ಬೆಂಗಳೂರು : ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ರದ್ದುಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ರಿಟ್ ಅರ್ಜಿ ಗುರುವಾರ ಹೈಕೋರ್ಟ್ ಒಂಬತ್ತರಲ್ಲಿ ವಿಚಾರಣೆಗೆ ಬರಲಿದ್ದು, ಇಡೀ ರಾಜ್ಯದ ಗಮನ ಕಲಾಪದ ಮೇಲಿದೆ. ಒಟ್ಟಾರೆ ಈ ಪ್ರಕರಣ ಇದೀಗ ರಾಜ್ಯದ ಗಮನ ಸೆಳೆದಿದ್ದು ಸಂಚಲನಕ್ಕೆ ಕಾರಣವಾಗಿದೆ.
ರಾಜಕೀಯ ವಲಯದಲ್ಲಂತೂ ಈ ಬಗ್ಗೆ ಚರ್ಚೆಗಳು ಗಹನವಾಗಿ ಸಾಗಿವೆ. ಈ ವಿಚಾರಣೆಯ ಫಲಿತಾಂಶ ಏನಾಗಬಹುದು ಎಂಬ ತೀವ್ರ ಕುತೂಹಲ ರಾಜ್ಯ ಹಾಗೂ ರಾಷ್ಟ್ರ ರಾಜಕೀಯ ವಲಯದಲ್ಲಿದೆ. ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಗುರುವಾರವೇ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸುತ್ತದೆಯೇ ಅಥವಾ ವಾದ-ಪ್ರತಿ ವಾದ ಪೂರ್ಣಗೊಳ್ಳದೆ ಅರ್ಜಿ ವಿಚಾರಣೆ ಮುಂದೂಡಿಕೆ ಕಾಣುತ್ತದೆಯೇ ಎಂಬ ಕುತೂಹಲ ಮೂಡಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆಯಲ್ಲಿ ಆಗಿರುವ ಅಕ್ರಮಕ್ಕೆ ಸಂಬಂಧಿಸಿ ತನಿಖೆಗೆ ಅನುಮತಿ ನೀಡಿದ ರಾಜ್ಯಪಾಲರ ಆದೇಶವನ್ನು ವಜಾಗೊಳಿಸುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ಕುರಿತು ತೀರ್ಮಾನ ಗುರುವಾರ ಹೊರಬೀಳುವ ಸಂಭವ ಇದೆ.
ರಾಜಭವನದ ವಿರುದ್ಧ ವಿವಿಧ ಹಂತದ ಹೋರಾಟದ ಸರಣಿಯನ್ನು ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದೆ. ಡಿ.ಕೆ. ಶಿವಕುಮಾರ್ ವಿರುದ್ಧ ಸಿಬಿಐ ಸಲ್ಲಿಸಿರುವ ಅರ್ಜಿಯ ವಿಚಾರಣೆ ಪೂರ್ಣಗೊಂಡಿದ್ದು, ಕಾಯ್ದಿರಿಸಿದ ತೀರ್ಪು ಇಂದೇ ಪ್ರಕಟವಾಗಲಿದೆ. ಸರ್ಕಾರಕ್ಕೆ ಹೆಗಲುಕೊಟ್ಟಿರುವ ಇಬ್ಬರು ನಾಯಕರ ಕಾನೂನು
ಸಮರದ ನ್ಯಾಯ ಪರೀಕ್ಷೆ ಇಂದು ನಡೆಯಲಿದೆ.
ಹೀಗಾಗಿ, ಆಡಳಿತಾರೂಢ ಪಕ್ಷಕ್ಕೆ ಇಂದು ನಿರ್ಣಾಯಕ
ದಿನವಾಗಿದೆ.