ನವೆಂಬರ್ 23 ಕ್ಕೆ ದೇವೋತ್ಥಾನ ಏಕಾದಶಿ. ಈ ಏಕಾದಶಿ ವ್ರತ ಬಹಳ ವಿಶೇಷವಾದದ್ದು. ಈ ಏಕಾದಶಿಯನ್ನು ದೇವ ಉತ್ಥಾನ ಏಕಾದಶಿ ಅಥವಾ ಪ್ರಬೋದಿನಿ ಏಕಾದಶಿಯೆಂದು ಆಚರಿಸಲಾಗುವುದು. ಪ್ರತಿಯೊಂದು ಏಕಾದಶಿಗೆ ಅದರದ್ದೇ ಆದ ಮಹತ್ವವಿದೆ, ಈ ಏಕಾದಶಿಯನ್ನು ದೇವೋತ್ಥಾನ ಏಕಾದಶಿ ಎಂದು ಕರೆಯಲಾಗುವುದು,
ಅಂದರೆ ಈ ದಿನ ವಿಷ್ಣು ನಿದ್ದೆಯಿಂದ ಎದ್ದೇಳುತ್ತಾನೆ ಎಂದು ಹೇಳಲಾಗುವುದು.
ಈ ಏಕಾದಶಿ ಆಚರಣೆ ಮಾಡುವುದರಿಂದ ದೊರೆಯುವ ಪ್ರಯೋಜನಗಳೇನು? ಪೂಜೆಗೆ ಶುಭ ಸಮಯ ಯಾವಾಗ ? ದೇವೋತ್ಥಾನ ಏಕಾದಶಿ ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ಪ್ರಬೋಧಿನಿ ಅಥವಾ ದೇವೋತ್ಥಾನ ಏಕಾದಶಿಯನ್ನು ಆಚರಿಸಲಾಗುವುದು. ಶ್ರೀ ವಿಷ್ಣುವು ಚಾತುರ್ಮಾಸದಲ್ಲಿ ದೀರ್ಘ ನಿದ್ದೆಯಲ್ಲಿರುತ್ತಾನೆ, ನಾಲ್ಕು ತಿಂಗಳು ನಿದ್ದೆ ಮಾಡುವ ಶ್ರೀ ವಿಷ್ಣುವು ಕಾರ್ತಿಕ ಏಕಾದಶಿಯಂದು ನಿದ್ದೆಯಿಂದ ಎಚ್ಚರಗೊಳ್ಳುತ್ತಾನೆ, ಆದ್ದರಿಂದ ಪ್ರಬೋಧಿನಿ ಏಕಾದಶಿಯನ್ನು ದೇವೋತ್ಥಾನ ಏಕಾದಶಿಯೆಂದು ಕರೆಯಲಾಗುವುದು. *ದೇವೋತ್ಥಾನ ಏಕಾದಶಿ ಪೂಜಾ ಸಮಯ* ಏಕಾದಶಿ ತಿಥಿ ಪ್ರಾರಂಭ: ನವೆಂಬರ್ 22 ರಾತ್ರಿ 11:03ಕ್ಕೆ ಏಕಾದಶಿ ತಿಥಿ ಮುಕ್ತಾಯ: ನವೆಂಬರ್ 23 ರಾತ್ರಿ 09:01ರವರೆಗೆ ಪಾರಣ ಸಮಯ : ನವೆಂಬರ್ 24 ಬೆಳಗ್ಗೆ 06:22 ರಿಂದ 08:40 ರವರೆಗೆ ಪಾರಣ ಸಮಯದಲ್ಲಿ ಏಕಾದಶಿ ವ್ರತದ ಉಪವಾಸವನ್ನು ಮುರಿಯಿರಿ. *ದೇವೋತ್ಥಾನ ಏಕಾದಶಿ ಆಚರಣೆ ಮಾಡುವುದರಿಂದ ದೊರೆಯುವ ಪ್ರಯೋಜನಗಳು* * ದೇವೋತ್ಥಾನ ಏಕಾದಶಿಯಂದು ಶ್ರೀ ವಿಷ್ಣುವನ್ನು ಆರಾಧನೆ ಮಾಡುವುದರಿಂದ ನಾವು ಬಹಳ ಶುಭ ಫಲ ಪಡೆಯುತ್ತೇವೆ.
* ಎಲ್ಲಾ ಉಪವಾಸಕ್ಕಿಂತ ಶ್ರೇಷ್ಠವಾದದ್ದು ದೇವೋತ್ಥಾನಿಯಂದು ಮಾಡುವ ಉಪವಾಸ ಎಂದು ಹೇಳಲಾಗುವುದು. * ಈ ದಿನ ತುಳಸಿ ವಿವಾಹ ಕೂಡ ಮಾಡಲಾಗುವುದು. * ಈ ದಿನ ಏಕಾದಶಿಯನ್ನು ಆಚರಣೆ ಮಾಡುವುದರಿಂದ ದಾಂಪತ್ಯ ಜೀವನ ಚೆನ್ನಾಗಿರುತ್ತದೆ ಎಂದು ಹೇಳಲಾಗುವುದು. * ಈ ಏಕಾದಶಿ ಆಚರಣೆ ಮಾಡುವುದರಿಂದ ಕಷ್ಟಗಳು ದೂರಾಗುವುದು. *ದೇವೋತ್ಥಾನ ಏಕಾದಶಿಯ ಪೌರಾಣಿಕ ಕತೆ* ಒಬ್ಬ ರಾಜನಿದ್ದ, ಅವನು ಏಕಾದಶಿ ವ್ರತವನ್ನು ತಪ್ಪದೇ ಮಾಡುತ್ತಿದ್ದ, ಅಲ್ಲದೇ ತನ್ನ ರಾಜ್ಯದಲ್ಲಿರುವ ಪ್ರಜೆಗಳೆಲ್ಲರೂ ಪಾಲಿಸಬೇಕೆಂದು ಆಜ್ಞೆ ನೀಡಿದ್ದ. ಈ ದಿನ ಪ್ರಾಣಿಗಳೂ ಕೂಡ ಉಪವಾಸದಿಂದ ಇರಬೇಕಿತ್ತು. ಹೀಗಿರುವಾಗ ಪಕ್ಕದ ರಾಜ್ಯದ ವ್ಯಕ್ತಿಯೊಬ್ಬ ಆ ರಾಜ್ಯಕ್ಕೆ ಬಂದು ಕೆಲಸ ಕೇಳುತ್ತಾನೆ, ರಾಜ ಅವನಿಗೂ ಏಕಾದಶಿಯ ವ್ರತದ ಬಗ್ಗೆ ತಿಳಸಿಪಾಲಿಸಲು ಹೇಳುತ್ತಾನೆ. ಅದರಂತೆ ಆತ ಭಕ್ತಿಯಿಂದ ಉಪವಾಸ ಮಾಡಿ, ಪಾರಣ ಸಮಯದಲ್ಲಿ ಊಟ ಮಾಡುವಾಗ ದೇವರನ್ನೂ ಊಟಕ್ಕೆ ಆಹ್ವಾನ ಮಾಡುತ್ತಾನೆ, ಅದರಂತೆ ದೇವರು ಬಂದು ಆಹಾರ ಸೇವಿಸುತ್ತಾನೆ. ಇದರಿಂದ ತುಂಬಾನೇ ಖುಷಿಯಾಗಿ ಇದನ್ನು ರಾಜನ ಬಳಿ ಹೇಳುತ್ತಾನೆ. ರಾಜ ಇದನ್ನು ನಂಬುವುದಿಲ್ಲ, ಆತನನ್ನು ಪರೀಕ್ಷೆ ಮಾಡಲು ರಾಜ ಮುಂದಾಗುತ್ತಾನೆ, ಆದರೆ ಆ ದೇವರು ಊಟ ಸೇವಿಸಲು ಬರುವುದಿಲ್ಲ, ಆಗ ಭಕ್ತನು ದೇವರು ನಾನು ಕರೆದರೂ ಬರಲಿಲ್ಲ ಎಂದು ಬೇಸರವಾಗಿ ನದಿಗೆ ಹಾರಲು ಮುಂದಾಗುತ್ತಾನೆ, ಆಗ ದೇವರು ಪ್ರತ್ಯಕ್ಷವಾಗಿ ಆ ಬಡ ಭಕ್ತನ ಜೊತೆ ಊಟ ಸೇವಿಸುತ್ತಾನೆ, ಆಗ ರಾಜನಿಗೆ ತನ್ನ ತಪ್ಪಿನ ಅರಿವು ಉಂಟಾಗುತ್ತೆ. ನಂತರ ಶುದ್ಧ ಮನಸ್ಸಿನಿಂದ ವಿಷ್ಣು ಪೂಜೆ ಮಾಡುತ್ತಾನೆ. ಆದ್ದರಿಂದ ಈ ದಿನ ಉಪವಾಸ ವ್ರತ ಮಾಡುವುದನ್ನು ಶುದ್ಧ ಮನಸ್ಸಿನಿಂದ ಮಾಡಬೇಕು. *ವ್ರತ ನಿಯಮಗಳು* * ಬೆಳಗ್ಗೆ ಬೇಗನೇ ಎದ್ದು ಸ್ನಾನ ಮಾಡಿ * ಪೂಜೆಗೆ ದೇವರಿಗೆ ಅಲಂಕರಿಸಿ * ನಂತರ ಸಂಕಲ್ಪ ತೆಗೆದುಕೊಳ್ಳಿ * ಇಡೀ ದಿನ ಶ್ರೀವಿಷ್ಣುವಿನ ಜಪ ಮಾಡಿ * ವಿಷ್ಣು ಸಹಸ್ರನಾಮ ಪಠಿಸಿ * ತುಳಸಿ ಪೂಜೆ ಮಾಡಿ. *ತುಳಸಿ ವಿವಾಹ ಪೂಜೆಗೆ ಶುಭ ಮುಹೂರ್ತ* ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ತಿಥಿ ನವೆಂಬರ್ 22 ರಂದು ರಾತ್ರಿ 11.03 ರಿಂದ ಪ್ರಾರಂಭವಾಗುವುದು ಏಕಾದಶಿ ತಿಥಿ ಮುಕ್ತಾಯ: ನವೆಂಬರ್ 23 ರಂದು ರಾತ್ರಿ 09.01 ಕ್ಕೆ ಕೊನೆಗೊಳ್ಳುತ್ತದೆ. ಏಕಾದಶಿ ದಿನಾಂಕದಂದು ರಾತ್ರಿ ಪೂಜೆಯ ಸಮಯವು ಸಂಜೆ 05.25 ರಿಂದ 08.46 ರವರೆಗೆ ಇರುತ್ತದೆ. *ತುಳಸಿ ವಿವಾಹದ ಪ್ರಯೋಜನ* * ತುಳಸಿ ವಿವಾಹವನ್ನು ಮಾಡುವುದರಿಂದ ವ್ಯಕ್ತಿ ಮೋಕ್ಷ ಪಡೆಯುತ್ತಾನೆ. * ಕನ್ಯಾದಾನದ ಫಲ ದೊರೆಯುವುದು. * ಮಕ್ಕಳ ಅಪೇಕ್ಷಿತ ದಂಪತಿಗೆ ಮಕ್ಕಳ ಭಾಗ್ಯ ದೊರೆಯುವುದು. * ತುಳಸಿ ಮತ್ತು ಶಾಲಿಗ್ರಾಮವನ್ನು ಸರಿಯಾಗಿ ಪೂಜಿಸುವುದರಿಂದ ಇಷ್ಟಾರ್ಥಗಳು ಈಡೇರುವುದು.