗಾಗಿ ನಾವು ವರಮಹಾಲಕ್ಷ್ಮಿಯ ಹಬ್ಬದಂದು ದೇವಿಯನ್ನು ಕೇಳಿಕೊಳ್ಳುವ ವರಗಳಲ್ಲಿ ಬದಲಾವಣೆಯಾಗಬೇಕು. ಜೀವನದ ಸಮಗ್ರತೆಗೆ ಬೇಕಾದ ಎಲ್ಲ ಸಂಪತ್ತುಗಳನ್ನೂ ಅನುಗ್ರಹಿಸುವಂತೆ ಅವಳನ್ನು ಪ್ರಾರ್ಥಿಸಬೇಕು. ಐಶ್ವರ್ಯಲಕ್ಷ್ಮಿಗೂ ಮೊದಲು ವಿದ್ಯಾಲಕ್ಷ್ಮಿ, ವಿಜಯಲಕ್ಷ್ಮಿಗೂ ಮೊದಲು ಧೈರ್ಯಲಕ್ಷ್ಮಿಯ ಅನುಗ್ರಹವನ್ನು ಕೇಳಿಕೊಳ್ಳಬೇಕು. ಶ್ರೀಲಕ್ಷ್ಮಿ ಮತ್ತು ಮೋಕ್ಷಲಕ್ಷ್ಮಿಗಳಿಬ್ಬರೂ ಒಂದೇ ತತ್ತ್ವದ ಎರಡು ಸ್ವರೂಪಗಳು ಎಂಬ ಅರಿವಿನಿಂದ ಆಚರಿಸುವ ಹಬ್ಬಕ್ಕೆ ಆನಂದಲಕ್ಷ್ಮಿಯ ಅಭಯ ಇದ್ದೇ ಇರುತ್ತದೆ.